ಬೆಂಗಳೂರು, ಜುಲೈ 4: ಬೆಂಗಳೂರಿನಲ್ಲಿ ತಡರಾತ್ರಿ ಸಂಶಯಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಬ್ಯಾಟರಾಯನಪುರ ಠಾಣೆ ಪೊಲೀಸರಿಗೆ ಭಾರಿ ಪ್ರಮಾಣದ ಆಯುಧ ಹಾಗೂ ಮೊಬೈಲ್ ಕಳ್ಳತನದ ಜಾಲವೊಂದು ಪತ್ತೆಯಾಗಿದೆ. ಬ್ಯಾಟರಾಯನಪುರ ಪೊಲೀಸರು ಖಚಿತ ಮಾಹಿತಿ ಮತ್ತು ಕಾರ್ಯಾಚರಣೆಯ ಮೇರೆಗೆ ಅಕ್ಬರ್ ಶರೀಫ್ ಎಂಬ ಖತರ್ನಾಕ್ ಡ್ರಗ್ ಪೆಡ್ಲರ್‌ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಸಿಕ್ಕ ಸಾಲು ಸಾಲು ಮಾರಕಾಸ್ತ್ರಗಳು ಮತ್ತು ನೂರಾರು ಮೊಬೈಲ್‌ಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.
ತಡರಾತ್ರಿ ಸಿಕ್ಕಿಬಿದ್ದ ‘ಕೊಳ್ಳಿ ದೆವ್ವ’
ಜುಲೈ 1 ರಂದು ರಾತ್ರಿ ಸುಮಾರು 10:50 ರ ಅವಧಿಯಲ್ಲಿ ಆರೋಪಿ ಅಕ್ಬರ್ ಶರೀಫ್ ಬೈಕ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈತನ ಚಲನವಲನ ಗಮನಿಸಿ ಅನುಮಾನಗೊಂಡ ಬ್ಯಾಟರಾಯನಪುರ ಪೊಲೀಸರು ತಕ್ಷಣ ಆತನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ. ಆತನ ಬೈಕ್ ಅನ್ನು ತಪಾಸಣೆ ನಡೆಸಿದಾಗ ಅದರಲ್ಲೇ ಐದಾರು ಮಾರಕಾಸ್ತ್ರಗಳು ಪತ್ತೆಯಾಗಿವೆ. ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಆರ್ಮ್ಸ್ ಆ್ಯಕ್ಟ್ (Arms Act) ಅಡಿ ಪ್ರಕರಣ ದಾಖಲಿಸಿಕೊಂಡು, ಆತನ ಮನೆಗೆ ತೆರಳಿ ತೀವ್ರ ಶೋಧ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿ ಅಡಗಿಸಿಟ್ಟಿದ್ದ 17 ವಿವಿಧ ಬಗೆಯ ಮಾರಕಾಸ್ತ್ರಗಳು, 230 ಆಂಡ್ರಾಯ್ಡ್ ಮೊಬೈಲ್ ಫೋನ್‌ಗಳು ಹಾಗೂ 700 ಗ್ರಾಂ ಗಾಂಜಾ ಪತ್ತೆಯಾಗಿದ್ದು, ಇವೆಲ್ಲವನ್ನೂ ಪೊಲೀಸರು ಜಪ್ತಿ ಮಾಡಿದ್ದಾರೆ.
ಡಿಸಿಪಿ ಯತೀಶ್ ಎನ್ ಸ್ಪಷ್ಟನೆ
ಈ ಕುರಿತು ಮಾಹಿತಿ ನೀಡಿರುವ ಪಶ್ಚಿಮ ವಿಭಾಗದ ಡಿಸಿಪಿ ಯತೀಶ್ ಎನ್ ಅವರು, ‘ಆರೋಪಿ ಅಕ್ಬರ್ ಶರೀಫ್ ಬ್ಯಾಟರಾಯನಪುರ ರೈಲ್ವೇ ಟ್ರ್ಯಾಕ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ. ಗಾಂಜಾ ಮಾರಾಟ ಮಾಡುವಾಗ ಯಾರಾದರೂ ಗಲಾಟೆ ಮಾಡಿದರೆ ತನ್ನ ರಕ್ಷಣೆಗಾಗಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿದ್ದಾನೆ. ಆದರೆ ಆತ ನೀಡಿದ ಉತ್ತರ ಸಮಂಜಸವಾಗಿಲ್ಲದ ಕಾರಣ ತನಿಖೆಯನ್ನು ತೀವ್ರಗೊಳಿಸಲಾಗಿದೆ. ಜೊತೆಗೆ ಆತನ ಬಳಿ ಸಿಕ್ಕಿರುವ 230 ಮೊಬೈಲ್‌ಗಳ ಜಾಲವನ್ನು ಭೇದಿಸಲು ಸಿಸಿಬಿ ನೆರವು ಪಡೆಯಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಈ ಮೊಬೈಲ್‌ಗಳು ಗಾಂಜಾ ಖರೀದಿಸಲು ಬರುತ್ತಿದ್ದವರು ಅಡವಿಟ್ಟಿದ್ದೇ ಅಥವಾ ಕಳ್ಳತನ ಮಾಡಿದ್ದೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ತಾಯಿಯಂತೆ ಮಗ!
ಈ ಪ್ರಕರಣದ ಮತ್ತೊಂದು ರೋಚಕ ಸಂಗತಿಯೆಂದರೆ, ಆರೋಪಿ ಅಕ್ಬರ್ ಶರೀಫ್‌ನ ತಾಯಿ ಮೆಹರ್ ಉನ್ನಿಸಾ ಕೂಡ ಹಳೇ ಗಾಂಜಾ ಪೆಡ್ಲರ್ ಆಗಿದ್ದಾಳೆ. 2024 ರಲ್ಲಿ ಇದೇ ಬ್ಯಾಟರಾಯನಪುರ ಪೊಲೀಸರು ಆಕೆಯನ್ನು ಬಂಧಿಸಿ, ಬರೋಬ್ಬರಿ 45 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಈಗ ತಾಯಿ ಜೈಲು ಸೇರಿದ ಬೆನ್ನಲ್ಲೇ ಮಗನೂ ಅದೇ ದಂಧೆಯನ್ನು ಮುಂದುವರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ತಾಯಿಯ ಹಾದಿಯಲ್ಲೇ ಮಗನೂ ಸಾಗಿರುವುದು ಈ ಬಂಧನದಿಂದ ಸಾಬೀತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ