ಬೆಂಗಳೂರು, ಜುಲೈ 15: ಕೃಷ್ಣ ಭೈರೇಗೌಡ ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ನಗರದಲ್ಲಿನ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಕ್ರಮಕ್ಕೆ ಮುಂದಾಗಿದ್ದು, ಈಗಾಗಲೇ ಫುಟ್ಪಾತ್ ಒತ್ತುವರಿ ತೆರವು, ಬಿಡಾಡಿ ವಾಹನಗಳ ಎತ್ತಂಗಡಿ ಸೇರಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಇವುಗಳ ಜೊತೆಗೀಗ ನಗರದಲ್ಲಿನ ಟ್ರಾಫಿಕ್ ಸಮಸ್ಯೆ ನಿವಾರಣೆ ನಿಟ್ಟಿನಲ್ಲೂ ಸಚಿವರು ಕಾರ್ಯಪ್ರವತ್ತರಾಗಿದ್ದು, ಸಿಗ್ನಲ್ಗಳಿಂದ 75 ಮೀಟರ್ ಒಳಗಿರುವ ಬಸ್ ನಿಲ್ದಾಣಗಳ ಸ್ಥಳಾಂತರಕ್ಕೆ ಸೂಚನೆ ನೀಡಿದ್ದಾರೆ.
ಉನ್ನತ ಮಟ್ಟದ ಸಭೆಯಲ್ಲಿ ನಿರ್ಧಾರ
ಇತ್ತೀಚೆಗೆ ಸಚಿವ ಕೃಷ್ಣಭೈರೇಗೌಡ ಅವರ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ನಗರದ ಟ್ರಾಫಿಕ್ ಸಮಸ್ಯೆಗೆ ಪ್ರಮುಖ ಪರಿಹಾರವಾಗಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ನಗರದ ಸಂಚಾರದಟ್ಟಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಟ್ರಾಫಿಕ್ ಸಿಗ್ನಲ್ಗಳಿಂದ 75 ಮೀಟರ್ ಒಳಗಿರುವ ಬಿಎಂಟಿಸಿಯ ಬಸ್ ನಿಲ್ದಾಣಗಳನ್ನು ಶಿಫ್ಟ್ ಮಾಡಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಬೆಂಗಳೂರು ಟ್ರಾಫಿಕ್ ಪೋಲಿಸರು ಅಲರ್ಟ್ ಆಗಿದ್ದು, ಅಂತಹ ನಿಲ್ದಾಣಗಳ ತೆರವಿಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಜಿಬಿಎ ಸ್ಟಿಕ್ಕರ್ ಭೀತಿಗೆ ಗಲ್ಲಿ ಸೇರಿದ ಕಾರುಗಳು; ಕುಮಾರಸ್ವಾಮಿ ಲೇಔಟ್‌ನಲ್ಲಿ ಅಕ್ರಮ ಪಾರ್ಕಿಂಗ್ ಹಾವಳಿ
ಅದಾಗಲೇ 27 ಬಸ್ ಸ್ಟ್ಯಾಂಡ್ಗಳ ಸ್ಥಳಾಂತರ
ಈ ಹಿಂದೆ 103 ಬಸ್ ನಿಲ್ದಾಣಗಳನ್ನು ಶಿಫ್ಟ್ ಮಾಡಲು ಬಿಎಂಟಿಸಿ ಮತ್ತು ಬೆಂಗಳೂರು ಟ್ರಾಫಿಕ್ ಪೋಲಿಸರು ಗುರುತಿಸಿದ್ದರು. ಈಗ ಅವುಗಳ ಸ್ಥಳಾಂತರ ವಿಚಾರಕ್ಕೆ ಮರುಜೀವ ಬಂದಿದ್ದು, ಅದಾಗಲೇ 27 ಬಸ್ ಸ್ಟ್ಯಾಂಡ್ಗಳ ಸ್ಥಳ ಬದಲಾಯಿಸಲಾಗಿದೆ. ಆದರೆ 76 ಬಸ್ ನಿಲ್ದಾಣಗಳ ಸ್ಥಳಾಂತರ ಇನ್ನೂ ಆಗಬೇಕಿರುವ ಕಾರಣ ಈ ಸಂಬಂಧ ಜಿಬಿಎಗೆ ಬೆಂಗಳೂರು ಟ್ರಾಫಿಕ್ ಪೋಲಿಸರು ಮತ್ತೊಮ್ಮೆ ಮನವಿ ಮಾಡಿದ್ದಾರೆ. ಆದರೆ ಇದಕ್ಕೆ ಜಿಬಿಎ ಅಧಿಕಾರಿಗಳು ಮೂರು ತಿಂಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಇನ್ನು ಜಿಬಿಎ ವ್ಯಾಪ್ತಿಗೆ ಬರದೇ ಇರುವ ಬಸ್ ಸ್ಟಾಂಡ್ಗಳನ್ನು ಸಹ ಗುರುತಿಸಲಾಗಿದ್ದು, ಅವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರಲಿವೆ. ಹೀಗಾಗಿ ಈ ಸಂಬಂಧ ಅವರಿಗೂ ಪತ್ರ ಬರೆಯಲು ಬೆಂಗಳೂರು ಟ್ರಾಫಿಕ್ ಪೋಲಿಸರು ನಿರ್ಧರಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.