ಬೆಂಗಳೂರು, ಮಾರ್ಚ್ 04: ಬಹುಕಾಲದ ನಿರೀಕ್ಷೆಯಾಗಿರುವ ಎಂ.ಜಿ. ರಸ್ತೆಯ ಮರು ಡಾಂಬರೀಕರಣ ಕಾಮಗಾರಿಯನ್ನು ಗುರುವಾರದಿಂದ ಆರಂಭಿಸಲು ಬೆಂಗಳೂರು ಸೆಂಟ್ರಲ್ ಸಿಟಿ ಕಾರ್ಪೊರೇಷನ್ ಸಜ್ಜಾಗಿದೆ. ಮೊದಲ ಹಂತದಲ್ಲಿ ಟ್ರಿನಿಟಿ ಸರ್ಕಲ್ನಿಂದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ವೃತ್ತದವರೆಗೆ 2.2 ಕಿಮೀ ಉದ್ದದ ರಸ್ತೆಯ ಮರು ಡಾಂಬರೀಕರಣ ನಡೆಯಲಿದೆ. ಮಾಹಿತಿಯ ಪ್ರಕಾರ, ಮಾರ್ಚ್ 4ರ ಸಂಜೆ (ಇಂದು) ಪೂರ್ವಸಿದ್ಧತಾ ಕಾಮಗಾರಿಗಳು ಆರಂಭವಾಗಲಿವೆ. ಟ್ರಾಫಿಕ್ ಪೊಲೀಸ್ ಅನುಮತಿ ಬಾಕಿ ಇರುವುದರಿಂದ ಸ್ವಲ್ಪ ವಿಳಂಬ ಸಾಧ್ಯತೆ ಇದೆ. ಹೀಗಿದ್ದರೂ 15 ದಿನಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ ಎನ್ನಲಾಗಿದೆ.
ಎಂ.ಜಿ. ರಸ್ತೆಗೆ ಮೊದಲು ವೈಟ್ ಟಾಪಿಂಗ್ ಮಾಡುವ ಬಗ್ಗೆ ಜಿಬಿಎ ಚಿಂತನೆ ನಡೆಸಿತ್ತು. ಆದರೆ ಈ ಕೆಲಸಗಳಿಗಾಗಿ ದೀರ್ಘಕಾಲ ರಸ್ತೆ ಬಂದ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿರುವ ಕಾರಣ ಟ್ರಾಫಿಕ್ ಪೊಲೀಸರು ಇದಕ್ಕೆ ಅನುಮತಿ ನಿರಾಕರಿಸಿದ್ದರು. ಮರು ಡಾಂಬರೀಕರಣ ಕಾಮಗಾರಿ ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ಶಾಂತಿನಗರ ವಿಧಾನಸಭಾ ಕ್ಷೇತ್ರಕ್ಕೆ ಮೀಸಲಾದ 25 ಕೋಟಿ ಮೊತ್ತದಲ್ಲಿ ನಡೆದಿದೆ. ಈ ಮೊತ್ತದಲ್ಲಿ ಎಂ.ಜಿ. ರೋಡ್ ಸೇರಿದಂತೆ ಏಳು ಪ್ರಮುಖ ರಸ್ತೆಗಳ ಮರು ಡಾಂಬರೀಕರಣಕ್ಕೆ ಯೋಜಿಸಲಾಗಿದೆ.
ಇದನ್ನೂ ಓದಿ: ಕೆಪಿಎಸ್ಸಿ ವಿರುದ್ಧ ಮತ್ತೆ ಅಕ್ರಮ ಆರೋಪ; ಧ್ವನಿ ಎತ್ತಿದ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್
ಬೆಂಗಳೂರು ವಿವಿ ರಸ್ತೆಯೂ ತಾತ್ಕಾಲಿಕವಾಗಿ ಕ್ಲೋಸ್
ರೈಲ್ವೆ ಸೇತುವೆಯ ಸ್ಟೀಲ್ ಗರ್ಡರ್ ಬದಲಾವಣೆ ಕಾಮಗಾರಿಯ ಹಿನ್ನೆಲೆ ಮೈಸೂರು ರಸ್ತೆಯಿಂದ ಜ್ಞಾನಭಾರತಿ ಕ್ಯಾಂಪಸ್ ಕಡೆಗೆ ಸಾಗುವ ಬೆಂಗಳೂರು ವಿಶ್ವವಿದ್ಯಾಲಯ ರಸ್ತೆ ಕ್ಲೋಸ್ ಆಗಲಿದೆ. ಬುಧವಾರ ಸಂಜೆ 6ರಿಂದ ಶುಕ್ರವಾರ ಮಧ್ಯಾಹ್ನ 12 ಗಂಟೆವರೆಗೆ ರಸ್ತೆ ಬಂದ್ ಇರಲಿದೆ ಎಂದು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಮಾರ್ಗ ಬದಲಾವಣೆ
- ಮೈಸೂರು ರಸ್ತೆಯಿಂದ ಬೆಂಗಳೂರು ವಿಶ್ವವಿದ್ಯಾಲಯ ಮತ್ತು ಉಳ್ಳಾಲ ರಿಂಗ್ ರೋಡ್ ಕಡೆಗೆ ಸಾಗುವ ವಾಹನಗಳು ಜ್ಞಾನಭಾರತಿ ಜಂಕ್ಷನ್ನಿಂದ ಬಲಕ್ಕೆ ತಿರುಗಿ ಜೈರಾಮದಾಸ್ ಜಂಕ್ಷನ್, ಮುತ್ತುರಾಯನಗರ–ಗವರ್ನ್ಮೆಂಟ್ ಪ್ರೆಸ್ ರಸ್ತೆ ಮೂಲಕ, ಬಿಪಿಇಡ್ ಮೈದಾನದ ಬಳಿ ಬಲಕ್ಕೆ ತಿರುಗಿ ಬೆಂಗಳೂರು ವಿಶ್ವವಿದ್ಯಾಲಯ ರಸ್ತೆಗೆ ಸಾಗಬೇಕು.
- ಉಳ್ಳಾಲ ಜಂಕ್ಷನ್ನಿಂದ ಬೆಂಗಳೂರು ವಿಶ್ವವಿದ್ಯಾಲಯ ಮೂಲಕ ಜ್ಞಾನಭಾರತಿ ಜಂಕ್ಷನ್ ಮತ್ತು ಮೈಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ಬೆಂಗಳೂರು ವಿಶ್ವವಿದ್ಯಾಲಯ ಮುಖ್ಯ ಕಚೇರಿ ವೃತ್ತದ ಬಳಿ ಎಡಕ್ಕೆ ತಿರುಗಿ ನಾಗರಭಾವಿ ಮುಖ್ಯ ರಸ್ತೆ ಮೂಲಕ ನಾಗರಭಾವಿ ರಿಂಗ್ ರೋಡ್ ಮಾರ್ಗವಾಗಿ ಮೈಸೂರು ರಸ್ತೆಗೆ ಸಾಗಬೇಕು.
- ಮರಿಯಪ್ಪನಪಾಳ್ಯ ಜಂಕ್ಷನ್ನಿಂದ ಬೆಂಗಳೂರು ವಿಶ್ವವಿದ್ಯಾಲಯ ಮೂಲಕ ಜ್ಞಾನಭಾರತಿ ಜಂಕ್ಷನ್ ಮತ್ತು ಮೈಸೂರು ರಸ್ತೆ ಕಡೆಗೆ ಸಾಗುವ ವಾಹನಗಳು ಬೆಂಗಳೂರು ವಿಶ್ವವಿದ್ಯಾಲಯ ಮುಖ್ಯ ರಸ್ತೆಯಲ್ಲಿ ಎಡಕ್ಕೆ ತಿರುಗಿ, ಮುಖ್ಯ ಕಚೇರಿ ವೃತ್ತದ ಬಳಿ ಬಲಕ್ಕೆ ತಿರುಗಿ ನಾಗರಭಾವಿ ಮುಖ್ಯ ರಸ್ತೆ–ರಿಂಗ್ ರೋಡ್ ಮೂಲಕ ಮೈಸೂರು ರಸ್ತೆಗೆ ತೆರಳಬೇಕು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 4:56 pm, Wed, 4 March 26