ಬೆಂಗಳೂರು, ಮೇ.5: ಸಿಲಿಕಾನ್ ಸಿಟಿಯಲ್ಲಿ ರೋಡ್ ರೇಜ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಸಾಮಾನ್ಯ ಜನರ ಮೇಲೆ ಮಾತ್ರವಲ್ಲದೆ, ಈಗ ಆಟೋ ಚಾಲಕರು ತಮ್ಮ ಸಹೋದ್ಯೋಗಿಗಳ ಮೇಲೆಯೇ ಗೂಂಡಾ ವರ್ತನೆ ತೋರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಆಟೋ ಟಚ್ ಆಗಿದೆ ಎಂಬ ಸಣ್ಣ ಕಾರಣಕ್ಕೆ ಶುರುವಾದ ಗಲಾಟೆ, ಆಟೋ ಗ್ಲಾಸ್ ಹೊಡೆಯುವ ಮಟ್ಟಕ್ಕೆ ತಲುಪಿದೆ. ರಸ್ತೆಯಲ್ಲಿ ಚಲಿಸುವಾಗ ಆಟೋ ಟಚ್ ಆಗಿದೆ ಎಂದು ಆರೋಪಿಸಿ ಮತ್ತೊಬ್ಬ ಆಟೋ ಚಾಲಕನ ಮೇಲೆ ಗೂಂಡಾ ವರ್ತನೆ ತೋರಲಾಗಿದೆ. ಇಲ್ಲಿ ಇನ್ನೊಂದು ಅಚ್ಚರಿ ಎಂದರೆ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ಇದ್ದರೂ ಯಾವುದಕ್ಕೂ ಕ್ಯಾರೆ ಎನ್ನದ ಆಟೋ ಚಾಲಕ, ಆಟೋವನ್ನು ತಡೆದು ರೌಡಿಸಂ ಪ್ರದರ್ಶಿಸಿದ್ದಾನೆ. ಸಿಟ್ಟಿನ ಭರದಲ್ಲಿ ಎದುರಾಳಿ ಆಟೋದ ಗ್ಲಾಸ್ ಅನ್ನು ಹೊಡೆದು ಹಾಕಿ, ಸ್ಥಳದಿಂದ ಆರೋಪಿ ಚಾಲಕ ಎಸ್ಕೇಪ್ ಆಗಿದ್ದಾನೆ. ಎರಡು ದಿನಗಳ ಹಿಂದೆ ನಡೆದ ಈ ಘಟನೆಯ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಟೋ ಚಾಲಕರ ಇಂತಹ ವರ್ತನೆಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಸಂಚಾರ ವ್ಯವಸ್ಥೆಯಲ್ಲಿ ಇಂತಹ ಪುಂಡಾಟಿಕೆಗಳು ಹೆಚ್ಚಾಗುತ್ತಿರುವುದು ಪ್ರಯಾಣಿಕರಲ್ಲಿ ಭಯವನ್ನು ಉಂಟುಮಾಡುತ್ತಿದೆ. ಪೊಲೀಸರು ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ವರದಿ: ನಟರಾಜ್ ಮೆಟ್ರೋ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ