Headlines

ಬೆಂಗಳೂರಿನಲ್ಲಿ ಒಂದೇ ಮಳೆಗೆ ಸಂಕಷ್ಟಗಳ ಪ್ರವಾಹ: ಅಧ್ವಾನಗಳ ಅಸಲಿ ರಹಸ್ಯ ಜಿಬಿಎ ವರದಿಯಲ್ಲಿ ಬಯಲು – Kannada News | Bengaluru Rain Fury: GBA Report Reveals Shocking Details of 10 Deaths and Massive Infrastructure Damage

ಬೆಂಗಳೂರಿನಲ್ಲಿ ಏಪ್ರಿಲ್ 29ರ ಸಂಜೆ ಸುರಿದ ಮಳೆImage Credit source: tv9

ಬೆಂಗಳೂರು, ಮೇ 1: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಏಪ್ರಿಲ್ 29 ರಂದು ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಮೃತ್ಯು ರೂಪಿಯಾಗಿ ಪರಿಣಮಿಸಿದೆ. ಒಂದೇ ಒಂದು ಮಳೆಗೆ ರಾಜಧಾನಿ ತತ್ತರಿಸಿ ಹೋಗಿದ್ದು, ಈ ಭೀಕರ ಮಳೆ ಒಟ್ಟು 10 ಜನರ ಪ್ರಾಣವನ್ನು ಬಲಿ ಪಡೆದಿದೆ. ನಗರದಲ್ಲಿ ಸಂಭವಿಸಿದ ಅಧ್ವಾನಗಳ ಕುರಿತು ಇದೀಗ ಜಿಬಿಎ (GBA) ವರದಿ ಸಲ್ಲಿಸಿದ್ದು, ಮಳೆ ಸೃಷ್ಟಿಸಿದ ಅವಾಂತರಗಳ ಸತ್ಯಾಂಶಗಳು ಈಗ ಬಯಲಾಗಿವೆ.

ಹತ್ತು ಜನರ ಬಲಿ ಪಡೆದ ಮಳೆ

ಬೆಂಗಳೂರಿನ ಇತಿಹಾಸದಲ್ಲೇ ಅತ್ಯಂತ ಘೋರ ಎನ್ನಲಾದ ಈ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ. ಇನ್ನು ಕೆ.ಜೆ.ಹಳ್ಳಿಯಲ್ಲಿ ಸುಫಿಯಾನ್ ಎಂಬ ಬಾಲಕ ವಿದ್ಯುತ್ ಕಂಬದಿಂದ ಶಾಕ್ ಹೊಡೆದು ಮೃತಪಟ್ಟರೆ, ಬನ್ನೇರುಘಟ್ಟ ರಸ್ತೆಯಲ್ಲಿ ರಘು ಎಂಬುವವರು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಕಸ್ತೂರ್ಬಾ ನಗರದಲ್ಲಿ ಸಿಮೆಂಟ್ ಶೀಟ್ ಬಿದ್ದು ಮಂಜು ಎಂಬಾತ ಉಸಿರು ಚೆಲ್ಲಿದ್ದಾನೆ.

ಬಿರುಗಾಳಿ ಮಳೆಗೆ 226 ಮರಗಳು

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಒಟ್ಟು 226 ಮರಗಳು ಧರೆಗುರುಳಿವೆ. ಒಂದಲ್ಲ ಎರಡಲ್ಲ ಬರೋಬ್ಬರಿ 623 ಕೊಂಬೆಗಳು ಮುರಿದು ಬಿದ್ದಿವೆ. ಹಲವರು ಗಾಯಗೊಂಡಿದ್ದು ಆಸ್ಪತ್ರೆ ಪಾಲಾಗಿದ್ದಾರೆ. ಇನ್ನು ಕೂಡ ರಸ್ತೆಗಪ್ಪಳಿಸಿರುವ ಹಲವು ಮರಗಳು, ರೆಂಬೆಕೊಂಬೆಗಳ ತೆರವು ಕಾರ್ಯ ಬಾಕಿ ಇದೆ.

186 ವಿದ್ಯುತ್ ಕಂಬಗಳು, 38 ಟ್ರಾನ್ಸ್​ಫಾರ್ಮರ್​ ಧರೆಗೆ

ಬಿರುಗಾಳಿ ಮಳೆಗೆ 186 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. 38 ಟ್ರಾನ್ಸ್​ಫಾರ್ಮರ್​ಗಳು ಧರೆಗಪ್ಪಳಿಸಿವೆ. ಹಲವು ಏರಿಯಾಗಳಲ್ಲಿ ಜನ ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮರ ಮತ್ತು ರೆಂಬೆ ಕೊಂಬೆಗಳು ಬಿದ್ದು 0.9 ಕಿಲೋ ಮೀಟರ್ ಉದ್ದದ ವಿದ್ಯುತ್ ತಂತಿ ಹಾನಿಯಾಗಿದೆ. ಒಂದೇ ಒಂದು ಮಳೆ ಅಧ್ವಾನದಿಂದ ಬೆಸ್ಕಾಂಗೆ 87.32 ಲಕ್ಷ ರೂ. ನಷ್ಟವಾಗಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲೇ 50.52 ಲಕ್ಷ ರೂಪಾಯಿ ಮೌಲ್ಯದ ವಿದ್ಯುತ್ ಕಂಬಗಳಿಗೆ ಹಾನಿಯಾಗಿವೆ. ಈಗಾಗಲೇ 112 ವಿದ್ಯುತ್ ಕಂಬಗಳು, 18 ಟ್ರಾನ್ಸ್‌ಫಾರ್ಮರ್‌ಗಳ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಬಿಎ ಹೇಳಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಮನೇಲಿದ್ದಾಗ್ಲೇ ಕಂಪೌಂಡ್ ಮೇಲೆ ಬಿದ್ದ ಮರದ ಕೊಂಬೆಗಳು, ಕಬ್ಬಿಣದ ವಾಲ್‌ಗಳು! ತಪ್ಪಿದ ಅನಾಹುತ

ನಗರದ 62ಕ್ಕೂ ಹೆಚ್ಚು ಪ್ರದೇಶಗಳ ರಸ್ತೆಗಳು ನದಿಗಳಂತಾಗಿದ್ದು, 105ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರು ಬೀದಿಗೆ ಬೀಳುವಂತಾಗಿದೆ. ಕೆ.ಆರ್. ವೃತ್ತ, ಮಡಿವಾಳ ಸೇರಿದಂತೆ ನಗರದ ಪ್ರಮುಖ ಅಂಡರ್‌ಪಾಸ್‌ಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಬೆಂಗಳೂರು ಕೇಂದ್ರ ಭಾಗದಲ್ಲಿ ಗರಿಷ್ಠ 92.00 ಮಿಲಿ ಮೀಟರ್ ಮಳೆ ದಾಖಲಾಗಿದ್ದು, ಮಳೆ ಹಾನಿ ತಡೆಯಲು ಎಸ್‌ಡಿಆರ್‌ಎಫ್ (SDRF) ಮತ್ತು ಅಗ್ನಿಶಾಮಕ ದಳದ ಹಲವು ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *