ಡಿಜಿಟಲ್ ಹೋರ್ಡಿಂಗ್ಸ್Image Credit source: tv9 kannada
ಬೆಂಗಳೂರು, ಜುಲೈ 15: ನಗರವನ್ನು ‘ಫ್ಲೆಕ್ಸ್ ಮುಕ್ತ’ ಮಾಡುವುದಾಗಿ ಹೊರಟಿರುವ ಬೆಂಗಳೂರು (bengaluru) ನಗರ ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡರಿಗೆ ಇದೀಗ ಅನಧಿಕೃತ ಡಿಜಿಟಲ್ ಹೋರ್ಡಿಂಗ್ಸ್ (illegal hoardings) ಹೊಸ ತಲೆನೋವಾಗಿ ಪರಿಣಮಿಸಿದೆ. ಸಿಲಿಕಾನ್ ಸಿಟಿಯಲ್ಲಿ ಹೊಸ ಜಾಹೀರಾತು ನೀತಿಯನ್ನು ಬಂಡವಾಳ ಮಾಡಿಕೊಂಡು ದೊಡ್ಡ ದಂಧೆಯೇ ಆರಂಭವಾಗಿದ್ದು, ನಿಯಮಗಳನ್ನು ಗಾಳಿಗೆ ತೂರಿ ರಸ್ತೆ ರಸ್ತೆಗಳಲ್ಲೂ ಅನಧಿಕೃತ ಡಿಜಿಟಲ್ ಸ್ಕ್ರೀನ್ಗಳು ತಲೆಎತ್ತುತ್ತಿವೆ. ತೆರಿಗೆ ಪಾವತಿಸಿ, ಲೈಸೆನ್ಸ್ ಪಡೆದು ಅಧಿಕೃತವಾಗಿ ಹೋರ್ಡಿಂಗ್ಸ್ ಅಳವಡಿಸಬೇಕು ಎಂಬ ನಿಯಮ ಕೇವಲ ಕಾಗದದ ಮೇಲಷ್ಟೇ ಉಳಿದಿದ್ದು, ಎಲ್ಲೆಂದರಲ್ಲಿ ಭಾರೀ ಗಾತ್ರದ ಡಿಜಿಟಲ್ ಬೋರ್ಡ್ಗಳು ರಾರಾಜಿಸುತ್ತಿವೆ.
ಜಿಬಿಎ ಬೊಕ್ಕಸಕ್ಕೆ ಕೋಟ್ಯಂತರ ರೂ ತೆರಿಗೆ ವಂಚನೆ
ನಗರದ ಪ್ರಮುಖ ರಸ್ತೆಗಳು, ಜಂಕ್ಷನ್ಗಳು ಹಾಗೂ ಫ್ಲೈ ಓವರ್ಗಳ ಪಕ್ಕದಲ್ಲಿ ತಲೆಎತ್ತಿರುವ ಈ ಡಿಜಿಟಲ್ ಹೋರ್ಡಿಂಗ್ಸ್ಗಳಲ್ಲಿ ಬಹುತೇಕ ಬೋರ್ಡ್ಗಳಿಗೆ ಯಾವುದೇ ಅಧಿಕೃತ ಅನುಮತಿ ಇಲ್ಲ. ಈ ಅಕ್ರಮ ದಂಧೆಯಿಂದಾಗಿ ಜಿಬಿಎ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆಯಾಗುತ್ತಿದೆ. ಇಷ್ಟೇ ಅಲ್ಲದೆ, ನಿಯಮಗಳ ಪ್ರಕಾರ ಹೆದ್ದಾರಿ ಹಾಗೂ ಪ್ರಮುಖ ಜಂಕ್ಷನ್ಗಳಲ್ಲಿ ವಾಹನ ಸವಾರರ ಗಮನ ಕದಡುವಂತಹ ಸ್ಕ್ರೀನ್ಗಳನ್ನು ಹಾಕುವಂತಿಲ್ಲ. ಆದರೆ, ರಾತ್ರಿ ವೇಳೆ ಕಣ್ಣು ಕೋರೈಸುವ ಈ ಸ್ಕ್ರೀನ್ಗಳಿಂದಾಗಿ ವಾಹನ ಸವಾರರು ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗುವ ಭೀತಿ ಎದುರಾಗಿದ್ದು, ಸಾರ್ವಜನಿಕರ ಪ್ರಾಣದ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ, ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವ ಹಾಗೂ ಪಾಲಿಕೆಗೆ ನಷ್ಟ ಉಂಟುಮಾಡುತ್ತಿರುವ ಈ ಅನಧಿಕೃತ ಹೋರ್ಡಿಂಗ್ಸ್ಗಳಿಗೆ ಬ್ರೇಕ್ ಹಾಕಲು ಜಿಬಿಎ ಅಧಿಕಾರಿಗಳು ಕಣಕ್ಕಿಳಿಯಲಿದ್ದಾರೆ. ಹೊಸ ನಿಯಮಾವಳಿಗಳ ಪ್ರಕಾರ ಅಧಿಕೃತ ಪರವಾನಗಿ ಪಡೆದು, ನಿಯಮಿತ ತೆರಿಗೆ ಪಾವತಿಸಿ ಮಾತ್ರ ಡಿಜಿಟಲ್ ಸ್ಕ್ರೀನ್ ಅಳವಡಿಸಬೇಕಾಗುತ್ತದೆ.
ಅಕ್ರಮ ಬೋರ್ಡ್ಗಳನ್ನು ಕಿತ್ತೆಸೆಯಲು ಮುಂದಾದ ಜಿಬಿಎ
ಇದನ್ನು ಮೀರಿ ರಾತ್ರೋರಾತ್ರಿ ತಲೆಎತ್ತುವ ಅಕ್ರಮ ಬೋರ್ಡ್ಗಳನ್ನು ಕಿತ್ತೆಸೆಯಲು ಪಾಲಿಕೆ ಸಜ್ಜಾಗುತ್ತಿದೆ. ಆದರೆ, ಅನಧಿಕೃತ ಹೋರ್ಡಿಂಗ್ಸ್ಗಳ ವಿರುದ್ಧ ಜಿಬಿಎ ಯುದ್ಧ ಸಾರುತ್ತಾ ಅಥವಾ ಹೊಸ ಅಡ್ವರ್ಟೈಸ್ಮೆಂಟ್ ಪಾಲಿಸಿಯ ಹೆಸರಲ್ಲಿ ಈ ದಂಧೆಗೆ ಮತ್ತಷ್ಟು ರಹದಾರಿ ಮಾಡಿಕೊಡುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಜಯನಗರದಲ್ಲಿ ಪೊಲೀಸರಿಂದಲೇ ನಿಯಮ ಉಲ್ಲಂಘನೆ: ಸೀಜ್ ವಾಹನಗಳಿಂದ ಅರ್ಧ ರಸ್ತೆ ಬ್ಲಾಕ್!
ರಸ್ತೆ ನಿಯಮ ಪಾಲಿಸುವಂತೆ ಸಾರ್ವಜನಿಕರಿಗೆ ಪಾಠ ಹೇಳುವ ಪೊಲೀಸರೇ ಜಯನಗರದಲ್ಲಿ ನಿಯಮ ಉಲ್ಲಂಘಿಸುತ್ತಿದ್ದಾರೆ. ಜಯನಗರದ ಪ್ರಮುಖ ರಸ್ತೆಯೊಂದರಲ್ಲಿ ಪೊಲೀಸರು ಸೀಜ್ ಮಾಡಿರುವ ನೂರಾರು ವಾಹನಗಳು ವರ್ಷಗಳಿಂದ ಧೂಳು ಹಿಡಿದು ರಸ್ತೆ ಬದಿಯಲ್ಲೇ ನಿಂತಿವೆ. ಇವುಗಳಿಂದಾಗಿ ಅರ್ಧ ರಸ್ತೆಯೇ ಆಕ್ರಮಣಗೊಂಡಿದ್ದು, ನಿತ್ಯ ವಾಹನ ಸಂಚಾರಕ್ಕೆ ತೀವ್ರ ಕಿರಿಕಿರಿ ಉಂಟಾಗಿದೆ.
ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬಿಡಾಡಿ ವಾಹನಗಳ ತೆರವು ಮಧ್ಯೆ ಪೊಲೀಸರಿಂದಲೇ ನಿಯಮ ಉಲ್ಲಂಘನೆ
ಒಂದು ಕಡೆ ರಸ್ತೆ ಬದಿಯಲ್ಲಿ ದೀರ್ಘಕಾಲ ನಿಲ್ಲಿಸುವ ಸಾಮಾನ್ಯರ ವಾಹನಗಳಿಗೆ ಪೊಲೀಸರು ಸ್ಟಿಕ್ಕರ್ ಅಂಟಿಸಿ ತೆರವುಗೊಳಿಸುತ್ತಿದ್ದಾರೆ. ಆದರೆ, ಇಲಾಖೆಯ ವಶದಲ್ಲಿರುವ ಸೀಜ್ ವಾಹನಗಳ ತೆರವಿಗೆ ಯಾವುದೇ ಕ್ರಮ ಕೈಗೊಂಡಿಲ್ಲ. “ಸಾಮಾನ್ಯರಿಗೊಂದು ನ್ಯಾಯ, ಸರ್ಕಾರಿ ಇಲಾಖೆಗೊಂದು ನ್ಯಾಯವೇ?” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ: ಅರುಣ್ ಕುಮಾರ್ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.