ಬೆಂಗಳೂರು, ಜೂನ್ 22: ನಕಲಿ ನಾಗಸಾಧುಗಳ ಸೋಗಿನಲ್ಲಿ ಬಂದ ವಂಚಕರು ಅಮಾಯಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಗರದ ಆರ್‌ಪಿಸಿ ಲೇಔಟ್ ನಿವಾಸಿ ಅರುಣ್ ಶ್ರೀಪಾದ್ ಎಂಬುವರು ಇಂತಹದೊಂದು ವಂಚನೆಗೆ ಒಳಗಾಗಿದ್ದಾರೆ. ಸಾಧುಗಳ ವೇಷದಲ್ಲಿದ್ದ ಕೆಲ ವ್ಯಕ್ತಿಗಳು ಅರುಣ್ ಶ್ರೀಪಾದ್ ಅವರ ಬಳಿ ತೆರಳಿ, ಕಾಶಿ ಮತ್ತು ಗಂಗಾ ಸ್ನಾನದ ಮಹತ್ವದ ಬಗ್ಗೆ ಮನವರಿಕೆ ಮಾಡಿದ್ದಾರೆ. ಧಾರ್ಮಿಕ ಚರ್ಚೆಗಳಲ್ಲಿ ತೊಡಗಿಸಿಕೊಂಡು, ಅವರ ನಂಬಿಕೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ, ಆಶೀರ್ವಾದ ಮಾಡುವ ಸೋಗಿನಲ್ಲಿ ಅರುಣ್ ಶ್ರೀಪಾದ್ ಅವರ ಕೈಲಿದ್ದ ಉಂಗುರವನ್ನು ಎಗರಿಸಿ ಕ್ಷಣ ಮಾತ್ರದಲ್ಲಿ ಕಣ್ಮರೆಯಾಗಿದ್ದಾರೆ. ವಂಚಕರು ಪರಾರಿಯಾದ ನಂತರವೂ, ಅರುಣ್ ಶ್ರೀಪಾದ್ಗೆ ತಮ್ಮ ಉಂಗುರ ಕಳುವಾಗಿರುವ ಬಗ್ಗೆ ತಕ್ಷಣವೇ ಅರಿವಾಗಿಲ್ಲ. ಮನೆಗೆ ತಲುಪಿದಾಗಷ್ಟೇ ಅವರು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಅವರು ವಿಜಯನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.