ಬೆಂಗಳೂರು, ಜುಲೈ 1: ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಬೆಂಗಳೂರು ನಗರದಾದ್ಯಂತ ಫುಟ್ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ. ಜಯನಗರದ ಅಶೋಕ ಪಿಲ್ಲರ್ ಸಮೀಪದಿಂದ ಬುಧವಾರ ಬೆಳಗ್ಗೆ ಕಾರ್ಯಾಚರಣೆ ಆರಂಭಗೊಂಡಿದ್ದು, ಅಂಗಡಿಗಳು ಮತ್ತು ಕಟ್ಟಡ ಕಾಮಗಾರಿಗೆ ಸಂಬಂಧಿಸಿದ ವಸ್ತುಗಳಿಂದ ಒತ್ತುವರಿ ಮಾಡಲಾಗಿದ್ದ ಫುಟ್ಪಾತ್ಗಳನ್ನು ತೆರವುಗೊಳಿಸಲಾಗುತ್ತಿದೆ.
ಬೆಳಗ್ಗೆ 9:30ಕ್ಕೆ ಶುರುವಾದ ಈ ಕಾರ್ಯಾಚರಣೆಗೆ ಜೆಸಿಬಿಗಳನ್ನು ಬಳಸಲಾಗುತ್ತಿದೆ. ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರ ಬೆಂಗಾವಲು ಸಹ ಒದಗಿಸಲಾಗಿದೆ. ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ 153 ರಲ್ಲಿ, ಅಶೋಕ ಪಿಲ್ಲರ್‌ನಿಂದ ಮಾಧವನ್ ಪಾರ್ಕ್‌ವರೆಗೆ ಈ ತೆರವು ನಡೆಯುತ್ತಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಿ, ಭವಿಷ್ಯದಲ್ಲಿ ಮತ್ತೆ ಒತ್ತುವರಿ ಮಾಡದಂತೆ ನಿಗಾ ವಹಿಸಲು ಜಿಬಿಎ ಎಚ್ಚರಿಕೆ ವಹಿಸುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ