ಬೆಂಗಳೂರು, ಜು. 6: “ಮಾನವನ ಜೀವ ರಸ್ತೆ ಬದಿಯ ಸ್ಟಂಟ್ಗಳಿಗಿಂತಲೂ ಅಗ್ಗವಾಗಿಬಿಟ್ಟಿದೆಯೇ?” – ಇಂತಹದ್ದೊಂದು ಗಂಭೀರ ಹಾಗೂ ಆತಂಕಕಾರಿ ಪ್ರಶ್ನೆ ಮೂಡುವಂತೆ ಮಾಡಿದೆ ಸಿಲಿಕಾನ್ ಸಿಟಿಯಲ್ಲಿ ನಡೆದಿರುವ ಪುಂಡರ ವೀಲಿಂಗ್ ಘಟನೆ. ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬ್ಯುಲೆನ್ಸ್ನ ಸೈರನ್ ಧ್ವನಿ ಜೋರಾಗಿ ಕೇಳಿಸುತ್ತಿದ್ದರೂ, ಅದಕ್ಕೆ ದಾರಿ ಬಿಡದೆ ರಸ್ತೆಯಲ್ಲೇ ಅಪಾಯಕಾರಿ ವೀಲಿಂಗ್ (Wheelies) ಪ್ರದರ್ಶನ ಮಾಡಿದ ಬೈಕ್ ಸವಾರರ ಅಮಾನವೀಯ ಕೃತ್ಯ ಸದ್ಯ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಡಿಯೋವನ್ನು @Karnataka Portfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಮಾಹಿತಿಯ ಪ್ರಕಾರ, ಈ ಘಟನೆಯು ಜುಲೈ 4 ರಂದು ನಡುರಾತ್ರಿ ಸುಮಾರು 2:30 ರ ಸುಮಾರಿಗೆ ಬೆಂಗಳೂರಿನ ಗೊರಗುಂಟೆಪಾಳ್ಯ ಮತ್ತು ಯಶವಂತಪುರ ನಡುವಿನ ಹೆದ್ದಾರಿ ರಸ್ತೆಯಲ್ಲಿ ಸಂಭವಿಸಿದೆ. ತುರ್ತು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ರೋಗಿಯೊಬ್ಬರನ್ನು ಹೊತ್ತು ವೇಗವಾಗಿ ಸಾಗುತ್ತಿತ್ತು. ಈ ವೇಳೆ ರಸ್ತೆಯಲ್ಲಿದ್ದ ಬೈಕ್ ಸವಾರರ ಗುಂಪೊಂದು, ತುರ್ತು ವಾಹನಕ್ಕೆ ಸೈಡ್ ಕೊಡುವುದನ್ನು ಬಿಟ್ಟು, ಅದರ ಮುಂಭಾಗದಲ್ಲೇ ಅಪಾಯಕಾರಿ ಸ್ಟಂಟ್ಗಳನ್ನು ಮುಂದುವರಿಸಿದೆ. ಇದು ಆಂಬ್ಯುಲೆನ್ಸ್ ಒಳಗಿದ್ದ ರೋಗಿಯ ಜೀವದ ಜೊತೆ ಮಾತ್ರವಲ್ಲದೆ, ಸ್ವತಃ ಆ ಪುಂಡರ ಜೀವಕ್ಕೂ ಆಪತ್ತು ತರುವಂತಿತ್ತು.
ವಿಡಿಯೋ ಇಲ್ಲಿದೆ ನೋಡಿ:
Has human life become less important than roadside stunts? A group of reckless bikers allegedly blocked an ambulance carrying a patient and continued performing dangerous wheelies despite the ambulance’s siren blaring, sparking widespread anger and raising serious questions about… pic.twitter.com/pIBGS5I5G9
— Karnataka Portfolio (@karnatakaportf) July 6, 2026
ಇಂತಹ ಬೇಜವಾಬ್ದಾರಿ ವರ್ತನೆ ಕೇವಲ ರಸ್ತೆ ನಿಯಮದ ಉಲ್ಲಂಘನೆಯಷ್ಟೇ ಅಲ್ಲ, ಕೊಲೆ ಯತ್ನಕ್ಕೆ ಸಮಾನವಾಗಿದೆ. ಆಂಬ್ಯುಲೆನ್ಸ್ನಂತಹ ತುರ್ತು ವಾಹನಗಳನ್ನು ತಡೆಯುವುದರಿಂದ ಜೀವ ಉಳಿಸುವ ಚಿಕಿತ್ಸೆ ವಿಳಂಬವಾಗಿ ರೋಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಸಾರ್ವಜನಿಕ ರಸ್ತೆಗಳು ಇಂತಹ ಸ್ಟಂಟ್ಗಳಿಗೆ ಇರುವ ಅಖಾಡಗಳಲ್ಲ. ಇಲ್ಲಿ ವೀಲಿಂಗ್ ಮಾಡುವುದರಿಂದ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೂ ಗಂಡಾಂತರ ಎದುರಾಗುತ್ತದೆ ಎಂದು ನೆಟ್ಟಿಗರು ಗರಂ ಆಗಿದ್ದಾರೆ.
ಇದನ್ನೂ ಓದಿ: ಆಷಾಢ ಆರಂಭದಲ್ಲೇ ಮಾಂಸಪ್ರಿಯರಿಗೆ ಶಾಕ್: ಚಿಕನ್, ಮೊಟ್ಟೆ ಬೆಲೆಯಲ್ಲಿ ದಾಖಲೆಯ ಏರಿಕೆ
ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬೆಂಗಳೂರು ಸಂಚಾರಿ ಪೊಲೀಸರು, ವೀಲಿಂಗ್ ಪುಂಡರನ್ನು ಪತ್ತೆಹಚ್ಚಲು ಆ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ತೀವ್ರವಾಗಿ ಜಾಲಾಡುತ್ತಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಬೈಕ್ ಸಂಖ್ಯೆಗಳನ್ನು ಪತ್ತೆಹಚ್ಚಿ, ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಎಫ್ಐಆರ್ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಯಾವುದೇ ಸಾಮಾಜಿಕ ಜಾಲತಾಣಗಳ ರೀಲ್ಸ್ ಹಪಾಹಪಿತನ ಅಥವಾ ಸಾಹಸದ ಮೋಜು ಮತ್ತೊಬ್ಬರ ಜೀವಕ್ಕಿಂತ ದೊಡ್ಡದಲ್ಲ ಎಂದು ಕಠಿಣ ಶಿಕ್ಷೆ ವಿಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ