ಬೆಂಗಳೂರು, ಜುಲೈ 01: ಜೂನ್ನಿಂದ ಆಗಸ್ಟ್ವರೆಗಿನ ಅವಧಿಯು ಹಾವುಗಳ (Snakes) ಸಂತಾನೋತ್ಪತ್ತಿ ಮತ್ತು ಮೊಟ್ಟೆಯೊಡೆದು ಮರಿ ಹೊರಬರುವ (Hatching Season) ಸಮಯವಾಗಿದೆ. ಈ ಸಮಯದಲ್ಲಿ ಮನೆಗಳ ಒಳಗೆ, ಸುತ್ತಮುತ್ತ ಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಹೀಗೆ ಬೆಂಗಳೂರಿನಲ್ಲೂ ಹಾವುಗಳ ಸಂತತಿ ಹೆಚ್ಚಾಗಿದ್ದು, ಉರಗ ರಕ್ಷಕರು ಪರದಾಡುವಂತಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ವಲಯಗಳಿಗೆ ಕೇವಲ 7 ಮಂದಿ ಉರಗ ರಕ್ಷಕರಿದ್ದು, ಸಾರ್ವಜನಿಕರಿಂದ ದಿನಕ್ಕೆ ಬರುವ 100ಕ್ಕೂ ಹೆಚ್ಚು ಕರೆಗಳಲ್ಲಿ (Rescue calls) ಕೇವಲ 10-15 ಕರೆಗಳಿಗೆ ಮಾತ್ರ ಸ್ಪಂದಿಸಲು ಸಾಧ್ಯವಾಗುತ್ತಿದೆ ಎಂದು ತಜ್ಞರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
5 ವಲಯಗಳಿಗೆ ಕೇವಲ 7 ರಕ್ಷಕರು: ಹೆಚ್ಚಿದ ಆತಂಕ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ವಲಯಗಳಿಗೆ (City Corporations) ಕೇವಲ 7 ಜನ ಹಾವು ರಕ್ಷಕರಿದ್ದಾರೆ. ನಿಯಮಾವಳಿಗಳ ಪ್ರಕಾರ ಪ್ರತಿ ವಲಯಕ್ಕೆ ಕನಿಷ್ಠ ನಾಲ್ಕು ಉರಗ ರಕ್ಷಕರಿರಬೇಕು. ಆದರೆ ಪ್ರಸ್ತುತ ಪಶ್ಚಿಮ ಮತ್ತು ದಕ್ಷಿಣ ವಲಯದಲ್ಲಿ ತಲಾ ಇಬ್ಬರು ಹಾಗೂ ಪೂರ್ವ, ಉತ್ತರ ಮತ್ತು ಕೇಂದ್ರ ವಲಯಗಳಲ್ಲಿ ತಲಾ ಒಬ್ಬರೇ ರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಒಬ್ಬ ರಕ್ಷಕ ದಿನಕ್ಕೆ ಗರಿಷ್ಠ 10 ರಿಂದ 15 ಕರೆಗಳನ್ನು ಮಾತ್ರ ನಿರ್ವಹಿಸಲು ಸಾಧ್ಯ. ಉಳಿದ 80ಕ್ಕೂ ಹೆಚ್ಚು ಕರೆಗಳಿಗೆ ಯಾರೂ ಹೋಗದ ಕಾರಣ, ಸಾರ್ವಜನಿಕರು ಭಯದಿಂದ ಹಾವುಗಳನ್ನು ಕೊಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹಿರಿಯ ವನ್ಯಜೀವಿ ವಾರ್ಡನ್ ಕಳವಳ ವ್ಯಕ್ತಪಡಿಸಿದ್ದಾರೆ.
ವಿಷಪೂರಿತ ಹಾವುಗಳ ಭೀತಿ
ನಗರದಲ್ಲಿ ನಾಗರಹಾವು (Spectacled Cobra), ಕಟ್ಟುಹಾವು (Common Krait) ಮತ್ತು ಮಂಡಲದ ಹಾವುಗಳು (Russell’s Viper) ಹೆಚ್ಚಾಗಿ ಕಂಡುಬರುತ್ತಿದ್ದು, ಇವು ತೀರಾ ವಿಷಪೂರಿತವಾಗಿವೆ. ಹೊಸದಾಗಿ ಹುಟ್ಟಿದ ನಾಗರಹಾವಿನ ಸಣ್ಣ ಮರಿಯ ವಿಷವೂ ಸಹ ಕನಿಷ್ಠ 10 ಜನರನ್ನು ಕೊಲ್ಲುವಷ್ಟು ತೀವ್ರವಾಗಿರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇದನ್ನೂ ಓದಿ ರಸ್ತೆ ಅಪಘಾತ ಮತ್ತು ಅತಿ ವೇಗ ಚಾಲನೆಯಲ್ಲಿ ಇಡೀ ದೇಶದಲ್ಲೇ ಬೆಂಗಳೂರಿಗೆ ಮೊದಲ ಸ್ಥಾನ!
ಮತ್ತೊಂದೆಡೆ, ನಿರಂತರವಾಗಿ ಜೀವದ ಹಂಗು ತೊರೆದು ಕೆಲಸ ಮಾಡುವ ಜಿಬಿಎ ವನ್ಯಜೀವಿ ರಕ್ಷಕರಿಗೆ ಕಳೆದ 6 ತಿಂಗಳಿನಿಂದ 18,000 ರೂಪಾಯಿಗಳ ಗೌರವಧನ ಪಾವತಿಯಾಗಿಲ್ಲ. ಗೌರವಧನವನ್ನು 35,000 ರೂಪಾಯಿಗೆ ಹೆಚ್ಚಿಸುವಂತೆ ಸಲ್ಲಿಕೆಯಾಗಿರುವ ಪ್ರಸ್ತಾವನೆಯೂ ಧೂಳು ಹಿಡಿಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ