ಉನ್ನತ ಮಟ್ಟದ ಸಮಿತಿಗೆ ವಿಪಕ್ಷ ನಾಯಕ ಆರ್. ಅಶೋಕ್ ವಿಶೇಷ ಮನವಿImage Credit source: PTI
ಬೆಂಗಳೂರು, ಜೂನ್ 14: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬೆಂಗಳೂರಿನ ಘನತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 39,437 ಕೋಟಿ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ವಿಪಕ್ಷ ನಾಯಕ ಆರ್. ಅಶೋಕ್ ವಿಶೇಷ ಮನವಿಯನ್ನು ಮಾಡಿದ್ದಾರೆ. ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸಿ ಎಂದು ಆಗ್ರಹಿಸಿರುವ ಅವರು, ಇದು ಕೇವಲ ಒಂದು ಟೆಂಡರ್ ವಿಚಾರವಲ್ಲ. ಬೆಂಗಳೂರಿನ ಭವಿಷ್ಯ, ತೆರಿಗೆದಾರರ ಹಣ ಮತ್ತು ಸಾರ್ವಜನಿಕ ವಿಶ್ವಾಸದ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.
ಅಶೋಕ್ ಮನವಿಯಲ್ಲಿ ಏನಿದೆ?
₹39,437 ಕೋಟಿ ಮೊತ್ತದ ಘನತ್ಯಾಜ್ಯ ನಿರ್ವಹಣಾ ಟೆಂಡರ್ ಕುರಿತು ಪರಿಶೀಲನೆ ನಡೆಸುತ್ತಿರುವ ಉನ್ನತ ಮಟ್ಟದ ಸಮಿತಿಗೆ ಪತ್ರ ಬರೆದು ಒಂದು ಸ್ಪಷ್ಟ ಮನವಿಯನ್ನು ಮಾಡಿದ್ದೇನೆ.
ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಬಾಹ್ಯ ಒತ್ತಡಗಳಿಗೆ ಮಣಿಯದೆ, ಆತ್ಮಸಾಕ್ಷಿ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿ ವರದಿ ಸಲ್ಲಿಸಿ ಎಂದು ಕೋರಿದ್ದೇನೆ.… pic.twitter.com/enhIFFcCWi
— R. Ashoka (@RAshokaBJP) June 14, 2026
ಬೆಂಗಳೂರಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ವಿಷಯವನ್ನು ಪರಿಶೀಲಿಸಲು ರಾಜ್ಯ ಸರ್ಕಾರ ನಿಮ್ಮನ್ನು ಉನ್ನತ ಮಟ್ಟದ ಸಮಿತಿಗೆ ನೇಮಿಸಿದೆ. ನೀವು ಕೇವಲ ಈ ಸಮಿತಿಯ ಸದಸ್ಯರಲ್ಲ. ನೀವು ಈ ನಗರದ ನಾಗರಿಕರು, ತೆರಿಗೆ ಪಾವತಿಸುವವರು, ಬೆಂಗಳೂರಿನ ಪ್ರಗತಿಯ ಪಾಲುದಾರರು ಮತ್ತು ಹಕ್ಕುದಾರರು. ನಿಮ್ಮ ಕುಟುಂಬಗಳು ಮತ್ತು ಮಕ್ಕಳ ಭವಿಷ್ಯವೂ ಇದೇ ನಗರದ ಭವಿಷ್ಯದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ, ನಿಮ್ಮ ಮುಂದೆ ಇರುವ ಪ್ರಶ್ನೆ ಕೇವಲ ಒಂದು ಟೆಂಡರ್ ಕಡತದ ಪ್ರಶ್ನೆಯಲ್ಲ. ಮುಂದಿನ ಮೂರು ದಶಕಗಳ ಕಾಲ ಬೆಂಗಳೂರಿನ ಜನರ ಹಣ, ನಗರದ ಆಡಳಿತ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಭವಿಷ್ಯವನ್ನು ನಿರ್ಧರಿಸುವ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಬೆಂಗಳೂರು ಕಸದಲ್ಲಿ 36 ಸಾವಿರ ಕೋಟಿ ರೂ. ಲೂಟಿ ಆರೋಪ; ಬಿಜೆಪಿಗೆ ಡಿಕೆಶಿ ಓಪನ್ ಚಾಲೆಂಜ್
ರಾಜ್ಯದ ಹಣಕಾಸು ಇಲಾಖೆಯೇ ಈ ಟೆಂಡರ್ ಕುರಿತು ಗಂಭೀರ ಆಕ್ಷೇಪಣೆಗಳನ್ನು ದಾಖಲಿಸಿದೆ. ಈಗಾಗಲೇ ಬೆಂಗಳೂರು ನಗರದ ಜನರು ಆಸ್ತಿ ತೆರಿಗೆ, ವಿವಿಧ ಸೆಸ್‌ಗಳು, ಬಳಕೆದಾರರ ಶುಲ್ಕಗಳು ಹಾಗೂ ಇತರೆ ತೆರಿಗೆಗಳ ಭಾರವನ್ನು ಹೊರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಹಣದ ಸಾವಿರಾರು ಕೋಟಿ ರೂಪಾಯಿಗಳ ಬಳಕೆಯ ಬಗ್ಗೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ಅತ್ಯಂತ ಜವಾಬ್ದಾರಿಯುತವಾಗಿರಬೇಕು. ನಿಮ್ಮ ಸಮಿತಿಯ ವರದಿ ಕೇವಲ ಸರ್ಕಾರಕ್ಕೆ ಸಲ್ಲಿಸುವ ಒಂದು ದಾಖಲೆಯಾಗಿರುವುದಿಲ್ಲ; ಅದು ಮುಂದಿನ ಪೀಳಿಗೆಗಳ ಮೇಲೂ ಪರಿಣಾಮ ಬೀರುವ ನಿರ್ಧಾರದ ಅಡಿಪಾಯವಾಗಲಿದೆ. ಆದ್ದರಿಂದ ಯಾವುದೇ ರಾಜಕೀಯ, ಆಡಳಿತಾತ್ಮಕ ಅಥವಾ ಇತರ ಒತ್ತಡಗಳಿಗೆ ಮಣಿಯದೆ, ನಿಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ, ಸಾರ್ವಜನಿಕ ಹಿತಾಸಕ್ತಿಯನ್ನು ಮಾತ್ರ ಮಾನದಂಡವನ್ನಾಗಿಸಿಕೊಂಡು ಸಂಪೂರ್ಣ ಪಾರದರ್ಶಕ, ಪ್ರಾಮಾಣಿಕ ಹಾಗೂ ನಿರ್ಭೀತ ವರದಿಯನ್ನು ಸಲ್ಲಿಸುವಂತೆ ವಿನಂತಸೋದಾಗಿ ಮನವಿಯಲ್ಲಿ ಅಶೋಕ್ ಉಲ್ಲೇಖಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.