Headlines

ಬೆಂಗಳೂರಿನ ವಾಹನ ಸವಾರರಿಗೆ ಬಿಗ್ ಶಾಕ್: ಉಚಿತ ಪಾರ್ಕಿಂಗ್‌ಗೆ ಬ್ರೇಕ್, ಶುಲ್ಕ ಫಿಕ್ಸ್ – Kannada News | Vehicle Parking On Bengaluru Roads Could Cost Car Owners Up To Rs 25,000 Annually Under Draft Policy

ಬೆಂಗಳೂರು, (ಆಗಸ್ಟ್ 13): ನಗರದ ವಾಹನ ಸವಾರರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೊಸ ಪಾರ್ಕಿಂಗ್ ನೀತಿ (New Parking Rules)ಜಾರಿಗೆ ತರಲು ಮುಂದಾಗಿದೆ. ಪುಗ್ಸಟ್ಟೆ ಪಾರ್ಕಿಂಗ್‌ ವ್ಯವಸ್ಥೆಗೆ ಬ್ರೇಕ್‌ ಹಾಕಲು ಹೊಸ ಪಾರ್ಕಿಂಗ್ ನೀತಿಗೆ ಸರ್ಕಾರ ಇಂದು (ಆಗಸ್ಟ್ 13) ಕರಡು ಅಧಿಸೂಚನೆ ಹೊರಡಿಸಿದ್ದು, ಹೊಸ ನೀತಿಯಡಿ ರಸ್ತೆಗಳನ್ನು ಮೂರು ಮಾದರಿಗಳಾಗಿ ವಿಂಗಡಿಸಿ, ಅದಕ್ಕೆ ಅನುಗುಣವಾಗಿ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲು ನಿರ್ಧರಿಸಲಾಗಿದೆ. ವಾಹನಗಳಿಗೆ ಆಫ್-ಸ್ಟ್ರೀಟ್ ಪಾರ್ಕಿಂಗ್, ಆನ್-ಸ್ಟ್ರೀಟ್ ಪಾರ್ಕಿಂಗ್ ಹಾಗೂ ಮಾಸಿಕ ಪಾರ್ಕಿಂಗ್ ಪಾಸ್ ವ್ಯವಸ್ಥೆ ಜಾರಿಗೆ ಬರಲಿದೆ. ಯಾವ ವಾಹನಗಳಿಗೆ ಎಷ್ಟು ಶುಲ್ಕ ವಿಧಿಸಬೇಕು ಎಂಬುದರ ಕುರಿತು ಕರಡು ಅಧಿಸೂಚನೆಯಲ್ಲಿ ವಿವರಿಸಲಾಗಿದ್ದು, ಅದು ಈ ಕೆಳಗಿನಂತಿದೆ.

ರಸ್ತೆಗಳ ವರ್ಗೀಕರಣ ಮತ್ತು ಪಾರ್ಕಿಂಗ್ ಮಾದರಿಗಳು

ಹೊಸ ನಿಯಮಾವಳಿಗಳ ಪ್ರಕಾರ ನಗರದ ರಸ್ತೆಗಳನ್ನು A, B, ಹಾಗೂ C ಎಂದು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ. ಇದರ ಜೊತೆಗೆ ‘ಆನ್-ಸ್ಟ್ರೀಟ್’ (ರಸ್ತೆ ಬದಿ), ‘ಆಫ್-ಸ್ಟ್ರೀಟ್’ (ನಿಗದಿತ ಪಾರ್ಕಿಂಗ್ ತಾಣ) ಮತ್ತು ‘ಮಾಸಿಕ ಪಾಸ್’ ಎಂಬ ಮೂರು ರೀತಿಯ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ.

ಆನ್-ಸ್ಟ್ರೀಟ್ ಪಾರ್ಕಿಂಗ್ ದರ (ಪ್ರತಿ ಗಂಟೆಗೆ):

  • A ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ ₹40, ಲಘು ವಾಹನಗಳಿಗೆ (ಕಾರ್ ಇತ್ಯಾದಿ) 80 ರೂಪಾಯಿ.
  • B ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ ₹30, ಲಘು ವಾಹನಗಳಿಗೆ 60 ರೂ.
  • C ವರ್ಗದ ರಸ್ತೆಗಳು: ದ್ವಿಚಕ್ರ ವಾಹನಗಳಿಗೆ ₹20, ಲಘು ವಾಹನಗಳಿಗೆ 40 ರಿಂದ 60 ರೂ.

ಆಫ್-ಸ್ಟ್ರೀಟ್ ಪಾರ್ಕಿಂಗ್ ದರ (ಪ್ರತಿ ಗಂಟೆಗೆ):

  • A ವರ್ಗ: ದ್ವಿಚಕ್ರ ವಾಹನ – ₹20 | ಲಘು ವಾಹನ – 40 ರೂ.
  • B ವರ್ಗ: ದ್ವಿಚಕ್ರ ವಾಹನ – ₹15 | ಲಘು ವಾಹನ – 30 ರೂ.
  • C ವರ್ಗ: ದ್ವಿಚಕ್ರ ವಾಹನ – ₹10 | ಲಘು ವಾಹನ – 20 ರೂ.

ಮಾಸಿಕ ಆಫ್-ಸ್ಟ್ರೀಟ್ ಪಾಸ್ ದರಗಳು:

  • A ವರ್ಗ: ದ್ವಿಚಕ್ರ ವಾಹನಕ್ಕೆ ₹2,000 ಹಾಗೂ ಲಘು ವಾಹನಗಳಿಗೆ 40,000.
  • B ವರ್ಗ: ದ್ವಿಚಕ್ರ ವಾಹನಕ್ಕೆ ₹1,500 ಹಾಗೂ ಲಘು ವಾಹನಗಳಿಗೆ3,000.
  • C ವರ್ಗ: ದ್ವಿಚಕ್ರ ವಾಹನಕ್ಕೆ ₹1,000 ಹಾಗೂ ಲಘು ವಾಹನಗಳಿಗೆ 2,000.

ಈ ಜಾಗಗಳಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧ!

ಸಂಚಾರಕ್ಕೆ ಅಡಚಣೆ ಉಂಟಾಗದಂತೆ ತಡೆಯಲು ಕೆಲವು ಸೂಕ್ಷ್ಮ ವಲಯಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ/ನಿಷೇಧಿಸಲಾಗಿದೆ:

  • ಮೆಟ್ರೋ ಹಾಗೂ ಪ್ರಮುಖ ಬಸ್ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶ.
  • ಆರ್ಟಿರಿಯಲ್ (ಮುಖ್ಯ ಸಂಪರ್ಕ) ರಸ್ತೆಗಳು.
  • ಟ್ರಾಫಿಕ್ ಸಿಗ್ನಲ್‌ಗಳಿಂದ 50 ಮೀಟರ್ ವ್ಯಾಪ್ತಿಯೊಳಗೆ.
  • ಉಪಮುಖ್ಯ ರಸ್ತೆಗಳ ಜಂಕ್ಷನ್‌ಗಳಿಂದ 25 ಮೀಟರ್ ಅಂತರದವರೆಗೆ.
  • ರಾತ್ರಿ ಪಾರ್ಕಿಂಗ್ & ಮಾಲೀಕರಿಗಷ್ಟೇ ವಿನಾಯಿತಿ/ದಂಡದ ನಿಯಮ

ರಾತ್ರಿ ಪಾರ್ಕಿಂಗ್: ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಕೆಲವು ಆಯ್ದ ಸ್ಥಳಗಳಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಲಾಗುವುದು.

ಸೈಕಲ್ ಹಾಗೂ ಆಟೋಗಳಿಗೆ ವಿನಾಯಿತಿ: ಸೈಕಲ್ ನಿಲುಗಡೆಗೆ ಹಾಗೂ ನಿಗದಿತ ಆಟೋ ನಿಲ್ದಾಣಗಳಲ್ಲಿ ವಾಹನ ನಿಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.

ಮನೆ ಮಾಲೀಕರ ಹೊಣೆಗಾರಿಕೆ

ಬಾಡಿಗೆದಾರರಿಗೆ ಪಾರ್ಕಿಂಗ್ ಜಾಗ ಒದಗಿಸುವುದು ಮನೆ ಮಾಲೀಕರ ಕರ್ತವ್ಯ. ರಸ್ತೆ ಬದಿ ಅಥವಾ ಮನೆ ಮುಂದೆ ವಾಹನ ನಿಲ್ಲಿಸಿದರೆ ಅದರ ಶುಲ್ಕ ಅಥವಾ ದಂಡದ ಜವಾಬ್ದಾರಿಯನ್ನು ಮಾಲೀಕರೇ ಹೊರಬೇಕಾಗುತ್ತದೆ.

ಖಾಲಿ ನಿವೇಶನ ಮಾಲೀಕರಿಗೆ ಆಸ್ತಿ ತೆರಿಗೆ ವಿನಾಯಿತಿ!

ನಗರದಲ್ಲಿ ಪಾರ್ಕಿಂಗ್ ಅಭಾವ ನೀಗಿಸಲು ಸರ್ಕಾರಿ ಸಂಸ್ಥೆಗಳ ಖಾಲಿ ಜಾಗಗಳನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಸಾಲದಾಗಿ, ಸಾರ್ವಜನಿಕರು ಅಥವಾ ಖಾಸಗಿ ವ್ಯಕ್ತಿಗಳು ತಮ್ಮ ಖಾಲಿ ನಿವೇಶನಗಳನ್ನು (Vacant Sites) ಸಾರ್ವಜನಿಕ ಪಾರ್ಕಿಂಗ್ ಉದ್ದೇಶಕ್ಕೆ ನೀಡಿದರೆ, ಅಂತಹ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ (Property Tax) ವಿಶೇಷ ವಿನಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *