Headlines

ಬೆಂಗಳೂರು ಅಭಿವೃದ್ಧಿ ಪ್ಯಾಕೇಜ್​ನಲ್ಲಿ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೇ ಸಿಂಹಪಾಲು: ತಾರತಮ್ಯದ ಆರೋಪ ಮಾಡಿದ ಪ್ರತಿಪಕ್ಷ ಬಿಜೆಪಿ – Kannada News | Bengaluru Grant Allocation: Congress MLA Constituencies Secure Big Share, BJP Alleges Fund Diversion

ಬೆಂಗಳೂರು, ಜೂನ್ 29: ಬೆಂಗಳೂರಿನ (Bengaluru) ಸರ್ವತೋಮುಖ ಅಭಿವೃದ್ಧಿಗಾಗಿ ಬಿಡುಗಡೆ ಮಾಡಲಾಗಿರುವ ಒಟ್ಟು 2,000 ಕೋಟಿ ರೂಪಾಯಿ ಮೊತ್ತದ ವಿಶೇಷ ಪ್ಯಾಕೇಜ್ ಹಂಚಿಕೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ (Congress) ಶಾಸಕರ ಕ್ಷೇತ್ರಗಳಿಗೇ ಭರಪೂರ ಅನುದಾನ ಹರಿದುಬಂದಿದೆ. ಸರ್ಕಾರದ ಈ ನಡೆಗೆ ಪ್ರತಿಪಕ್ಷ ಬಿಜೆಪಿ (BJP) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅನುದಾನ ಹಂಚಿಕೆಯಲ್ಲಿ ರಾಜಕೀಯ ಮಾಡಲಾಗಿದೆ ಎಂದು ಆರೋಪಿಸಿದೆ. ಬಿಡುಗಡೆಯಾಗಿರುವ ಅನುದಾನದ ಪೈಕಿ ಅತ್ಯಧಿಕ ಮೊತ್ತವನ್ನು ಬಾಚಿಕೊಂಡ ಮೊದಲ ನಾಲ್ಕೂ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್ ಶಾಸಕರ ಪ್ರಾತಿನಿಧ್ಯ ಹೊಂದಿರುವ ಕ್ಷೇತ್ರಗಳೇ ಆಗಿವೆ.

ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?

ಅನುದಾನ ಹಂಚಿಕೆಯ ಸಂಪೂರ್ಣ ವಿವರಗಳನ್ನು ಗಮನಿಸುವುದಾದರೆ, ಶಿವಾಜಿನಗರ ಕ್ಷೇತ್ರಕ್ಕೆ ಬರೋಬ್ಬರಿ 80 ಕೋಟಿ ರೂ. ಹಾಗೂ ಬ್ಯಾಟರಾಯನಪುರ ಕ್ಷೇತ್ರಕ್ಕೆ 80 ಕೋಟಿ ರೂ. ಮೀಸಲಿಡಲಾಗಿದೆ. ಗಾಂಧಿನಗರ ಮತ್ತು ಚಾಮರಾಜಪೇಟೆ ಕ್ಷೇತ್ರಗಳಿಗೆ ಕ್ರಮವಾಗಿ 73 ಕೋಟಿ ರೂ. ಮತ್ತು 71.5 ಕೋಟಿ ರೂ. ಮಂಜೂರು ಮಾಡಲಾಗಿದೆ. ಇನ್ನುಳಿದಂತೆ ಬೊಮ್ಮನಹಳ್ಳಿ ಕ್ಷೇತ್ರಕ್ಕೆ 60 ಕೋಟಿ ರೂ. ಬಿಡುಗಡೆಯಾಗಿದ್ದರೆ, ಬಿಟಿಎಂ ಲೇಔಟ್, ಯಶವಂತಪುರ, ಶಾಂತಿನಗರ ಮತ್ತು ಮಹದೇವಪುರ ಕ್ಷೇತ್ರಗಳಿಗೆ ತಲಾ ಸುಮಾರು 50 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಹಣ ಒದಗಿಸಲಾಗಿದೆ.

ಬೆಂಗಳೂರು ಉತ್ತರಕ್ಕೆ ಸಿಂಹಪಾಲು

ಜಿಬಿಎ ವ್ಯಾಪ್ತಿಯ ವಲಯವಾರು ಹಂಚಿಕೆಯಲ್ಲಿ ಉತ್ತರ ವಲಯಕ್ಕೆ ಸಿಂಹಪಾಲು ಅಂದರೆ 466.5 ಕೋಟಿ ರೂ. ಸಿಕ್ಕಿದೆ. ಪಶ್ಚಿಮ ವಲಯಕ್ಕೆ 415 ಕೋಟಿ ರೂ., ದಕ್ಷಿಣ ವಲಯಕ್ಕೆ 328 ಕೋಟಿ ರೂ. ಹಾಗೂ ಮಧ್ಯ ವಲಯಕ್ಕೆ 311.5 ಕೋಟಿ ರೂ. ಹಂಚಿಕೆಯಾಗಿದೆ. ಆದರೆ, ಅತ್ಯಂತ ಕಡಿಮೆ ಅಂದರೆ ಕೇವಲ 110 ಕೋಟಿ ರೂ. ಅನುದಾನವನ್ನು ಪೂರ್ವ ವಲಯಕ್ಕೆ ನೀಡಲಾಗಿದೆ. ಈ ಪೂರ್ವ ವಲಯದಲ್ಲಿ ವೈಟ್‌ಫೀಲ್ಡ್, ಬೆಳ್ಳಂದೂರು, ವರ್ತೂರು, ಪಣತ್ತೂರು, ಕಾಡುಗೋಡಿ, ಹೂಡಿ ಮತ್ತು ಕುಂದಲಹಳ್ಳಿ ನಂತಹ ಪ್ರಮುಖ ಐಟಿ ಹಬ್‌ಗಳು ಸೇರಿವೆ. ಇಲ್ಲಿನ ನಿವಾಸಿಗಳು ನಿರಂತರವಾಗಿ ರಸ್ತೆಗಳ ದುಸ್ಥಿತಿ, ಮಳೆ ನೀರಿನ ಪ್ರವಾಹ, ತೀವ್ರ ಟ್ರಾಫಿಕ್ ದಟ್ಟಣೆ ಹಾಗೂ ಮೂಲಸೌಕರ್ಯಗಳ ಕೊರತೆಯ ಬಗ್ಗೆ ದೂರು ನೀಡುತ್ತಲೇ ಇದ್ದರೂ ಅತಿ ಕಡಿಮೆ ಅನುದಾನ ನೀಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಯಾವೆಲ್ಲ ಕಾಮಗಾರಿಗಳಿಗೆ ಅನುದಾನ?

ಈ ಒಟ್ಟು 2,000 ಕೋಟಿ ರೂ. ಪ್ಯಾಕೇಜ್‌ನಲ್ಲಿ ರಸ್ತೆ, ಚರಂಡಿ ಮತ್ತು ಪಾದಚಾರಿ ಮಾರ್ಗಗಳ ನಿರ್ಮಾಣಕ್ಕೆ 1,631 ಕೋಟಿ ರೂ. ಮೀಸಲಿಡಲಾಗಿದೆ. ಇನ್ನುಳಿದ 369 ಕೋಟಿ ಮೊತ್ತವನ್ನು ನಾಗರಿಕ ಮೂಲಸೌಕರ್ಯ, ವಿಶೇಷ ಯೋಜನೆಗಳು, ಉದ್ಯಾನಗಳು, ಸಮುದಾಯ ಭವನಗಳು, ಶಿಕ್ಷಣ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಕ್ರೀಡಾ ಮೂಲಸೌಕರ್ಯ, ಮಾರುಕಟ್ಟೆಗಳು ಹಾಗೂ ಕೆರೆಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಲಾಗಿದೆ.

ಬಿಜೆಪಿ ನಾಯಕರ ಗಂಭೀರ ಆರೋಪ

ಈ ಹಂಚಿಕೆಯ ಬೆನ್ನಲ್ಲೇ ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದಿರುವ ಬಿಜೆಪಿ ನಾಯಕರು, ‘ಈ ಅನುದಾನದ ಬಹುದೊಡ್ಡ ಭಾಗವನ್ನು ಬೆಂಗಳೂರಿನ ರಸ್ತೆ ಅಭಿವೃದ್ಧಿಗೆಂದು ತೋರಿಸಿ, ಅದರಲ್ಲಿನ ಸುಮಾರು 369 ಕೋಟಿ ರೂಪಾಯಿಗಳನ್ನು ರಸ್ತೆ ಕಾಮಗಾರಿಗಳ ಬದಲಾಗಿ ಕಾಂಗ್ರೆಸ್ ಶಾಸಕರ ಕಚೇರಿಗಳು, ಸಮುದಾಯ ಭವನಗಳು, ಬಹುಉದ್ದೇಶ ಕಟ್ಟಡಗಳು ಹಾಗೂ ಉದ್ಯಾನಗಳ ನಿರ್ಮಾಣಕ್ಕೆ ನಿಯಮಬಾಹಿರವಾಗಿ ತಿರುಗಿಸಲಾಗುತ್ತಿದೆ (ಡೈವರ್ಟ್ ಮಾಡಲಾಗುತ್ತಿದೆ)’ ಎಂದು ನೇರ ಆರೋಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *