ಬೆಂಗಳೂರು, ಮೇ 20: ಮಳೆ ಬಂತೆಂದರೆ ಸಾಕು ಬೆಂಗಳೂರಿನ (Bengaluru) ರಸ್ತೆಗಳು ಹೊಳೆಯಂತಾಗೋದು ನಗರ ನಿವಾಸಿಗಳಿಗೆ ಹೊಸದೇನೂ ಅಲ್ಲ. ಈ ವೇಳೆ ಉಂಟಾಗುವ ಟ್ರಾಫಿಕ್ ಸಮಸ್ಯೆಯ ಕುರಿತಂತೂ ಮತ್ತೆ ಹೇಳಬೇಕಿಲ್ಲ. ಯಾವಾಗ ಮನೆ, ಕಚೇರಿ ಅಥವಾ ಗಮ್ಯ ಸ್ಥಾನ ತಲುಪುತ್ತೇವೆ ಎಂದು ವಾಹನ ಸವಾರರು ಹೇಳಲು ಸಾಧ್ಯವೇ ಇಲ್ಲ. ಈ ನಡುವೆ ಮೊನ್ನೆ ಬೆಂಗಳೂರಲ್ಲಿ ಸುರಿದ ಮಳೆಯ ವೇಳೆ ಕಲ್ಯಾಣನಗರದಿಂದ ಮಾನ್ಯತಾ ಟೆಕ್ ಪಾರ್ಕ್ವರೆಗೆ ಸುಮಾರು 4 ಕಿ.ಮೀ. ಕ್ರಮಿಸಲು ವ್ಯಕ್ತಿಯೋರ್ವರು ಒಂದೂವರೆ ಗಂಟೆ ಸಮಯ ತೆಗೆದುಕೊಂಡ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
ಮೇ 18ರ ಸೋಮವಾರ ಸಂಜೆ ಸುರಿದ ಭಾರೀ ಮಳೆಯು ನಗರದ ಟ್ರಾಫಿಕ್ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿತು. ಇದರಿಂದ ಬೇಸತ್ತ ವರುಣ್ ರಂಗರಾಜನ್ ಎಂಬವರು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ ಪ್ರಕಾರ, ಅವರು ಸಂಜೆ 5:17ಕ್ಕೆ ಬೆಳ್ಳಂದೂರಿನಿಂದ ಹೊರಟಿದ್ದು, ಔಟರ್ ರಿಂಗ್ ರೋಡ್ನಲ್ಲಿ ಭಾರೀ ಟ್ರಾಫಿಕ್ಗೆ ಸಿಲುಕಿದ್ದಾರೆ. ಹೀಗಾಗಿ ಬರೋಬ್ಬರಿ 3 ಗಂಟೆಗಳ ಕಾಲ ತಾನು ಟ್ರಾಫಿಕ್ನಲ್ಲಿ ಸಿಲುಕಿದ್ದೆ. ಕೇವಲ ಕಲ್ಯಾಣನಗರದಿಂದ ಮಾನ್ಯತಾ ಟೆಕ್ ಪಾರ್ಕ್ವರೆಗೆ ಬರಲು ಸುಮಾರು ಒಂದೂವರೆ ಗಂಟೆ ಸಮಯ ತಗುಲಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್ ಚಾಲಕನ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; ವಿಡಿಯೋ ವೈರಲ್ ಬೆನ್ನಲ್ಲೇ ಹುಳಿಮಾವು ಪೊಲೀಸರಿಂದ ಆರೋಪಿಯ ಬಂಧನ
ಪರಿಸ್ಥಿತಿ ಹೀಗಿದ್ದರೂ ಮಾರ್ಗಮಧ್ಯೆ ಒಬ್ಬ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೂ ಕಾಣಿಸಲಿಲ್ಲ. ಗೂಗಲ್ ಮ್ಯಾಪ್ ಪ್ರಕಾರ ಮನೆಗೆ ನಡೆದು ಹೋದರೂ ಇದೇ ಸಮಯ ತೆಗೆದುಕೊಳ್ಳುತ್ತಿತ್ತು ಎಂದು ಎಕ್ಸ್ ಪೋಸ್ಟ್ನಲ್ಲಿ ವರುಣ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಈ ಪೋಸ್ಟ್ಗೆ ಅನೇಕರು ಪ್ರತಿಕ್ರಿಯಿಸಿದ್ದು, ಹಲವರು ಇದು ನಮ್ಮ ದೈನಂದಿನ ಕಥೆ ಎಂದು ಹೇಳಿಕೊಂಡಿದ್ದಾರೆ. ಮಳೆ ಬಂತೆಂದರೆ ಬೆಂಗಳೂರಿನ ಅನೇಕ ರಸ್ತೆಗಳು ಜಲಾವೃತಗೊಂಡು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಳ್ಳೂವುದು ಹೊಸತೇನಲ್ಲ ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.