Headlines

ಬೆಂಗಳೂರು ಡೇ ಕೇರ್ ಕ್ರೌರ್ಯ: ಸಿಸಿಟಿವಿ ದೃಶ್ಯ ಆಧರಿಸಿ ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿ ಇಬ್ಬರು ಅರೆಸ್ಟ್! – Kannada News | Bengaluru Daycare Abuse Case: Main Accused Vijayalakshmi Arrested by HAL Police

ಬೆಂಗಳೂರು, ಜುಲೈ 03: ನಗರದ ಪ್ರತಿಷ್ಠಿತ ಬ್ರೂಕ್​ಫೀಲ್ಡ್​​ನಲ್ಲಿರುವ ಸೊಸೈಟಿ ಜನರಲ್ ಬೇಬಿ ಡೇ ಕೇರ್ (Day care case) ಸೆಂಟರ್‌ನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‌ಎಎಲ್‌ (HAL) ಠಾಣೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಪ್ರಮುಖ ಆರೋಪಿ ವಿಜಯಲಕ್ಷ್ಮೀ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಆರೋಪಿಗಳ ಉಡಾಫೆ ಉತ್ತರ

ಡೇ ಕೇರ್‌ನಲ್ಲಿ ಮಕ್ಕಳ ಮೇಲೆ ನಡೆದಿರುವ ಹಲ್ಲೆಯ ಸಿಸಿಟಿವಿ ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಿಡಿಯೋದಲ್ಲಿದ್ದ ಮೂವರು ಸಿಬ್ಬಂದಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗಿದ್ದು, ತನಿಖೆ ವೇಳೆ ನಮಗೇನೂ ಗೊತ್ತಿಲ್ಲ ಎಂದು ಆರೋಪಿಗಳು ಉಡಾಫೆಯ ಉತ್ತರ ನೀಡಿದ್ದರು ಎನ್ನಲಾಗಿದೆ. ಆದರೆ, ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಜುವೆನೈಲ್ ಜಸ್ಟೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನಿನ್ನೆ ಮೂವರು ಪೋಷಕರಿಂದಲೂ ಪೊಲೀಸರು ದೂರಿಗೆ ಪೂರಕವಾದ ಮಾಹಿತಿ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ಇನ್ನುಳಿದ ಸಿಬ್ಬಂದಿ ಸ್ಥಳದಲ್ಲಿದ್ದರಾ ಮತ್ತು ಅವರ ಪಾತ್ರವೇನು ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.

ನಡೆದಿದ್ದೇನು?

ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯ ಆವರಣದಲ್ಲಿದ್ದ ಡೇ ಕೇರ್ ಸೆಂಟರ್‌ನಲ್ಲಿ ಎರಡು ವರ್ಷದ ಪುಟ್ಟ ಮಕ್ಕಳ ಮೇಲೆ ನಡೆದಿರುವ ಕ್ರೌರ್ಯ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಅಳುವ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗೆ ಕೂರಿಸಿ ವಾಟರ್ ಜೆಟ್ ಸ್ಪ್ರೇ ಮಾಡುವುದು ಹಾಗೂ ಬಾತ್‌ರೂಮ್‌ನಲ್ಲಿ ಕೂಡಿಹಾಕಿ ವಿಕೃತ ಆನಂದ ಪಡುವಂತಹ ಅಮಾನವೀಯ ದೌರ್ಜನ್ಯ ಇಲ್ಲಿ ದೀರ್ಘಕಾಲದಿಂದ ನಡೆಯುತ್ತಿತ್ತು. ಈ ಬಗ್ಗೆ ಈ ಹಿಂದೆ ಧ್ವನಿ ಎತ್ತಿದ್ದ ಸಿಬ್ಬಂದಿಯನ್ನೇ ಕೆಲಸದಿಂದ ವಜಾಗೊಳಿಸಿ ಸತ್ಯ ಮುಚ್ಚಿಹಾಕಲು ಯತ್ನಿಸಲಾಗಿತ್ತು ಎಂಬ ಆಘಾತಕಾರಿ ವಿಷಯ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ತನಿಖೆಯಿಂದ ಬಯಲಾಗಿದೆ. ಸದ್ಯ ಐದು ಮಂದಿ ಕೇರ್‌ಟೇಕರ್‌ಗಳ ವಿರುದ್ಧ ಕೇಸ್ ದಾಖಲಾಗಿದ್ದು, ಸೆಂಟರ್ ಅನ್ನು ಮುಚ್ಚಲಾಗಿದೆ. ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ಕುರಿತು ಸಿಎಂಗೆ ಪತ್ರ ಬರೆದು ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

ಇದನ್ನೂ ಓದಿ ವಾಷಿಂಗ್ ಮಷಿನ್​​ಗೆ ಹಾಕಿ ಮಕ್ಕಳಿಗೆ ಹಿಂಸೆ: ಕ್ರೌರ್ಯದ ಬಗ್ಗೆ ಮಾಹಿತಿ ನೀಡಿದ್ದ ಸಿಬ್ಬಂದಿಯ ವಜಾಗೊಳಿಸಿದ್ದ ಡೇ ಕೇರ್ ಸೆಂಟರ್

‘ಬ್ರ್ಯಾಂಡ್ ಬೆಂಗಳೂರಿಗೂ ಧಕ್ಕೆ’: ಗೃಹ ಸಚಿವರ ಆಕ್ರೋಶ

ಈ ಅಮಾನವೀಯ ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಗೃಹ ಸಚಿವರು, ಡೇ ಕೇರ್ ಸೆಂಟರ್‌ಗಳ ನಿರ್ವಹಣೆ ಹಾಗೂ ಸುರಕ್ಷತೆಗೆ ಕಟ್ಟುನಿಟ್ಟಾದ ನಿಯಮ ಮತ್ತು ಮಾರ್ಗಸೂಚಿಗಳಿವೆ. ಆದರೆ ಈ ಸೆಂಟರ್‌ನಲ್ಲಿ ಅದನ್ನು ಪಾಲಿಸಿಲ್ಲ. ಇಂತಹ ಘಟನೆಗಳು ಕೇವಲ ಆಯಾ ಕಂಪನಿಯ ಶ್ರೇಯಸ್ಸಿಗೆ ಮಾತ್ರವಲ್ಲ, ಇಡೀ ‘ಬ್ರ್ಯಾಂಡ್ ಬೆಂಗಳೂರು’ ಹೆಸರಿಗೂ ಧಕ್ಕೆ ತರುತ್ತವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 11:41 am, Fri, 3 July 26

Source link

Leave a Reply

Your email address will not be published. Required fields are marked *