
ಬೆಂಗಳೂರು, ಏಪ್ರಿಲ್ 05: ಬೆಂಗಳೂರಿನ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಇಂಡಿಗೋ ವಿಮಾನದಲ್ಲಿ ಹುಸಿ ಬಾಂಬ್ ಬೆದರಿಕೆ ಪ್ರಕರಣ ಆತಂಕ ಮೂಡಿಸಿತ್ತು. ದೆಹಲಿಗೆ ತೆರಳುತ್ತಿದ್ದ ವಿಮಾನದ ಶೌಚಾಲಯದಲ್ಲಿ ಬಾಂಬ್ ಇದೆ ಎಂದು ಬರೆದ ಟಿಷ್ಯೂ ಪೇಪರ್ ಪತ್ತೆಯಾಗುತ್ತಿದ್ದಂತೆ ತಕ್ಷಣ ಎಚ್ಚರಿಕೆ ಕ್ರಮ ಕೈಗೊಳ್ಳಲಾಯಿತು.ವಿಮಾನದಲ್ಲಿದ್ದ 183 ಪ್ರಯಾಣಿಕರನ್ನು ಕೆಳಗಡೆ ಇಳಿಸಿ ತಪಾಸಣೆ ನಡೆಸಿದ ನಂತರ ಹುಸಿ ಬೆದರಿಕೆಯೆಂದು ಗೊತ್ತಾಗಿ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.
ಹುಸಿ ಬೆದರಿಕೆ ಹಾಕಿದವರಿಗಾಗಿ ಶೋಧ
ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿ ನೀಡಿದ ನಂತರ, ವಿಮಾನದಲ್ಲಿದ್ದ 183 ಪ್ರಯಾಣಿಕರನ್ನು ತುರ್ತಾಗಿ ಕೆಳಗಿಳಿಸಿ ಸಂಪೂರ್ಣ ತಪಾಸಣೆ ನಡೆಸಲಾಯಿತು. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದರೂ, ಯಾವುದೇ ಸ್ಫೋಟಕ ಅಥವಾ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬೆದರಿಕೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ವಿಮಾನವು ನಂತರ ದೆಹಲಿಗೆ ಸುರಕ್ಷಿತವಾಗಿ ಪ್ರಯಾಣ ಮುಂದುವರಿಸಿದೆ.
ವಿಮಾನದ ಶೌಚಾಯಲದಲ್ಲಿ ಬಾಂಬ್ ಇದೆ ಎಂದು ಟಿಷ್ಯೂ ಪೇಪರ್ನಲ್ಲಿ ಬೆದರಿಕೆ ಸಂದೇಶ ಬರೆದಿರುವುದು ವಿಮಾನದಲ್ಲಿದ್ದ ಪ್ರಯಾಣಿಕರಲ್ಲೆ ಒಬ್ಬರಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.