ಬೆಂಗಳೂರು, ಜೂನ್ 13: ಬೆಂಗಳೂರಿನಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ. ಶುಕ್ರವಾರ ತಡರಾತ್ರಿ ಸುರಿದ ಭಾರಿ ಮಳೆಗೆ ನಗರದ ಹಲವೆಡೆ ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು. ನಗರದ ಪ್ರಮುಖ ಭಾಗಗಳಾದ ಶಾಂತಿನಗರ, ಕಂಟೋನ್ಮೆಂಟ್, ವಸಂತನಗರ, ಸದಾಶಿವನಗರ, ಶೇಷಾದ್ರಿಪುರಂ, ಮಲ್ಲೇಶ್ವರಂ, ಮತ್ತಿಕೆರೆ, ದೊಮ್ಮಲೂರು, ಇಂದಿರಾನಗರ, ಹೆಬ್ಬಾಳ, ಕುಮಾರಸ್ವಾಮಿ ಲೇಔಟ್ ಹಾಗೂ ಉತ್ತರಹಳ್ಳಿ ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಮಳೆಯ ಅಬ್ಬರಕ್ಕೆ ತಗ್ಗು ಪ್ರದೇಶದ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟಾಯಿತು.
ಎಲೆಕ್ಟ್ರಾನಿಕ್ ಸಿಟಿ, ಸರ್ಜಾಪುರ ರಸ್ತೆ, ಹೊಸೂರು ರಸ್ತೆ ಹಾಗೂ ಸಿಲ್ಕ್ ಬೋರ್ಡ್ ವ್ಯಾಪ್ತಿಯಲ್ಲಿ ಮಳೆ ನೀರು ರಸ್ತೆಯ ಮೇಲೆ ಹರಿದಿದ್ದರಿಂದ ವಾಹನ ಸವಾರರು ಪರದಾಡಿದರು. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಮಂಡಿಯುದ್ದ ನೀರು ನಿಂತಿದ್ದರಿಂದ ಸವಾರರು ವಾಹನಗಳನ್ನು ತಳ್ಳಿಕೊಂಡು ಹೋಗುವ ದೃಶ್ಯಗಳು ಕಂಡುಬಂದವು. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಮುಂದಿನ ಐದು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರಿಯಲಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ‘ಯಲ್ಲೋ ಅಲರ್ಟ್’ ಘೋಷಿಸಿದೆ. ಇನ್ನು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ