ಮಧ್ಯರಾತ್ರಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ
ಬೆಳಗಾವಿ, ಏ.26: ಕುಂದಾನಗರಿ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಘಟನೆಯೊಂದು ನಡೆದಿದೆ. ನಗರದ ಮಂಡೋಳಿ ರಸ್ತೆಯಲ್ಲಿರುವ ಖ್ಯಾತ ವಕೀಲೆ ಪೂಜಾ ಕಾಕತಕರ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಇಡೀ ನಗರದಲ್ಲಿ ಆತಂಕ ಮನೆ ಮಾಡಿದೆ. ಶನಿವಾರ ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯ ಸುಮಾರಿನಲ್ಲಿ ಈ ದಾಳಿ ನಡೆದಿದೆ. ದುಷ್ಕರ್ಮಿಗಳು ಪೂಜಾ ಅವರ ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ನಡೆಸಿದ್ದಾರೆ. ಆ ಸಮಯದಲ್ಲಿ ಮೊದಲ ಮಹಡಿಯ ಕೊಠಡಿಯಲ್ಲಿ ಪೂಜಾ ಅವರ ಪುತ್ರಿ ಸಂಸ್ಕೃತಿ ಪರೀಕ್ಷೆಗೆಂದು ಓದುತ್ತಿದ್ದರು. ಗುಂಡು ಕಿಟಕಿಯ ಗ್ಲಾಸ್‌ಗೆ ಬಡಿದಿದ್ದು, ಅದೃಷ್ಟವಶಾತ್ ಸಂಸ್ಕೃತಿ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸರು ಮತ್ತು ಸುಕೋ (SUCO) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಿಟಕಿಯ ಗಾಜಿನ ಮೇಲಿರುವ ಗುಂಡಿನ ಗುರುತುಗಳು ಮತ್ತು ಪತ್ತೆಯಾದ ಗುಂಡಿನ ಅಂಶಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ.
ಇದನ್ನೂ ಓದಿ: 10 ವರ್ಷಗಳ ಪ್ರೀತಿ, ಹತ್ತಾರು ಬಾರಿ ದೈಹಿಕ ಸಂಬಂಧ: ಈಗ ಮದುವೆ ಮಾತು ಬಂದಾಗ ಯುವಕನಿಂದ ಕೊಲೆ ಬೆದರಿಕೆ
ಪೂಜಾ ಅವರು ಕಳೆದ 18 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿದ್ದು, ವೃತ್ತಿ ವೈಷಮ್ಯ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಈ ದಾಳಿ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ