ಇಂದಿನ ವೇಗದ ಜೀವನಶೈಲಿಯಲ್ಲಿ ಅನೇಕರು ಬೆಳಗಿನ ಸಮಯವನ್ನು ನಿರ್ಲಕ್ಷಿಸುತ್ತಾರೆ. ಆದರೆ ವೈದ್ಯರ ಪ್ರಕಾರ, ನಿದ್ರೆಯಿಂದ ಎದ್ದ ನಂತರದ ಮೊದಲ 60– 90 ನಿಮಿಷಗಳು ದಿನದ ಉಳಿದ ಸಮಯದ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತವೆ. ಹೈದರಾಬಾದ್ನ ಅಪೋಲೋ ಆಸ್ಪತ್ರೆಯ ನ್ಯೂರಾಲಜಿಸ್ಟ್ ಡಾ. ಸುಧೀರ್ ಕುಮಾರ್ (Dr Sudhir Kumar M) ಅವರು ಹೇಳುವ ಪ್ರಕಾರ, ಈ ಸಮಯದಲ್ಲಿ ಅನುಸರಿಸುವ ಸರಿಯಾದ ಆರೋಗ್ಯಕರ ಅಭ್ಯಾಸಗಳು ದೇಹದ ಜೈವಿಕ ಗಡಿಯಾರ (Circadian Rhythm) ಅನ್ನು ಸಮತೋಲನಗೊಳಿಸಿ, ಶಕ್ತಿ, ಏಕಾಗ್ರತೆ ಮತ್ತು ಉತ್ತಮ ನಿದ್ರೆಗೆ ಸಹಕಾರಿಯಾಗುತ್ತವೆ.
ಸೂರ್ಯನ ಬೆಳಕನ್ನು ಪಡೆಯಿರಿ
ಎದ್ದ 30–60 ನಿಮಿಷಗಳೊಳಗೆ 10– 20 ನಿಮಿಷ ನೈಸರ್ಗಿಕ ಸೂರ್ಯನ ಬೆಳಕಿನಲ್ಲಿ ಸಮಯ ಕಳೆಯಿರಿ. ಇದು ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ನ ಆರೋಗ್ಯಕರ ಬಿಡುಗಡೆಯನ್ನು ಉತ್ತೇಜಿಸಿ, ದಿನವಿಡೀ ಚೈತನ್ಯದಿಂದ ಇರಲು ಸಹಾಯ ಮಾಡುತ್ತದೆ.
ಎದ್ದ ಕೂಡಲೇ ಕಾಫಿ ಕುಡಿಯಬೇಡಿ
ಬೆಳಗ್ಗೆ ಎದ್ದ ತಕ್ಷಣ ಕಾಫಿ ಅಥವಾ ಚಹಾ ಕುಡಿಯುವುದನ್ನು ತಪ್ಪಿಸಿ. ಕನಿಷ್ಠ 60–90 ನಿಮಿಷಗಳ ನಂತರ ಸೇವಿಸಿದರೆ ದೇಹದ ಸಹಜ ಶಕ್ತಿ ಮಟ್ಟ ಸಮತೋಲನದಲ್ಲಿರುತ್ತದೆ.
ಮೊದಲು ನೀರು ಕುಡಿಯಿರಿ
ರಾತ್ರಿಯ ನಿದ್ರೆಯ ನಂತರ ದೇಹದಲ್ಲಿ ಸ್ವಲ್ಪ ನೀರಿನ ಕೊರತೆ ಉಂಟಾಗುತ್ತದೆ. ಆದ್ದರಿಂದ ಬೆಳಗ್ಗೆ ಸುಮಾರು 500 ಮಿ.ಲೀ. ನೀರು ಕುಡಿಯುವುದು ದೇಹವನ್ನು ಚುರುಕುಗೊಳಿಸುತ್ತದೆ.
ಲಘು ವ್ಯಾಯಾಮ ಮಾಡಿ
ಸ್ವಲ್ಪ ಸ್ಟ್ರೆಚಿಂಗ್ ಅಥವಾ ಚಿಕ್ಕ ವಾಕಿಂಗ್ ಕೂಡ ಸಾಕು. ಇದು ಮೆದುಳಿಗೆ ದಿನ ಆರಂಭವಾಗಿದೆ ಎಂಬ ಸಂದೇಶ ನೀಡಿ, ಏಕಾಗ್ರತೆ ಮತ್ತು ಚೈತನ್ಯವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಬೆಳಗ್ಗೆ ಬೇಗ ಏಳುವುದರಿಂದ ನೀವು ಈ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು
ಮೊಬೈಲ್ ಬಳಕೆ ಮಾಡಬೇಡಿ
ಎದ್ದ ತಕ್ಷಣ ಸಾಮಾಜಿಕ ಜಾಲತಾಣ ಅಥವಾ ಇಮೇಲ್ಗಳನ್ನು ನೋಡುವುದು ಒತ್ತಡವನ್ನು ಹೆಚ್ಚಿಸಬಹುದು. ಮೊದಲ ಒಂದು ಗಂಟೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.
ಸ್ನೂಜ್ ಬಟನ್ ಒತ್ತಬೇಡಿ
ಮತ್ತೆ ಮತ್ತೆ ಅಲಾರಂ ಸ್ನೂಜ್ ಮಾಡುವುದರಿಂದ ಮೆದುಳು ಗೊಂದಲಕ್ಕೊಳಗಾಗಿ, ಹೆಚ್ಚು ದಣಿವು ಮತ್ತು ಮಂಕುತನ ಉಂಟಾಗಬಹುದು.
ಆರೋಗ್ಯಕರ ಉಪಹಾರವನ್ನು ಆಯ್ಕೆ ಮಾಡಿ
ಸಕ್ಕರೆ ಹೆಚ್ಚಿರುವ ಆಹಾರಗಳ ಬದಲು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳಿರುವ ಉಪಹಾರ ಸೇವಿಸುವುದು ದಿನವಿಡೀ ಶಕ್ತಿ ನೀಡುತ್ತದೆ.
ಈ ಸರಳ ಅಭ್ಯಾಸಗಳನ್ನು ಪ್ರತಿದಿನ ಪಾಲಿಸಿದರೆ ಉತ್ತಮ ಆರೋಗ್ಯ, ಸ್ಥಿರ ಮನಸ್ಥಿತಿ ಮತ್ತು ನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ