Headlines

ಬೆಳೆಗಾರರ ಪಾಲಿಗೆ ಹಣ್ಣಿನ ರಾಜ ಈಗ ಕಹಿ! ಮಾವಿನ ಹಣ್ಣಿನ ಬೆಲೆ ದಿಢೀರ್ ಬೆಲೆ ಕುಸಿತ, ರೈತರು ಕಂಗಾಲು – Kannada News | Gadag Mango Market Crisis: Prices Plummets from Rs 3000 to Rs 600 per Tray; Farmers Face Huge Lossess

ಮಾವಿನ ಹಣ್ಣಿನ ಬೆಲೆ ಕುಸಿತ (ಸಾಂದರ್ಭಿಕ ಚಿತ್ರ)Image Credit source: tv9

ಗದಗ, ಏಪ್ರಿಲ್ 30: ಹಣ್ಣಿನ ರಾಜ ಎಂದೇ ಖ್ಯಾತಿ ಪಡೆದಿರುವ ಮಾವು (Mango) ಈ ಬಾರಿ ಬೆಳೆಗಾರರ ಪಾಲಿಗೆ ಕಹಿಯಾಗಿದೆ. ಒಂದು ಕಡೆ ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ವಿದೇಶಕ್ಕೆ ರಫ್ತು ಸ್ಥಗಿತಗೊಂಡಿದ್ದರೆ, ಇನ್ನೊಂದು ಕಡೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ (Mango Price) ದಿಢೀರ್ ಕುಸಿತ ಕಂಡಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದೆ ಗದಗ (Gadag) ಮಾರುಕಟ್ಟೆಗೆ ಬಂದ ಬೆಳೆಗಾರರು ಕಣ್ಣೀರು ಹಾಕುವಂತಾಗಿದೆ.

ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳೇನು?

ಬೇಸಿಗೆ ಆರಂಭದಲ್ಲಿ ಭರ್ಜರಿ ಬೇಡಿಕೆ ಹೊಂದಿದ್ದ ಮಾವಿನ ಹಣ್ಣಿನ ದರ ಈಗ ಪಾತಾಳಕ್ಕೆ ಕುಸಿದಿದೆ. ಕಳೆದ ವಾರ ಒಂದು ಟ್ರೇ ಮಾವಿಗೆ 2,500 ರಿಂದ 3,000 ರೂಪಾಯಿ ದರವಿತ್ತು. ಆದರೆ ಈಗ ಕೇವಲ 600 ರಿಂದ 700 ರೂಪಾಯಿಗೆ ಕುಸಿದಿದೆ. ಮಾರುಕಟ್ಟೆಗೆ ಒಂದೇ ಬಾರಿಗೆ ಹೆಚ್ಚಿನ ಪ್ರಮಾಣದ ಸರಕು ಆಗಮಿಸಿರುವುದು ಮತ್ತು ವ್ಯಾಪಾರಿಗಳ ಬೇಡಿಕೆ ಕಡಿಮೆಯಾಗಿರುವುದು ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಇದರೊಂದಿಗೆ ಇರಾನ್ ಮತ್ತು ಅಮೆರಿಕಾ ನಡುವಿನ ಯುದ್ಧದ ಎಫೆಕ್ಟ್‌ನಿಂದಾಗಿ ಅಂತರಾಷ್ಟ್ರೀಯ ರಫ್ತು ವ್ಯವಹಾರಕ್ಕೂ ಹೊಡೆತ ಬಿದ್ದಿದೆ.

ಸಾರಿಗೆ ವೆಚ್ಚವೂ ಸಿಗದೆ ಕಂಗಾಲಾದ ಬೆಳೆಗಾರರು

ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಮತ್ತು ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಬೆಳೆಗಾರರು ಸಾವಿರಾರು ರೂಪಾಯಿ ಸಾರಿಗೆ ವೆಚ್ಚ ಭರಿಸಿ ಗದಗ ಮಾರುಕಟ್ಟೆಗೆ ಮಾವು ತಂದಿದ್ದಾರೆ. ‘ರಸಗೊಬ್ಬರ, ಕೂಲಿ ಸೇರಿದಂತೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಆದರೆ ಇಲ್ಲಿ ಒಂದು ಟ್ರೇ ಮಾವಿಗೆ 600 ರೂಪಾಯಿ ಕೇಳುತ್ತಿದ್ದಾರೆ. ನಾವು ಬಂದ ಗಾಡಿ ಬಾಡಿಗೆಯೂ ಈ ಹಣದಲ್ಲಿ ಬರುವುದಿಲ್ಲ’ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಡಿಮೆ ದರಕ್ಕೆ ಮಾರಾಟ ಮಾಡಲು ಇಷ್ಟವಿಲ್ಲದ ಹಲವು ರೈತರು ಮಾವನ್ನು ಮರಳಿ ತಮ್ಮ ಊರುಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ.

ಸರ್ಕಾರದ ನೆರವಿಗೆ ಆಗ್ರಹ

ತೆರೆದ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಹೆಚ್ಚಿನ ದರಕ್ಕೆ ಮಾವು ಮಾರಾಟವಾಗುತ್ತಿದ್ದರೂ, ಅದರ ಲಾಭ ಮಾತ್ರ ಬೆಳೆಗಾರರಿಗೆ ಸಿಗುತ್ತಿಲ್ಲ. ಮಧ್ಯವರ್ತಿಗಳ ಹಾವಳಿ ಮತ್ತು ರಫ್ತು ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಮಾವು ಬೆಳೆಗಾರರ ನೆರವಿಗೆ ಸರ್ಕಾರ ತಕ್ಷಣ ಧಾವಿಸಬೇಕು ಎಂದು ರೈತ ಸಂಘಟನೆಗಳು ಮತ್ತು ಬೆಳೆಗಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಗದಗದಲ್ಲಿ ಧೂಳೆಬ್ಬಿಸಿದ ಎತ್ತುಗಳ ಮಿಂಚಿನ ಓಟ ಹೇಗಿತ್ತು ನೋಡಿ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:04 am, Thu, 30 April 26

Source link

Leave a Reply

Your email address will not be published. Required fields are marked *