Headlines

ಬ್ರಹ್ಮಪುತ್ರಾ ನದಿಗೆ ಚೀನಾ ಅಡ್ಡಗಾಲು; ಅಣೆಕಟ್ಟೆ ಜಾಗವೇ ಬಹಳ ಡೇಂಜರ್- ಸ್ವತಃ ಚೀನೀ ವಿಜ್ಞಾನಿಗಳಿಂದಲೇ ವರದಿ – Kannada News | China’s 147 Billion USD Brahmaputra river Mega Dam Under Scanner Over Active Fault Line Warning

ಟಿಬೆಟ್​ನಲ್ಲಿ ಹರಿಯುವ ಯಾರ್ಲುಂಗ್ ಟ್ಸಾಂಗ್​ಪೋ (ಬ್ರಹ್ಮಪುತ್ರ) ನದಿImage Credit source: He Huawen/VCG via Getty Images

ಬೀಜಿಂಗ್, ಜುಲೈ 10: ಟಿಬೆಟ್​ನಲ್ಲಿ ಬ್ರಹ್ಮಪುತ್ರಾ ನದಿಗೆ (Brahmaputra River) ತಡೆಯಾಗಿ ಚೀನಾ ನಿರ್ಮಿಸುತ್ತಿರುವ ಬೃಹತ್ ಅಣೆಕಟ್ಟು ಯೋಜನೆಗೆ ಅಲ್ಲಿನ ವಿಜ್ಞಾನಿಗಳೇ ಆತಂಕ ವ್ಯಕ್ತಪಡಿಸಿದ್ದಾರೆ. ಬಹಳ ದೋಷಪೂರಿತ ಜಾಗ ಅದು ಎಂದು ಅಲ್ಲಿಯ ಸರ್ಕಾರಿ ಬೆಂಬಲಿತ ವಿಜ್ಞಾನಿಗಳ ತಂಡ ಎಚ್ಚರಿಸಿದೆ. ವಿಶ್ವದ ಅತಿದೊಡ್ಡ ಹೈಡ್ರೋ ಪವರ್ ಪ್ರಾಜೆಕ್ಟ್​ಗಾಗಿ ಮಾಡಲಾಗುತ್ತಿರುವ ಈ ಯೋಜನೆ ಬಗ್ಗೆ ಭಾರತ ವ್ಯಕ್ತಪಡಿಸುತ್ತಾ ಬಂದಿರುವ ಆತಂಕಕ್ಕೆ ಹೊಸ ಧ್ವನಿ ಸಿಕ್ಕಂತಾಗಿದೆ.

ಟಿಬೆಟ್​ನಲ್ಲಿ ಬ್ರಹ್ಮಪುತ್ರಾ ನದಿಗೆ ಯಾರ್ಲುಂಗ್ ಟ್ಸಾಂಗ್​ಪೋ (Yarlung Tsangpo) ಎಂದು ಕರೆಯಲಾಗುತ್ತದೆ. ಟಿಬೆಟ್​ನಲ್ಲಿ ಹುಟ್ಟುವ ಈ ನದಿ ಭಾರತದ ಅರುಣಾಚಲಪ್ರದೇಶದ ಮೂಲಕ ಹಾದು ಹೋಗುತ್ತದೆ. ಈ ಗಡಿಭಾಗದಲ್ಲಿ ಚೀನಾ ಭಾರೀ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸುತ್ತಿದೆ. ಈ ಸ್ಥಳವು ಸಕ್ರಿಯ ಭೂಕುಸಿತದ ಮತ್ತು ಭೂಕಂಪದ ದೋಷರೇಖೆಯಲ್ಲಿ (Active Fault Line) ಇದೆ ಎಂದು ಚೀನೀ ಭೂ ವಿಜ್ಞಾನಿಗಳು ವರದಿ ಮಾಡಿದ್ದಾರೆ.

ಸುಮಾರು 147 ರಿಂದ 167 ಬಿಲಿಯನ್ ಡಾಲರ್ (ಸುಮಾರು 15 ಲಕ್ಷ ಕೋಟಿ ರೂ) ವೆಚ್ಚದ ಈ ಬೃಹತ್ ಅಣೆಕಟ್ಟು ಯೋಜನೆಯ ಸುರಕ್ಷತೆಯ ಬಗ್ಗೆ ಸ್ವತಃ ಚೀನಾದ ಸಂಶೋಧಕರೇ ವರದಿ ಬಿಡುಗಡೆ ಮಾಡಿರುವುದು ಈಗ ಜಾಗತಿಕವಾಗಿ ಭಾರಿ ಚರ್ಚೆಗೆ ಕಾರಣವಾಗಿದೆ.

ಚೀನೀ ವಿಜ್ಞಾನಿಗಳ ವರದಿಯಲ್ಲೇನಿದೆ?

ಚೀನಾ ಜಿಯೋಲಾಜಿಕಲ್ ಸರ್ವೇ ಮೇಲ್ವಿಚಾರಣೆಯಲ್ಲಿ ನಡೆದ ಸಂಶೋಧನೆಯು ‘ಸೆಡಿಮೆಂಟರಿ ಜಿಯೋಲಜಿ ಅಂಡ್ ಟೆಥಿಯನ್ ಜಿಯೋಲಜಿ’ ಎಂಬ ಜರ್ನಲ್‌ನಲ್ಲಿ ಪ್ರಕಟವಾಗಿದೆ.

  • ಪೈಜೆನ್ ದೋಷರೇಖೆ (Paizhen Fault): ಅಣೆಕಟ್ಟಿನ ಜಲಾನಯನ ಪ್ರದೇಶದ ಅಡಿಯಲ್ಲೇ ಈ ಅಪಾಯಕಾರಿ ದೋಷರೇಖೆ ಹಾದುಹೋಗುತ್ತದೆ. ಇದು ಹಿಮಯುಗದ ಕಾಲದಿಂದಲೂ ಅತ್ಯಂತ ಸಕ್ರಿಯವಾಗಿದೆ.
  • ದುರ್ಬಲ ಮಣ್ಣು ಮತ್ತು ಬಂಡೆಗಳು: ಈ ಪ್ರದೇಶದಲ್ಲಿ ನಿರಂತರ ಟೆಕ್ಟಾನಿಕ್ ಚಟುವಟಿಕೆಗಳು ನಡೆಯುತ್ತಿರುವುದರಿಂದ ಸುತ್ತಮುತ್ತಲಿನ ಬಂಡೆಗಳು ಬಿರುಕು ಬಿಟ್ಟಿವೆ ಮತ್ತು ಮಣ್ಣಿನ ಹಿಡಿತ ತೀರಾ ಸಡಿಲವಾಗಿದೆ.
  • ಭೂಕಂಪ ಮತ್ತು ಭೂಕುಸಿತದ ಭೀತಿ: ಅಣೆಕಟ್ಟಿನಲ್ಲಿ ದೀರ್ಘಕಾಲದವರೆಗೆ ನೀರು ಸಂಗ್ರಹವಾದಾಗ ಉಂಟಾಗುವ ಒತ್ತಡ ಮತ್ತು ದೋಷರೇಖೆಯ ಚಲನೆಯಿಂದಾಗಿ, ಜಲಾನಯನ ಪ್ರದೇಶದ ಎರಡೂ ಬದಿಗಳಲ್ಲಿ ಭೀಕರ ಭೂಕುಸಿತಗಳು ಉಂಟಾಗಬಹುದು. ಅಲ್ಲದೆ, 2017 ರಲ್ಲಿ ಇದೇ ಪ್ರದೇಶದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದನ್ನು ವಿಜ್ಞಾನಿಗಳು ನೆನಪಿಸಿದ್ದಾರೆ.

ಇದನ್ನೂ ಓದಿ: ಇಬ್ಬರು ಚೀನೀ ಹಳ್ಳಿಗರ ಯಶೋಗಾಥೆ; ಹಣತೆ ದೀಪದಲ್ಲಿ ಓದಿ ಜಗತ್ತಿಗೆ ಇವಿ ಕ್ರಾಂತಿ ಸೃಷ್ಟಿಸಿದವ ಒಬ್ಬ

ಈ ದೋಷರೇಖೆಯು ಅಣೆಕಟ್ಟು ಮಾತ್ರವಲ್ಲದೆ ಅದರ ಸುತ್ತಮುತ್ತ ನಿರ್ಮಿಸಲಾಗುತ್ತಿರುವ ಸುರಂಗಗಳು, ರಸ್ತೆಗಳು ಮತ್ತು ಸೇತುವೆಗಳ ಸ್ಥಿರತೆಗೆ ದೊಡ್ಡ ಸವಾಲಾಗಿದೆ ಎಂದು ವಿಜ್ಞಾನಿಗಳು ಇಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಡ್ಯಾಮ್ ಕಟ್ಟದಿರಿ ಎಂದು ಈ ವರದಿಯಲ್ಲಿ ಸಲಹೆ ನೀಡಲಾಗಿಲ್ಲ. ಆದರೆ, ಎದುರಾಗುವ ಸವಾಲುಗಳನ್ನು ಎತ್ತಿ ತೋರಿಸಲಾಗಿದ್ದು, ಯೋಜನೆಯ ಪ್ರತೀ ಹಂತದಲ್ಲೂ ಮುನ್ನೆಚ್ಚರಿಕೆ ಕೈಗೊಳ್ಳುವ ಅಗತ್ಯ ಇರುವುದನ್ನು ವಿವರಿಸಲಾಗಿದೆ.

ಭಾರತ ಮತ್ತು ಬಾಂಗ್ಲಾದೇಶಕ್ಕೆ ಯಾಕೆ ಆತಂಕ?

ಈ ಅಣೆಕಟ್ಟನ್ನು ಚೀನಾ ದೇಶವು ಭಾರತದ ಅರುಣಾಚಲ ಪ್ರದೇಶದ ಗಡಿಗೆ ತೀರಾ ಹತ್ತಿರದಲ್ಲಿರುವ ‘ಗ್ರೇಟ್ ಬೆಂಡ್’ (ನದಿಯು ತೀವ್ರ ತಿರುವು ಪಡೆಯುವ ಜಾಗ) ಬಳಿ ನಿರ್ಮಿಸುತ್ತಿದೆ. ಇಲ್ಲಿಂದಲೇ ಈ ನದಿಯು ಭಾರತಕ್ಕೆ ‘ಸಿಯಾಂಗ್’ ಆಗಿ ಪ್ರವೇಶಿಸಿ, ನಂತರ ಅಸ್ಸಾಂನಲ್ಲಿ ‘ಬ್ರಹ್ಮಪುತ್ರಾ’ ಆಗಿ ಹರಿಯುತ್ತದೆ. ಬಾಂಗ್ಲಾದೇಶದಲ್ಲಿ ಇದಕ್ಕೆ ಬೇರೊಂದು ಹೆಸರಿದೆ.

ಕೃತಕ ಪ್ರವಾಹದ ಭೀತಿ: ಭೂಕಂಪ ಅಥವಾ ಭೂಕುಸಿತದ ಕಾರಣದಿಂದ ಈ ದೈತ್ಯ ಅಣೆಕಟ್ಟಿಗೆ ಏನಾದರೂ ಹಾನಿಯಾದರೆ ಅಥವಾ ಚೀನಾ ಏಕಾಏಕಿ ನೀರು ಬಿಟ್ಟರೆ, ಭಾರತದ ಈಶಾನ್ಯ ರಾಜ್ಯಗಳು (ಅರುಣಾಚಲ ಪ್ರದೇಶ, ಅಸ್ಸಾಂ) ಮತ್ತು ಬಾಂಗ್ಲಾದೇಶದಲ್ಲಿ ಜಲಪ್ರಳಯವೇ ಸಂಭವಿಸಬಹುದು.

ನೀರಿನ ಭದ್ರತೆಗೆ ಧಕ್ಕೆ: ಒಣ ಹವೆ ಇರುವಾಗ ಚೀನಾ ನೀರನ್ನು ಹಿಡಿದಿಟ್ಟುಕೊಂಡರೆ, ಭಾರತದ ನದಿಗಳು ಒಣಗಿ ಕೋಟ್ಯಂತರ ಜನರ ಜೀವನ ಮತ್ತು ಕೃಷಿ ನಾಶವಾಗಬಹುದು ಎನ್ನುವ ಆತಂಕ ಇದೆ. ಆದರೆ, ಭಾರತದಲ್ಲಿ ಹರಿಯುವ ಬ್ರಹ್ಮಪುತ್ರಾ ನದಿಗೆ ಚೀನಾದ ಕೊಡುಗೆ ಶೇ. 30ರಷ್ಟಿರಬಹುದು ಎನ್ನಲಾಗಿದೆ. ಇನ್ನುಳಿದ ನೀರು ಭಾರತೀಯ ಪ್ರದೇಶಗಳಲ್ಲಿರುವ ಉಪನದಿಗಳಿಂದ ಬರುತ್ತಿದೆ.

ಇದನ್ನೂ ಓದಿ: ಬಿಎಸ್ಸೆನ್ನೆಲ್​ನಿಂದ ಸೆಟಿಲೈಟ್ ಫೋನ್; ಬೆಲೆ 1.34 ಲಕ್ಷ ರೂ; ಮಾಸಿಕ ಸಬ್​ಸ್ಕ್ರಿಪ್ಷನ್ ಪ್ಲಾನ್ 3,500 ರೂನಿಂದ ಆರಂಭ

ಜಗತ್ತಿನ ಅತಿ ದೊಡ್ಡ ಅಣೆಕಟ್ಟು ಕಟ್ಟುವ ಹುಮ್ಮಸ್ಸು ಚೀನಾದ್ದು

ಚೀನಾ ಕಳೆದ ವರ್ಷವಷ್ಟೇ ಇದರ ಕಾಮಗಾರಿಯನ್ನು ಆರಂಭಿಸಿದ್ದು, 2030 ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಇದು ಚೀನಾದ ಪ್ರಸಿದ್ಧ ‘ತ್ರೀ ಗೋರ್ಜಸ್ ಡ್ಯಾಮ್’ಗಿಂತ ಮೂರು ಪಟ್ಟು ಹೆಚ್ಚು ಅಂದರೆ ವಾರ್ಷಿಕ ಸುಮಾರು 60 ಗಿಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಅಣೆಕಟ್ಟು ಹಾಗೂ ಜಲವಿದ್ಯುತ್ ಯೋಜನೆ ಎನಿಸಲಿದೆ.

ಆದರೆ, ಈಗ ಪ್ರಕೃತಿಯ ನಿಯಮಗಳನ್ನೇ ಮೀರಿ ಭೂಕಂಪ ಪೀಡಿತ ಹಿಮಾಲಯದ ಸೂಕ್ಷ್ಮ ವಲಯದಲ್ಲಿ ಇಂತಹ ದೈತ್ಯ ಸಾಹಸಕ್ಕೆ ಕೈಹಾಕಿರುವುದು ಇಡೀ ದಕ್ಷಿಣ ಏಷ್ಯಾದ ಪರಿಸರ ಮತ್ತು ಜನರ ಸುರಕ್ಷತೆಯನ್ನು ಅಪಾಯಕ್ಕೆ ದೂಡಿದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:12 pm, Fri, 10 July 26

Source link

Leave a Reply

Your email address will not be published. Required fields are marked *