ಇತ್ತೀಚಿನ ದಿನಗಳಲ್ಲಿ ತಲೆನೋವು, ಒತ್ತಡ ಮತ್ತು 0 (Migraine) ಸಮಸ್ಯೆಗಳು ಸಾಮಾನ್ಯವಾಗಿವೆ. ಆದರೆ ಕೆಲವೊಮ್ಮೆ ಇದೇ ಲಕ್ಷಣಗಳು ಬ್ರೇನ್ ಟ್ಯೂಮರ್ (Brain Tumor) ಎಂಬ ಗಂಭೀರ ಸಮಸ್ಯೆಯ ಸೂಚನೆಯಾಗಿರಬಹುದು. ಹೌದು, ಆರಂಭಿಕ ಹಂತದಲ್ಲಿ ಬ್ರೇನ್ ಟ್ಯೂಮರ್ ಲಕ್ಷಣಗಳು ಸಾಮಾನ್ಯ ತಲೆನೋವಿನಂತೆ ಕಾಣುವುದರಿಂದ ಹಲವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನ್ಯೂರೋ ಸರ್ಜನ್ಗಳ ಪ್ರಕಾರ, ನಿರಂತರ ತಲೆನೋವು, ದೃಷ್ಟಿ ಸಮಸ್ಯೆ, ವಾಂತಿ, ಸಮತೋಲನ ಕಳೆದುಕೊಳ್ಳುವುದು ಅಥವಾ ಮಾತಿನಲ್ಲಿ ತೊಂದರೆ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಹಾಗಾದರೆ ಸಾಮಾನ್ಯ ತಲೆನೋವು ಮತ್ತು ಬ್ರೇನ್ ಟ್ಯೂಮರ್ ಗಿರುವ ವ್ಯತ್ಯಾಸವೇನು, ಅದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸಾಮಾನ್ಯ ತಲೆನೋವಿಗಿಂತ ವಿಭಿನ್ನವಾದ ನೋವು:
ಬ್ರೇನ್ ಟ್ಯೂಮರ್ನಿಂದ ಉಂಟಾಗುವ ತಲೆನೋವು ಸಾಮಾನ್ಯ ಒತ್ತಡದ ತಲೆನೋವಿನಂತಿರದು. ಇದು ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ವಿಶೇಷವಾಗಿ ಬೆಳಿಗ್ಗೆ ಸಮಯದಲ್ಲಿ ಹೆಚ್ಚು ತೀವ್ರವಾಗಿರುತ್ತದೆ. ಕೆಮ್ಮಿದಾಗ, ತಲೆ ತಗ್ಗಿಸಿದಾಗ ಅಥವಾ ಮಲಗಿದಾಗ ನೋವು ಹೆಚ್ಚಾಗಬಹುದು. ಇದನ್ನು ನಿದ್ರಾಹೀನತೆ ಅಥವಾ ಮೈಗ್ರೇನ್ ಎಂದು ನಿರ್ಲಕ್ಷ್ಯ ಮಾಡುವುದು ಅಪಾಯಕಾರಿಯಾಗಿದೆ.
ನಿರಂತರ ವಾಂತಿ ಮತ್ತು ವಾಕರಿಕೆ:
ಬೆಳಿಗ್ಗೆ ಎದ್ದ ಕೂಡಲೇ ವಾಕರಿಕೆ ಅಥವಾ ವಾಂತಿ ಆಗುವುದು ಕೂಡ ಪ್ರಮುಖ ಲಕ್ಷಣವಾಗಿದೆ. ಮೆದುಳಿನ ಒಳಭಾಗದಲ್ಲಿ ಒತ್ತಡ ಹೆಚ್ಚಾದಾಗ ಈ ಸಮಸ್ಯೆ ಕಾಣಿಸಬಹುದು. ಹಲವರು ಇದನ್ನು ಅಜೀರ್ಣ ಅಥವಾ ಆಸಿಡ್ ಸಮಸ್ಯೆ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ.
ದೃಷ್ಟಿ ಸಮಸ್ಯೆ:
ಬ್ರೇನ್ ಟ್ಯೂಮರ್ ಮೆದುಳಿನ ದೃಷ್ಟಿಯನ್ನು ನಿಯಂತ್ರಿಸುವ ಭಾಗದ ಮೇಲೆ ಪರಿಣಾಮ ಬೀರಿದರೆ, ಮಸುಕಾಗಿ ಕಾಣುವುದು, ಡಬಲ್ ವಿಸನ್, ಬೆಳಕಿಗೆ ಕಣ್ಣು ಬಿಡಲು ಸಾಧ್ಯವಾಗದಿರುವುದು ಅಥವಾ ಕೆಲ ಕ್ಷಣ ದೃಷ್ಟಿ ಕಳೆದುಕೊಂಡಂತೆ ಆಗಬಹುದು. ಆದರೆ ಮೊಬೈಲ್ ಹೆಚ್ಚು ಬಳಸುವುದರಿಂದಲೂ ಈ ರೀತಿ ಆಗುತ್ತದೆ ಎಂದು ನಿರ್ಲಕ್ಷ್ಯ ಮಾಡಬಾರದು.
ಇದನ್ನೂ ಓದಿ: ಬ್ರೈನ್ ಟ್ಯೂಮರ್ಗೆ ಶಸ್ತ್ರಚಿಕಿತ್ಸೆಯೊಂದೇ ಪರಿಹಾರವೇ? ಮಿಥ್ ಮತ್ತು ಫ್ಯಾಕ್ಟ್ಸ್ ಬಗ್ಗೆ ತಿಳಿದುಕೊಳ್ಳಿ
ನೆನಪಿನ ಶಕ್ತಿ ಮತ್ತು ಮಾತನಾಡುವಾಗ ಸಮಸ್ಯೆ:
ಯಾವುದಾದರೂ ಮುಖ್ಯ ವಿಷಯವನ್ನು ಮರೆತುಹೋಗುವುದು, ಸರಿಯಾಗಿ ಗಮನ ಕೇಂದ್ರೀಕರಿಸಲಾಗದಿರುವುದು ಅಥವಾ ಮಾತನಾಡುವಾಗ ಪದಗಳು ನೆನಪಿಗೆ ಬರದಿರುವುದು ಕೂಡ ಬ್ರೇನ್ ಟ್ಯೂಮರ್ನ ಸೂಚನೆಯಾಗಿರಬಹುದು.
ಸಮತೋಲನ ಕಳೆದುಕೊಳ್ಳುವುದು: ನಡೆಯುವಾಗ ವಾಲುವುದು, ತಲೆಸುತ್ತು, ದೇಹದ ಸಮತೋಲನ ತಪ್ಪುವುದು ಅಥವಾ ಬೇಗ ದಣಿವಾಗುವುದು ಕೂಡ ಎಚ್ಚರಿಕೆಯ ಲಕ್ಷಣಗಳಾಗಿವೆ.
ಚಿಕಿತ್ಸೆ ಹೇಗೆ?
ಬ್ರೇನ್ ಟ್ಯೂಮರ್ ಚಿಕಿತ್ಸೆಯು ಅದರ ಗಾತ್ರ, ಪ್ರಕಾರ ಮತ್ತು ಇರುವ ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. ಸರ್ಜರಿ, ರೇಡಿಯೇಷನ್ ಥೆರಪಿ ಮತ್ತು ಕಿಮೋಥೆರಪಿ ಸೇರಿದಂತೆ ಹಲವು ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ