
ಬೆಂಗಳೂರು, ಜೂನ್ 28: ದೇಶದಲ್ಲಿ ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಉದ್ದೇಶದಿಂದ ಇಂದು ರಾಷ್ಟ್ರದಾದ್ಯಂತ ಹಮ್ಮಿಕೊಳ್ಳಲಾಗಿರುವ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ್ದಾರೆ. ಬೆಂಗಳೂರಿನ ಸಿಎಂ ನಿವಾಸದಲ್ಲೇ ಈ ಬಾರಿಯ ರಾಜ್ಯ ಮಟ್ಟದ ಪೋಲಿಯೋ ಲಸಿಕಾ ಅಭಿಯಾನಕ್ಕೆ ಅಧಿಕೃತ ಚಾಲನೆ ದೊರೆತಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 1972ರಲ್ಲೇ ಇಂದಿರಾ ಗಾಂಧಿಯವರು ದೇಶದಲ್ಲಿ ಪೋಲಿಯೋ ನಿರ್ಮೂಲನೆಗೆ ಮುನ್ನುಡಿ ಬರೆದಿದ್ದರು. ಮಕ್ಕಳ ಭವಿಷ್ಯಕ್ಕೆ ಮುಂದೆ ಯಾವುದೇ ತೊಂದರೆ ಆಗಬಾರದು ಎಂಬ ದೂರದೃಷ್ಟಿಯಿಂದ ಈ ಲಸಿಕೆ ಹಾಕಲಾಗುತ್ತದೆ. ನಮ್ಮ ಅಕ್ಕಪಕ್ಕದ ದೇಶಗಳಲ್ಲಿ ಇಂದಿಗೂ ಪೋಲಿಯೋ ಸಮಸ್ಯೆ ಜೀವಂತವಾಗಿದೆ, ಆದರೆ ಅದು ನಮ್ಮಲ್ಲಿ ಮರುಕಳಿಸಬಾರದು ಎಂದು ಎಚ್ಚರಿಸಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜವಾಬ್ದಾರಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜನೆಗೊಂಡಿದ್ದು, ಸಿಎಂ ನಿವಾಸದಿಂದಲೇ ಅಭಿಯಾನ ಆರಂಭಿಸಲು ಅಧಿಕಾರಿಗಳು ನಿರ್ಧರಿಸಿದ್ದರು. ಇದಕ್ಕೆ ಎಲ್ಲಾ ಇಲಾಖೆಯ ಅಧಿಕಾರಿಗಳು ಉತ್ತಮ ಸಹಕಾರ ನೀಡಿದ್ದಾರೆ ಎಂದು ಸಿಎಂ ಶ್ಲಾಘಿಸಿದರು. ವಿಶೇಷವಾಗಿ ಹಳ್ಳಿ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ತಲುಪಬೇಕು ಮತ್ತು ಪೋಷಕರು ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ