ಕಠ್ಮಂಡು, ಜೂನ್ 22: ಭಾರತದೊಂದಿಗಿನ ಗಡಿ ವಿವಾದದ ಬಗ್ಗೆ ಮಾತನಾಡಿದ ನೇಪಾಳದ ಪ್ರಧಾನಿ ಬಾಲೆನ್ ಶಾ ಕೆಲವು ವಿಷಯಗಳನ್ನು ಸ್ಪಷ್ಟಪಡಿಸಿದ್ದಾರೆ. ಭಾರತದೊಂದಿಗಿನ ಗಡಿ ವಿವಾದವನ್ನು ಪರಿಹರಿಸಲು ಬ್ರಿಟನ್ನಿಂದ ಮಧ್ಯಸ್ಥಿಕೆಗೆ ಯಾವುದೇ ವಿನಂತಿಯನ್ನು ಮಾಡಿಲ್ಲ ಎಂದು ಬಾಲೆನ್ ಶಾ (Balen Shah) ಹೇಳಿದ್ದಾರೆ. ಭಾರತ ಮತ್ತು ನೇಪಾಳ ನಡುವಿನ ಗಡಿ ಸಮಸ್ಯೆಗಳು ದ್ವಿಪಕ್ಷೀಯ ವಿಷಯಗಳಾಗಿವೆ. ಇವುಗಳನ್ನು ಉಭಯ ದೇಶಗಳು ನೇರ ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಬಗೆಹರಿಸಿಕೊಳ್ಳಲು ಶಕ್ತವಾಗಿವೆ. ಇದರಲ್ಲಿ ಮೂರನೇ ದೇಶದ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ನೇಪಾಳದ ನಡುವೆ ಲಿಪುಲೇಖ್, ಲಿಂಪಿಯಾಧುರ ಮತ್ತು ಕಲಾಪಾಣಿ ಕುರಿತು ಹಳೆಯ ಗಡಿ ವಿವಾದವಿದೆ. ಎರಡೂ ದೇಶಗಳು ಈ ಪ್ರದೇಶಗಳನ್ನು ತಮ್ಮದೇ ಎಂದು ಹೇಳಿಕೊಳ್ಳುತ್ತವೆ. ಈ ಪ್ರದೇಶಗಳು ಉತ್ತರಾಖಂಡದ ಭಾಗವೆಂದು ಭಾರತ ಹೇಳುತ್ತದೆ. ಆದರೆ, ನೇಪಾಳ ಇದು ತನಗೆ ಸೇರಿದ್ದೆಂದು ಹೇಳುತ್ತದೆ. ಕಲಾಪಾನಿ ಮತ್ತು ಲಿಪುಲೇಖ್ ನೇಪಾಳದ ಭಾಗ ಎಂಬುದಕ್ಕೆ ನಮ್ಮ ಬಳಿ ಪುರಾವೆಗಳಿವೆ ಎಂದು ಬಾಲೆನ್ ಶಾ ಹೇಳಿಕೊಂಡಿದ್ದಾರೆ. ಈ ಜಾಗ ತಮ್ಮದು ಎನ್ನುವುದಕ್ಕೆ ಭಾರತದ ಬಳಿ ಪುರಾವೆಗಳಿದ್ದರೆ ಅವರು ಅದನ್ನು ತೋರಿಸಬೇಕು ಎಂದು ಬಾಲೆನ್ ಶಾ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಭಾರತ-ನೇಪಾಳ ಗಡಿ ವಿಷಯದಲ್ಲಿ ಮೂರನೇ ದೇಶದ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ; ಭಾರತದ ಖಡಕ್ ಸಂದೇಶ
1816ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ನೇಪಾಳದ ರಾಜರ ನಡುವೆ ಐತಿಹಾಸಿಕ ‘ಸುಗೌಲಿ ಒಪ್ಪಂದ’ (Treaty of Sugauli) ನಡೆದಿತ್ತು. ಈ ಒಪ್ಪಂದದ ಆಧಾರದ ಮೇಲೆಯೇ ಭಾರತ-ನೇಪಾಳ ಗಡಿಯನ್ನು ಗುರುತಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಲಿಂಪಿಯಾಧುರಾ, ಕಾಲಾಪಾನಿ ಮತ್ತು ಲಿಪುಲೇಖ್ ಪ್ರದೇಶಗಳ ಕುರಿತು ಉಭಯ ದೇಶಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದರಿಂದ, ಹಳೆಯ ದಾಖಲೆಗಳ ಪರಿಶೀಲನೆಗಾಗಿ ಬ್ರಿಟನ್ ಮಧ್ಯಸ್ಥಿಕೆಯ ಪ್ರಸ್ತಾಪ ಕೇಳಿಬಂದಿತ್ತು. ಆದರೆ, ಮಧ್ಯಸ್ಥಿಕೆ ವಹಿಸುವಂತೆ ನೇಪಾಳ ಕೋರಿಲ್ಲ ಎಂದು ನೇಪಾಳದ ಪ್ರಧಾನಿ ಸ್ಪಷ್ಟಪಡಿಸಿದ್ದಾರೆ.
ಭಾರತ ಸರ್ಕಾರ ಕೂಡ ಮೊದಲಿನಿಂದಲೂ ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಕಟುವಾಗಿ ವಿರೋಧಿಸುತ್ತಾ ಬಂದಿದೆ. ಗಡಿ ವಿವಾದ ಸೇರಿದಂತೆ ನೆರೆಹೊರೆಯ ದೇಶಗಳೊಂದಿಗಿನ ಎಲ್ಲಾ ಸಮಸ್ಯೆಗಳನ್ನು ಪರಸ್ಪರ ಗೌರವ ಮತ್ತು ಐತಿಹಾಸಿಕ ಪುರಾವೆಗಳ ಆಧಾರದ ಮೇಲೆ ದ್ವಿಪಕ್ಷೀಯವಾಗಿಯೇ ಬಗೆಹರಿಸಿಕೊಳ್ಳಬೇಕು ಎಂಬುದು ಭಾರತದ ದೃಢ ನಿಲುವಾಗಿದೆ. ನೇಪಾಳದ ಪ್ರಧಾನಿಯವರ ಈ ಇತ್ತೀಚಿನ ಹೇಳಿಕೆಯು ಭಾರತದ ನಿಲುವಿಗೆ ಪೂರಕವಾಗಿದ್ದು, ಉಭಯ ದೇಶಗಳ ನಡುವಿನ ರಾಜತಾಂತ್ರಿಕ ನಂಬಿಕೆಯನ್ನು ಮತ್ತಷ್ಟು ಬಲಪಡಿಸಲಿದೆ.
ಇದನ್ನೂ ಓದಿ: ಬಲಿಷ್ಠ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧ ಬಯಸುತ್ತೇವೆ: ನೇಪಾಳ ವಿದೇಶಾಂಗ ಸಚಿವ ಶಿಶಿರ್ ಖನಾಲ್
ಭಾರತ ಮತ್ತು ನೇಪಾಳ ದೇಶಗಳು ಶತಮಾನಗಳಿಂದಲೂ ಆಳವಾದ ಸಾಂಸ್ಕೃತಿಕ, ಧಾರ್ಮಿಕ ಮತ್ತು ಐತಿಹಾಸಿಕ ಬಾಂಧವ್ಯವನ್ನು ಹೊಂದಿವೆ. ಇವೆರಡೂ ದೇಶಗಳ ನಡುವೆ ಯಾವುದೇ ವೀಸಾ ಇಲ್ಲದೆ ಮುಕ್ತವಾಗಿ ಸಂಚರಿಸಬಹುದಾದ ವಿಶಿಷ್ಟ ಗಡಿ ವ್ಯವಸ್ಥೆಯಿದೆ. ಭಾರತ ಮತ್ತು ನೇಪಾಳ ಸುಮಾರು 1,751 ಕಿಲೋಮೀಟರ್ ಉದ್ದದ ಹಂಚಿಕೆಯ ಗಡಿಯನ್ನು ಹೊಂದಿವೆ. ಭಾರತದ ಐದು ರಾಜ್ಯಗಳು ನೇಪಾಳದೊಂದಿಗೆ ಗಡಿಯನ್ನು ಹಂಚಿಕೊಳ್ಳುತ್ತವೆ. ಅವುಗಳೆಂದರೆ, ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ.
ಭಾರತ ಮತ್ತು ನೇಪಾಳ ನಡುವಿನ ಗಡಿಯು ಮುಕ್ತವಾಗಿದೆ. ಅಂದರೆ, ಉಭಯ ದೇಶಗಳ ನಾಗರಿಕರು ಪರಸ್ಪರ ದೇಶಗಳಿಗೆ ಭೇಟಿ ನೀಡಲು ಉದ್ಯೋಗ ಮಾಡಲು ಅಥವಾ ವ್ಯಾಪಾರ ಮಾಡಲು ಪಾಸ್ಪೋರ್ಟ್ ಅಥವಾ ವೀಸಾ ಹೊಂದುವ ಅಗತ್ಯವಿಲ್ಲ. ಕೇವಲ ಗುರುತಿನ ಚೀಟಿ ಇದ್ದರೆ ಸಾಕು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ