Headlines

ಭೀಕರ ಬರದ ಛಾಯೆಗೆ ಸಾಕ್ಷಿಯಾದ ಬಾಗಲಕೋಟೆಯ ಅದೊಂದು ಗ್ರಾಮ: ತುತ್ತಿನ ಚೀಲ ತುಂಬಿಸಿಕೊಳ್ಳಲು ಗುಳೆ ಹೋದ ಜನ – Kannada News | Bagalkote’s Lingapura Faces Severe Drought: 80% of Homes Locked as Farmers Migrate

ಗುಳೆ ಹೋದ ಗ್ರಾಮಸ್ಥರುImage Credit source: tv9 kannada

ಬಾಗಲಕೋಟೆ, ಜುಲೈ 20: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮಕ್ಕೆ ಕಾಲಿಟ್ಟರೆ ತೆರೆದ ಬಾಗಿಲಿನ ಮನೆಗಳನ್ನು ನೋಡುವುದೇ ಅಪರೂಪ. ಗ್ರಾಮದಲ್ಲಿ ಬರೀ ಬೀಗ ಹಾಕಿದ ಮನೆಗಳೇ ಸ್ವಾಗತಿಸುತ್ತವೆ. ಅಲ್ಲಲ್ಲಿ ಅಜ್ಜಿಯರು, ಹಿರಿಯರು ಕಟ್ಟೆ ಮೇಲೆ ಬಾಡಿದ ಮುಖದಲ್ಲಿ ಕೂತಿರುವ ದೃಶ್ಯ ಸಾಮಾನ್ಯ. ಇಡೀ ಊರಿಗೆ ಊರೇ ಬಿಕೋ ಎನ್ನುತ್ತಿದ್ದು, ಬರದ (drought) ಭೀಕರ ಛಾಯೆಗೆ ಸಾಕ್ಷಿಯಾಗಿದೆ. ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಾಗಲಕೋಟೆ (bagalkot) ಜಿಲ್ಲೆಯಲ್ಲಿ ಬರದ ನರಕ ದರ್ಶನವಾಗುತ್ತಿದ್ದು, ರೈತರು ಬದುಕು ಸಾಗಿಸಲು ಊರನ್ನೇ ತೊರೆದು ವಲಸೆ ಹೋಗುತ್ತಿದ್ದಾರೆ.

ಗ್ರಾಮದಲ್ಲಿ ನೀರವಮೌನ

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಸದ್ಯ ನೀರವಮೌನ ಆವರಿಸಿದೆ. ಈ ಗ್ರಾಮಕ್ಕೆ ಕಾಲಿಟ್ಟರೆ ಸಾಕು ಬರದ ನರಕದರ್ಶನವಾಗುತ್ತದೆ. ತಮ್ಮ ತುತ್ತಿನ ಚೀಲ ತುಂಬಿಸಿಕೊಳ್ಳುವುದಕ್ಕೆ ಮನೆ, ಆಸ್ತಿ-ಪಾಸ್ತಿ ಬಿಟ್ಟು ಜನರು ಗುಳೆ ಹೋಗಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬಿತ್ತನೆ ಇಲ್ಲ. ಕೆಲ‌ಕಡೆ ಬಿತ್ತಿದರೂ ಬೆಳೆ ಹಾಳಾಗಿದೆ. ಹೀಗಿರುವಾಗಿ ಕೃಷಿ ಕೆಲಸ ಕೂಡ ಇಲ್ಲ.

ಇದನ್ನೂ ಓದಿ: Karnataka Dam Water Level: ಇನ್ನೂ 100 ಅಡಿ ತಲುಪಿಲ್ಲ ಕೆಆರ್​ಎಸ್, ಕರ್ನಾಟಕದ ಡ್ಯಾಂಗಳ ಇಂದಿನ ನೀರಿನ ಮಟ್ಟದ ವಿವರ

ಕೃಷಿ ಚಟುವಟಿಕೆಗಳು ಇಲ್ಲದಿರುವುದು ಹಾಗೂ ಉದ್ಯೋಗ ಖಾತರಿ (ಜಿ ರಾಮ್ ಜಿ) ಕೆಲಸಗಳು ಸರಿಯಾಗಿ ಸಿಗದ ಕಾರಣ ಜೀವನ ನಡೆಸುವುದು ದುಸ್ತರವಾಗಿದೆ. ಇದರಿಂದ ಅನಿವಾರ್ಯವಾಗಿ ಗ್ರಾಮದ ರೈತರು, ಯುವ ರೈತರು ಎಲ್ಲರೂ‌ ಮನೆಗೆ ಬೀಗ ಹಾಕಿಕೊಂಡು ಮಂಗಳೂರು, ಉಡುಪಿ, ಗೋವಾ ರಾಜ್ಯಕ್ಕೆ ದುಡಿಯುವುದಕ್ಕೆ ಗುಳೆ ಹೋಗಿದ್ದಾರೆ. ‘ಮಳೆಯಿಲ್ಲ, ಬೆಳೆಯಿಲ್ಲದೆ ಬರ ಬಿದ್ದಿದೆ. ಆದ್ದರಿಂದ‌ ನಮ್ಮಂತಹ ಮುದುಕರನ್ನು ಬಿಟ್ಟು ಎಲ್ಲರೂ ಗುಳೆ ಹೋಗಿದ್ದಾರೆ ಏನು ಮಾಡುವುದು ಅಂತ ಹಿರಿಜೀವ ಲಕ್ಷ್ಮಣ ಕೋಟಿ ಅಳಲು ತೋಡಿಕೊಂಡಿದ್ದಾರೆ.

80% ಮನೆಗಳಿಗೆ ಬೀಗ

ಲಿಂಗಾಪುರ ಗ್ರಾಮದಲ್ಲಿ 300ಕ್ಕೂ ಅಧಿಕ‌ ಮನೆಗಳಿವೆ. ಇನ್ನು ಗ್ರಾಮದಲ್ಲಿ 1500 ರಿಂದ 2 ಸಾವಿರ ಜನ ಸಂಖ್ಯೆಯಿದೆ. ಬಹುತೇಕ ಗ್ರಾಮದ ‌ಜನರು ರೈತರು ಕೃಷಿ ಕಾರ್ಮಿಕರಾಗಿದ್ದಾರೆ. ಆದರೆ ಇದೀಗ ಊರಿನಲ್ಲಿ ಪ್ರತಿಶತ 80 ರಷ್ಟು ಜನರು ಊರನ್ನು ಬಿಟ್ಟು ಗುಳೆ ಹೋಗಿದ್ದಾರೆ. ಇದರಿಂದ ಗ್ರಾಮದಲ್ಲಿ ‌ಸಾಲು‌ ಸಾಲು‌ ಬೀಗ ಹಾಕಿರುವ‌ ಮನೆಗಳೇ ಕಾಣುತ್ತವೆ. ಮನೆಗೆ ಬೀಗ ಹಾಕಿ ಪತ್ನಿ, ಮಕ್ಕಳ ಸಮೇತ ರೈತರು ಊರನ್ನು ತೊರೆದಿದ್ದಾರೆ. ಇನ್ನು ಕೆಲವರು ವೃದ್ದರನ್ನು ಮನೆ ನೋಡಿಕೊಳ್ಳಲಿ ಅಂತ‌ ಬಿಟ್ಟು ಹೋಗಿದ್ದಾರೆ. ಇದರಿಂದ ಗ್ರಾಮದಲ್ಲಿ ಯುವಕರು ಕಾಣುವುದು ಅಪರೂಪವೆಂಬಂತಾಗಿದೆ.

ಕೈಗಾರಿಕೆಗಳಿಗೆ ಆದ್ಯತೆ ನೀಡುವಂತೆ ಒತ್ತಾಯ

ಈ ಊರು ಅಷ್ಟೇ ಅಲ್ಲದೇ ಗುಳೇದಗುಡ್ಡ ತಾಲೂಕಿನ ತೆಗ್ಗಿ, ಕೆಲವಡಿ, ಕರಡಿಗುಡ್ಡ, ಹಂಸನೂರು, ಬಾದಾಮಿ ತಾಲೂಕಿನ ಮುತ್ತಲಗೇರಿ, ಮುಷ್ಟಿಗೇರಿ, ಆಡಗಲ್ ಸೇರಿದಂತೆ 15ಕ್ಕೂ ಅಧಿಕ ಗ್ರಾಮಸ್ಥರು ಗುಳೆ ಹೋಗಿದ್ದಾರೆ. ಗ್ರಾಮದಲ್ಲಿ ಕೃಷಿ ಜೊತೆಗೆ ಇತರೆ ಕೆಲಸ ಮಾಡಿಕೊಂಡಿರುವ ಕೆಲ ಜನರಿದ್ದು, ಊರಿಗೆ ಜನಪ್ರನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಪರಿಸ್ಥಿತಿ ಅರಿತು ರೈತರಿಗೆ ಪರಿಹಾರ ನೀಡಬೇಕು. ಜೊತೆಗೆ ಈ ಭಾಗದಲ್ಲಿ ಕೈಗಾರಿಕೆಗಳು ಬರಬೇಕು. ಜಿಲ್ಲೆಯಲ್ಲಿ ಪ್ಯಾಕ್ಟರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರೆ ಇಂತಹ ಸಂದರ್ಭದಲ್ಲಿ ಜನರಿಗೆ ಆಸರೆಯಾಗುತ್ತದೆ. ಸರಕಾರ ಹಾಗೂ ಜನಪ್ರತಿನಿಧಿಗಳು ಕೈಗಾರಿಕೆಗಳಿಗೆ ಹೆಚ್ಚು ಆದ್ಯತೆ ನೀಡಿ ಕೈಗಾರಿಕೆ ತಂದರೆ ಮಾತ್ರ ಗುಳೆ ಹೋಗುವುದು ತಪ್ಪುತ್ತದೆ. ಆ ನಿಟ್ಟಿನಲ್ಲಿ ಸರಕಾರ ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಭೀಕರ ಬರಗಾಲದ ಛಾಯೆ: ಕೆರೆಗಳು ಬರಡು, ಬೆಳೆ ಒಣಗಿ ಅನ್ನದಾತ ಕಂಗಾಲು!

ಒಟ್ಟಿನಲ್ಲಿ ಕೈಕೊಟ್ಟ ಮಳೆ ಬರದ ಸ್ಥಿತಿ ತಂದೊಡ್ಡಿದ್ದು, ಗ್ರಾಮೀಣ ಭಾಗದ ಜನರು ಅದರಲ್ಲೂ ರೈತರು ಬಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡಿ ಇವರಿಗೆ ಆಸರೆಯಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *