
ಬಾಲಿವುಡ್ನ ಯಶಸ್ವಿ ಜೋಡಿಗಳಲ್ಲೊಂದಾದ ನಟ ಅಕ್ಷಯ್ ಕುಮಾರ್ (Akshay Kumar) ಮತ್ತು ನಿರ್ದೇಶಕ ಪ್ರಿಯದರ್ಶನ್ ಅವರು ದೀರ್ಘಕಾಲದ ನಂತರ ಮತ್ತೆ ಒಂದಾಗಿದ್ದಾರೆ. ಅವರಿಬ್ಬರ ಕಾಂಬಿನೇಷನ್ನಲ್ಲಿ ಬಹುನಿರೀಕ್ಷಿತ ಹಾರರ್ ಕಾಮಿಡಿ ಸಿನಿಮಾ ‘ಭೂತ್ ಬಂಗ್ಲ’ (Bhooth Bangla) ಸಿದ್ಧವಾಗಿದೆ. ಈಗ ಈ ಚಿತ್ರದ ಟ್ರೇಲರ್ (Bhooth Bangla Trailer) ಬಿಡುಗಡೆ ಆಗಿದ್ದು, ಸಿನಿರಸಿಕರಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ. ಏಪ್ರಿಲ್ 16ರಂದು ಈ ಚಿತ್ರ ವಿಶ್ವಾದ್ಯಂತ ತೆರೆಕಾಣಲಿದೆ. ಹಾರರ್ ಕಾಮಿಡಿ ಕಥಾಹಂದರ ಇರುವ ಈ ಸಿನಿಮಾ ಹೇಗಿದೆ ಎಂಬುದರ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿದೆ.
ಪ್ರಿಯದರ್ಶನ್ ಅವರ ವಿಶಿಷ್ಟ ಶೈಲಿಯ ಹಾಸ್ಯವು ‘ಭೂತ್ ಬಂಗ್ಲ’ ಟ್ರೇಲರ್ನಲ್ಲಿದೆ. ಹೀರೋಗೆ ಪಿತ್ರಾರ್ಜಿತವಾಗಿ ಒಂದು ಹಳೆಯ ಬಂಗಲೆ ಆಸ್ತಿಯಾಗಿ ಬರುತ್ತದೆ. ಆದರೆ, ಆ ಬಂಗಲೆಯ ಹಿಂದೆ ಒಂದು ಭಯಾನಕ ಅರಣ್ಯವಿರುತ್ತದೆ. ಕಥೆಯ ಮತ್ತೊಂದು ಆಸಕ್ತಿದಾಯಕ ತಿರುವೆಂದರೆ, ಮದುವೆಗಳೇ ನಡೆಯದ ಮಂಗಳಪುರ ಎಂಬ ಗ್ರಾಮದಲ್ಲಿ ಹೀರೋ ಮದುವೆ ನಿಶ್ಚಯವಾಗುತ್ತದೆ. ಅಲ್ಲಿಂದ ಆರಂಭವಾಗುವ ಗೊಂದಲ ಮತ್ತು ಹಾಸ್ಯದ ಸನ್ನಿವೇಶಗಳೇ ಈ ಚಿತ್ರದ ಜೀವಾಳ.
ಈ ಚಿತ್ರದ ದೊಡ್ಡ ಆಕರ್ಷಣೆ ಎಂದರೆ ಅದು ನಟಿ ಟಬು. ಟ್ರೇಲರ್ನಲ್ಲಿ ಅವರ ಎಂಟ್ರಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಚಿತ್ರದ ಗಂಭೀರತೆ ಮತ್ತು ನಿಗೂಢತೆಯನ್ನು ಹೆಚ್ಚಿಸುವಲ್ಲಿ ಅವರ ಪಾತ್ರ ಪ್ರಮುಖವಾಗಿರುವಂತೆ ಕಾಣುತ್ತಿದೆ. ಟ್ರೇಲರ್ನಲ್ಲಿ ಅದ್ದೂರಿ ದೃಶ್ಯಗಳು ಮತ್ತು ಹಾಸ್ಯದ ಸಂಭಾಷಣೆಗಳು ಇದ್ದರೂ ಕೂಡ ಚಿತ್ರದ ಮೂಲ ಕಥೆ ಸ್ವಲ್ಪ ಹಳೆಯ ಶೈಲಿಯದ್ದೇ ಇರಬಹುದು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿವೆ.
ಭೂತ್ ಬಂಗ್ಲ ಟ್ರೇಲರ್:
ಸದ್ಯ ಬಾಲಿವುಡ್ ಬಾಕ್ಸ್ ಆಫೀಸ್ನಲ್ಲಿ ರಣವೀರ್ ಸಿಂಗ್ ಅವರ ‘ಧುರಂಧರ್ 2’ ಸಿನಿಮಾ ಸುನಾಮಿ ಎಬ್ಬಿಸಿದೆ. 1000 ಕೋಟಿಗೂ ರೂಪಾಯಿಗೂ ಅಧಿಕ ಗಳಿಕೆ ಮಾಡಿರುವ ಆ ಚಿತ್ರದ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಇಂತಹ ಸಂದರ್ಭದಲ್ಲಿ, ಪ್ರೇಕ್ಷಕರು ಹಾರರ್ ಕಾಮಿಡಿ ಶೈಲಿಯ ‘ಭೂತ್ ಬಂಗ್ಲ’ ಚಿತ್ರಕ್ಕೆ ಎಷ್ಟರ ಮಟ್ಟಿಗೆ ಸ್ಪಂದಿಸುತ್ತಾರೆ ಎಂಬುದು ಈಗಿರುವ ದೊಡ್ಡ ಪ್ರಶ್ನೆ.
ಇದನ್ನೂ ಓದಿ: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಅವರ ಕಾಂಬಿನೇಷನ್ ಮೇಲೆ ಪ್ರೇಕ್ಷಕರಿಗೆ ನಂಬಿಕೆ ಇದೆ. ಆದರೆ ಬದಲಾದ ಈ ಕಾಲಘಟ್ಟದಲ್ಲಿ ಅವರಿಬ್ಬರು ಮ್ಯಾಜಿಕ್ ಮಾಡುತ್ತಾರಾ ಇಲ್ಲವಾ ಎಂಬ ಅನುಮಾನ ಮೂಡಿದೆ. ನೆಟ್ಟಿಗರ ವಲಯದಲ್ಲಿ ಈ ಟ್ರೇಲರ್ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಏಪ್ರಿಲ್ 16ರಂದು ಸಿನಿಮಾದ ಅಸಲಿ ಕಹಾನಿ ಏನು ಎಂಬುದು ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.