Headlines

ಮಂಗಳೂರು ಬಳಿ ಡ್ರಗ್ಸ್ ಸಾಗಿಸುತ್ತಿದ್ದ ಮೂವರು ಪೊಲೀಸ್ ಬಲೆಗೆ: ಕಲಬುರಗಿಯಲ್ಲಿ ವಂಚಿಸುತ್ತಿದ್ದ ಬಿಹಾರಿಗಳ ಬಂಧನ – Kannada News

ಬೆಂಗಳೂರು, ಜೂನ್ 6: ದಕ್ಷಿಣ ಕನ್ನಡ (Dakshina Kannada) ಸೇರಿದಂತೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ವಿಭಿನ್ನ ಅಪರಾಧ ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರಲ್ಲಿ ತಲ್ಲಣ ಮೂಡಿಸಿವೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಕಾರಿನಲ್ಲಿ ಭಾರಿ ಪ್ರಮಾಣದ ಮಾದಕವಸ್ತು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇತ್ತ ಕಲಬುರಗಿಯಲ್ಲಿ ನಿರುದ್ಯೋಗಿಗಳಿಗೆ ನಕಲಿ ಸರ್ಕಾರಿ ನೌಕರಿ ಮತ್ತು ನೀಟ್ (NEET) ಪರೀಕ್ಷೆ ಪಾಸ್ ಮಾಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ ಬಿಹಾರ ಮೂಲದ ಇಬ್ಬರು ಅಂತರ್ರಾಜ್ಯ ವಂಚಕರನ್ನು ಬಂಧಿಸಲಾಗಿದೆ. ಇನ್ನು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ರಾತ್ರೋರಾತ್ರಿ ಮುಸುಕುಧಾರಿ ಕಳ್ಳರ ಗ್ಯಾಂಗ್ ಓಡಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜನರಲ್ಲಿ ಭೀತಿ ಮೂಡಿಸಿದೆ.

ಮುಖ್ಯಾಂಶಗಳು

  • ಬಂಟ್ವಾಳದಲ್ಲಿ ಲಕ್ಷಾಂತರ ಮೌಲ್ಯದ ಎಂಡಿಎಂಎ ಜಪ್ತಿ.
  • ಕಲಬುರಗಿಯಲ್ಲಿ ಬಿಹಾರ ಮೂಲದ ಇಬ್ಬರು ವಂಚಕರ ಬಂಧನ.
  • ಕೂಡ್ಲಿಗಿಯಲ್ಲಿ ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಓಡಾಟದ ದೃಶ್ಯ.

ಬಂಟ್ವಾಳದಲ್ಲಿ 7.64 ಲಕ್ಷ ರೂ. ಮೌಲ್ಯದ ಎಂಡಿಎಂಎ ಡ್ರಗ್ಸ್ ಜಪ್ತಿ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಮೆಲ್ಕಾರ್ ಫ್ಲೈಓವರ್ ಬಳಿ ಕಾರಿನಲ್ಲಿ ಮಾದಕವಸ್ತು ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಜುಬೈರ್, ಮೊಹಮ್ಮದ್ ಸವಾದ್ ಹಾಗೂ ರಶೀದ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು 7.64 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಮಾದಕವಸ್ತು, ಸಾಗಾಟಕ್ಕೆ ಬಳಸಿದ್ದ ಕಾರು ಹಾಗೂ ಮೂರು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸರ್ಕಾರಿ ನೌಕರಿ, ನೀಟ್ ಆಮಿಷವೊಡ್ಡುತ್ತಿದ್ದ ಅಂತಾರಾಜ್ಯ ವಂಚಕರ ಬಂಧನ

ಕಲಬುರಗಿ ನಗರದಲ್ಲಿ ನಿರುದ್ಯೋಗಿ ಯುವಕರನ್ನು ಟಾರ್ಗೆಟ್ ಮಾಡಿ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಬಿಹಾರ ಮೂಲದ ಇಬ್ಬರು ಅಂತಾರಾಜ್ಯ ವಂಚಕರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪ್ರೇಮಶಾಮಕುಮಾರ್ (ಪ್ರೇಮ್) ಮತ್ತು ಗಣೇಶ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಗ್ಯಾಂಗ್ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿ ಕೊಡಿಸುವುದಾಗಿ ಹಾಗೂ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣ ಮಾಡಿಸುವುದಾಗಿ ನಂಬಿಸಿ ತಲಾ 5 ಲಕ್ಷ ರೂಪಾಯಿ ಬೇಡಿಕೆಯಿಟ್ಟು ವಂಚನೆಗೆ ಮುಂದಾಗಿತ್ತು. ಬಂಧಿತ ಆರೋಪಿಗಳ ಬಳಿ ಸದ್ಯ ಹಲವು ನಕಲಿ ದಾಖಲೆ ಪತ್ರಗಳು ಪತ್ತೆಯಾಗಿದ್ದು, ಪೊಲೀಸರು ಜಾಲದ ಬೆನ್ನು ಬಿದ್ದಿದ್ದಾರೆ.

ವಿಜಯನಗರ: ರಾತ್ರೋರಾತ್ರಿ ಮುಸುಕುಧಾರಿಗಳ ಓಡಾಟ

ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಬಸವೇಶ್ವರ ವೃತ್ತದ ಸುತ್ತಮುತ್ತಲಿನ ಮನೆಗಳ ಬಳಿ ರಾತ್ರಿ ವೇಳೆ ಮುಸುಕುಧಾರಿ ಕಳ್ಳರು ಸಂಚು ರೂಪಿಸುತ್ತಿರುವುದು ಬೆಳಕಿಗೆ ಬಂದಿದೆ. ಮುಖಕ್ಕೆ ಮಾಸ್ಕ್ ಹಾಗೂ ಕೈಗೆ ಗ್ಲೌಸ್ ಧರಿಸಿರುವ ಕಳ್ಳರ ಗ್ಯಾಂಗ್ ಮನೆಗಳ ಮುಂಭಾಗ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಸ್ಥಳೀಯ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಈ ದೃಶ್ಯ ಕಂಡು ಕೂಡ್ಲಿಗಿ ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದಾರೆ. ಸದ್ಯಕ್ಕೆ ಯಾವುದೇ ಮನೆ ಕಳ್ಳತನವಾಗಿಲ್ಲ ಎಂದು ಕೂಡ್ಲಿಗಿ ಪೊಲೀಸರು ಮಾಹಿತಿ ನೀಡಿದ್ದು, ರಾತ್ರಿ ಗಸ್ತು ಚುರುಕುಗೊಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *