ಮಂಡ್ಯ ಪಶ್ಚಿಮ ಪೊಲೀಸ್ ಠಾಣೆImage Credit source: tv9
ಮಂಡ್ಯ, ಜುಲೈ 3: ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಯುವಕರ ಪುಂಡಾಟಿಕೆ ಹಾಗೂ ರೌಡಿಸಂ ದಿನದಿಂದ ದಿನಕ್ಕೆ ಮಿತಿಮೀರುತ್ತಿರುವುದಕ್ಕೆ ಮತ್ತೊಂದು ಆಘಾತಕಾರಿ ಸಾಕ್ಷಿ ಸಿಕ್ಕಿದೆ. ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿಯಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಮಂಡ್ಯದ ಪ್ರಭಾವಿ ಉದ್ಯಮಿಯೊಬ್ಬರ ಪುತ್ರ ಮತ್ತು ಆತನ ಗ್ಯಾಂಗ್, ಲಾರಿ ಚಾಲಕನ ಮೇಲೆ ಗನ್‌ನಿಂದ ಗುಂಡು ಹಾರಿಸಿ ದರೋಡೆಗೆ ಯತ್ನಿಸಿರುವುದು ದೃಢಪಟ್ಟಿದೆ. ಗುರುವಾರ ಮುಂಜಾನೆ 4 ಗಂಟೆ ಸುಮಾರಿಗೆ ಈ ಭೀಕರ ಕೃತ್ಯ ನಡೆದಿದ್ದು, ತಡರಾತ್ರಿ ಪೊಲೀಸರು ಉದ್ಯಮಿ ಪುತ್ರನನ್ನು ವಶಕ್ಕೆ ಪಡೆದು ಡಿವೈಎಸ್‌ಪಿ (DySP) ಕಚೇರಿಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಲಾರಿ ನಿಲ್ಲಿಸದಿದ್ದಕ್ಕೆ ಗುಂಡಿನ ದಾಳಿ!
ಮೈಸೂರು ಮೂಲದ ಚಾಲಕ ಶಂಕರ್ ಎಂಬುವವರು ಬೆಂಗಳೂರಿನಿಂದ ಔಷಧಗಳನ್ನು ತುಂಬಿಕೊಂಡು ಒಂಟಿಯಾಗಿ ಕಂಟೇನರ್ ಲಾರಿಯಲ್ಲಿ ಮಂಡ್ಯದ ಕಡೆಗೆ ಬರುತ್ತಿದ್ದರು. ಮುಂಜಾನೆ 4 ಗಂಟೆ ಸುಮಾರಿಗೆ ಹಳೇ ಹೆದ್ದಾರಿಯಲ್ಲಿ ಕಂಟೇನರ್ ಅನ್ನು ಅಡ್ಡಗಟ್ಟಲು ಉದ್ಯಮಿ ಪುತ್ರ ಹಾಗೂ ಆತನ ಗ್ಯಾಂಗ್ ಪ್ರಯತ್ನಿಸಿದೆ. ಆದರೆ, ಒಂಟಿಯಾಗಿದ್ದ ಚಾಲಕ ಶಂಕರ್ ಭಯದಿಂದ ಲಾರಿಯನ್ನು ನಿಲ್ಲಿಸದೇ ಮುನ್ನಡೆಸಿದ್ದಾರೆ. ಇದರಿಂದ ಆಕ್ರೋಶಗೊಂಡ ಉದ್ಯಮಿ ಪುತ್ರ, ಲಾರಿಯತ್ತ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ತೀವ್ರ ಭಯದ ಕಾರಣ ಪೊಲೀಸರಿಗೂ ಮಾಹಿತಿ ನೀಡದೆ ಅಲ್ಲಿಂದ ಹೊರಟುಹೋಗಿದ್ದರು.
ಜನರಿಂದ ಹರಡಿದ ಸುದ್ದಿ: ಎಚ್ಚೆತ್ತ ಪೊಲೀಸರು
ಹೆದ್ದಾರಿಯಲ್ಲಿ ನಡೆದ ಈ ಶೂಟೌಟ್ ಬಗ್ಗೆ ಸಾರ್ವಜನಿಕರಲ್ಲಿ ಬಾಯಿಂದ ಬಾಯಿಗೆ ಸುದ್ದಿ ಹರಡುತ್ತಿದ್ದಂತೆ ಎಚ್ಚೆತ್ತ ಮಂಡ್ಯ ಗ್ರಾಮಾಂತರ ಪೊಲೀಸರು, ತಕ್ಷಣವೇ ಲಾರಿ ಚಾಲಕ ಶಂಕರ್‌ನನ್ನು ಪತ್ತೆ ಹಚ್ಚಿ ಠಾಣೆಗೆ ಕರೆಸಿ ಅಧಿಕೃತ ದೂರು ದಾಖಲಿಸಿಕೊಂಡಿದ್ದಾರೆ. ತದನಂತರ ತೀವ್ರ ಕಾರ್ಯಾಚರಣೆ ನಡೆಸಿ ಪ್ರಭಾವಿ ಉದ್ಯಮಿಯ ಪುತ್ರನನ್ನು ತಡರಾತ್ರಿ ವಶಕ್ಕೆ ಪಡೆದಿದ್ದಾರೆ. ಸದ್ಯ ಮಂಡ್ಯ ಡಿವೈಎಸ್‌ಪಿ ಕಚೇರಿಯಲ್ಲಿ ಆರೋಪಿಯ ವಿಚಾರಣೆ ಮುಂದುವರಿದಿದ್ದು, ಮುಂಜಾನೆ 4 ಗಂಟೆಗೆ ಐಷಾರಾಮಿ ಕಾರಿನಲ್ಲಿ ಈ ಗ್ಯಾಂಗ್ ಹೈವೇಯಲ್ಲಿ ನಿಂತು ಏನು ಮಾಡುತ್ತಿತ್ತು? ದರೋಡೆಗೆ ಸಂಚು ರೂಪಿಸಿತ್ತೇ? ಎಂಬ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಲೈಸೆನ್ಸ್ ಇಲ್ಲದೆ ಗನ್ ಸಿಕ್ಕಿದ್ದು ಹೇಗೆ?
ಈ ಕೃತ್ಯಕ್ಕೆ ಉದ್ಯಮಿ ಪುತ್ರ ಅಕ್ರಮವಾಗಿ ಗನ್ ಬಳಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ಆತನ ಬಳಿ ಯಾವುದೇ ಅಧಿಕೃತ ಗನ್ ಲೈಸೆನ್ಸ್ ಇರಲಿಲ್ಲ ಎಂಬುದು ಪತ್ತೆಯಾಗಿದೆ. ಪರವಾನಗಿ ಇಲ್ಲದಿದ್ದರೂ ಪ್ರಭಾವಿ ವ್ಯಕ್ತಿಯ ಮಗನಿಗೆ ಈ ಮಾರಕ ಆಯುಧ ಸಿಕ್ಕಿದ್ದು ಹೇಗೆ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.
ಇದನ್ನೂ ಓದಿ: ಗೃಹ ಸಚಿವರ ತವರಲ್ಲೇ ಮೈ ಮರೆತ್ರಾ ಪೊಲೀಸರು? ಠಾಣೆಯಿಂದಲೇ ಪೋಕ್ಸೋ ಕೇಸ್ ಆರೋಪಿ ಪರಾರಿ!
ಮಂಡ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ ಕಾಟ ಹೆಚ್ಚಾಗುತ್ತಿದ್ದು, ಇಂತಹ ಕೃತ್ಯಗಳು ನಡೆಯುತ್ತಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸದ್ಯ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ಯಾಂಗ್‌ನ ಇತರ ಸದಸ್ಯರಿಗಾಗಿ ಹುಡುಕಾಟ ನಡೆದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ