ಮಕ್ಕಳಲ್ಲಿ ಆಟಿಸಂ ಇರುವುದನ್ನು ಕಂಡುಹಿಡಿಯುವುದು ಹೇಗೆ? ಲಕ್ಷಣಗಳು ಹೇಗಿರುತ್ತವೆ?

ಮಕ್ಕಳಲ್ಲಿ ಆಟಿಸಂ ಇರುವುದನ್ನು ಕಂಡುಹಿಡಿಯುವುದು ಹೇಗೆ? ಲಕ್ಷಣಗಳು ಹೇಗಿರುತ್ತವೆ?

ಆಟಿಸಂ (Autism Spectrum Disorder) ಎನ್ನುವುದು ಮಕ್ಕಳ ವರ್ತನೆ ಮತ್ತು ಮೆದುಳಿನ ಬೆಳವಣಿಗೆಯನ್ನು ಪರಿಣಾಮಗೊಳಿಸುವ ಒಂದು ಸ್ಥಿತಿ. ಕೆಲವೊಮ್ಮೆ ಮಗುವಿಗೆ ಈ ಸಮಸ್ಯೆ ಇರುವುದನ್ನು ಪೋಷಕರು ಹಲವು ವರ್ಷಗಳ ನಂತರ ಗಮನಿಸಬಹುದು. ತಡವಾಗಿ ಗುರುತಿಸಿದರೆ ಸರಿಯಾದ ಚಿಕಿತ್ಸೆ ಪಡೆಯುವುದು ಕಷ್ಟವಾಗಬಹುದು. ಆದ್ದರಿಂದ ಆರಂಭಿಕ ಲಕ್ಷಣಗಳನ್ನು ಗುರುತಿಸುವುದು ಬಹಳ ಮುಖ್ಯ. ಅದಕ್ಕಾಗಿಯೇ ಪ್ರತಿ ವರ್ಷ ಏಪ್ರಿಲ್ 2ರಂದು ವಿಶ್ವ ಆಟಿಸಂ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಜನರಲ್ಲಿ ಆಟಿಸಂ ಬಗ್ಗೆ ಅರಿವು ಮೂಡಿಸುವುದೇ ಇದರ ಉದ್ದೇಶ. ಹಾಗಾಗಿ ಆಟಿಸಂ ಎಂದರೇನು, ಇದರ ಆರಂಭಿಕ ಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿಯುವುದರಿಂದ ಈ ರೀತಿಯ ಆರೋಗ್ಯ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲಿಯೇ ಕಂಡು ಹಿಡಿಯಬಹುದಾಗಿದೆ.

ಆಟಿಸಂ ಎಂದರೇನು?

ಆಟಿಸಂ ಒಂದು ಸ್ಥಿತಿಯಾಗಿದ್ದು, ಇದರಲ್ಲಿ ಮಗುವಿನ ಮೆದುಳಿನ ಬೆಳವಣಿಗೆ ಸಾಮಾನ್ಯಕ್ಕಿಂತ ವಿಭಿನ್ನವಾಗಿರುತ್ತದೆ. ಇದರಿಂದ ಮಗುವಿನ ಸಂವಹನ (Communication) ಮತ್ತು ದಿನನಿತ್ಯದ ವರ್ತನೆ ಮೇಲೆ ಪರಿಣಾಮ ಬೀರುತ್ತದೆ. ಬಹುತೇಕ ಪ್ರಕರಣಗಳಲ್ಲಿ ಇದು ಹುಟ್ಟಿನಿಂದಲೇ ಇರುತ್ತದೆ, ಆದರೆ ಕೆಲವು ಮಕ್ಕಳಲ್ಲಿ ವಯಸ್ಸು ಹೆಚ್ಚಾಗುತ್ತಿದ್ದಂತೆ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಆಟಿಸಂನ ಆರಂಭಿಕ ಲಕ್ಷಣಗಳು:

  • ಕಣ್ಣಲ್ಲಿ ಕಣ್ಣಿಟ್ಟು ಮಾತನಾಡದಿರುವುದು
  • ಹೆಸರು ಕರೆದಾಗ ಪ್ರತಿಕ್ರಿಯೆ ನೀಡದಿರುವುದು
  • 2 ವರ್ಷವಾದರೂ ಮಾತನಾಡಲು ಆರಂಭಿಸದಿರುವುದು
  • ಇತರ ಮಕ್ಕಳೊಂದಿಗೆ ಆಟವಾಡಲು ಅಥವಾ ಬೆರೆಯಲು ಆಸಕ್ತಿ ಕಡಿಮೆಯಾಗುವುದು
  • ಒಂದೇ ಮಾತನ್ನು ಪದೇಪದೇ ಪುನರಾವರ್ತಿಸುವುದು
  • ಏಕಾಏಕಿ ಕೋಪ ಅಥವಾ ಅಸಹಜ ವರ್ತನೆ ತೋರಿಸುವುದು

ಈ ಲಕ್ಷಣಗಳು ಕಂಡುಬಂದರೆ ತಕ್ಷಣ ನ್ಯೂರೋ ಡೆವಲಪ್ಮೆಂಟ್ ತಜ್ಞರನ್ನು ಸಂಪರ್ಕಿಸುವುದು ಬಹಳ ಮುಖ್ಯ.

ಇದನ್ನೂ ಓದಿ: ಆಟಿಸಂ ಜಾಗೃತಿ ದಿನ: ಈ ದಿನವನ್ನು ಯಾಕಾಗಿ ಆಚರಣೆ ಮಾಡಬೇಕು? ಉದ್ದೇಶವೇನು?

ಆಟಿಸಂ ತಡೆಯುವುದು ಹೇಗೆ?

ತಜ್ಞರ ಪ್ರಕಾರ, ಆಟಿಸಂ ಒಂದು ರೋಗವಲ್ಲ, ಅದು ಒಂದು ಡಿಸ್ಆರ್ಡರ್. ಇದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಆರಂಭದಲ್ಲೇ ಗುರುತಿಸಿದರೆ ಸರಿಯಾದ ಚಿಕಿತ್ಸೆ ಮತ್ತು ತರಬೇತಿಯ ಮೂಲಕ ನಿಯಂತ್ರಣದಲ್ಲಿ ಇಡಬಹುದು. ಸ್ಪೀಚ್ ಥೆರಪಿ, ಬಿಹೇವಿಯರ್ ಥೆರಪಿ ಮತ್ತು ಇತರ ಚಿಕಿತ್ಸಾ ವಿಧಾನಗಳಿಂದ ಮಕ್ಕಳಲ್ಲಿ ಗಮನಾರ್ಹ ಸುಧಾರಣೆ ತರಬಹುದು. ಬೇಗ ಗುರುತಿಸಿದಷ್ಟು ಉತ್ತಮ ಫಲಿತಾಂಶ ಸಿಗುತ್ತದೆ. ಹಾಗಾಗಿ ಪೋಷಕರು ಮಗುವಿನ ವರ್ತನೆಯನ್ನು ಮೊದಲೇ ಗಮನಿಸಿ. ಸಾಮಾನ್ಯ ಮಕ್ಕಳಿಗಿಂತ ವಿಭಿನ್ನವಾಗಿದ್ದರೆ ವೈದ್ಯರ ಸಲಹೆ ಪಡೆಯಿರಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *