ಇತ್ತೀಚಿನ ದಿನಗಳಲ್ಲಿ ಮಕ್ಕಳ ಆಹಾರ ಪದ್ಧತಿಯಲ್ಲಿ ಅಲ್ಟ್ರಾ ಪ್ರೊಸೆಸ್ಡ್ ಫುಡ್ (Ultra Processed Food) ಬಳಕೆ ಹೆಚ್ಚಾಗುತ್ತಿರುವುದು ಆರೋಗ್ಯ ತಜ್ಞರಲ್ಲಿ ಆತಂಕ ಮೂಡಿಸಿದೆ. ಚಿಪ್ಸ್, ಪ್ಯಾಕೆಟ್ ಸ್ನ್ಯಾಕ್ಸ್, ಇನ್ಸ್ಟಂಟ್ ನೂಡಲ್ಸ್, ಬರ್ಗರ್, ಪಿಜ್ಜಾ ಮತ್ತು ಸಿಹಿಯಾಗಿರುವ ಪ್ರೊಸೆಸ್ಡ್ ಆಹಾರಗಳನ್ನು ಹೆಚ್ಚೆಚ್ಚು ಸೇವಿಸುವ ಮಕ್ಕಳಲ್ಲಿ ಅಸ್ತಮಾ (Asthma) ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎಂದು ಸಂಶೋಧನೆ ತಿಳಿಸಿದೆ. ಅಲ್ಟ್ರಾ ಪ್ರೊಸೆಸ್ಡ್ ಫುಡ್ ಏಕೆ ಅಪಾಯಕಾರಿ, ಇದಕ್ಕೂ ಅಸ್ತಮಾಗೆ ಇರುವ ಸಂಬಂಧವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಅಲ್ಟ್ರಾ ಪ್ರೊಸೆಸ್ಡ್ ಫುಡ್ ಏಕೆ ಅಪಾಯಕಾರಿ?
ಸಂಶೋಧಕರ ಪ್ರಕಾರ, ಅಲ್ಟ್ರಾ ಪ್ರೊಸೆಸ್ಡ್ ಫುಡ್ ಕೇವಲ ಹೊಟ್ಟೆಯ ಆರೋಗ್ಯವನ್ನು ಹಾಳು ಮಾಡುವುದಷ್ಟೇ ಅಲ್ಲ, ಬದಲಾಗಿ ದೇಹದ ‘ಗಟ್ ಮೈಕ್ರೋಬಯೋಮ್’ ಮೇಲೂ ದುಷ್ಪರಿಣಾಮ ಬೀರುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಕುಂದುತ್ತದೆ ಮತ್ತು ದೇಹದಲ್ಲಿ ಆಕ್ಸಿಡೇಟಿವ್ ಸ್ಟ್ರೆಸ್ ಹೆಚ್ಚಾಗುತ್ತದೆ. ಇದರ ಪರಿಣಾಮ ಶ್ವಾಸಕೋಶಗಳ ಮೇಲೂ ಬಿದ್ದು ಅಸ್ತಮಾ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ. ಇಂತಹ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕಗಳು, ಪ್ರಿಸರ್ವೇಟಿವ್ಸ್, ಕೃತಕ ಫ್ಲೇವರ್ಗಳು ಮತ್ತು ನಾನಾ ರೀತಿಯ ಪದಾರ್ಥಗಳನ್ನು ಬಳಸಲಾಗುತ್ತದೆ. ಇವು ಮಕ್ಕಳ ದೇಹದ ಬೆಳವಣಿಗೆಗೆ ಹಾನಿಕಾರಕವಾಗಬಹುದು. ಜೊತೆಗೆ ಹೊಟ್ಟೆ ಸಂಬಂಧಿತ ಸಮಸ್ಯೆಗಳು, ಜೀರ್ಣಕ್ರಿಯೆ ತೊಂದರೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್ ಅಪಾಯವೂ ಹೆಚ್ಚಾಗಬಹುದು ಎಂದು ಅಧ್ಯಯನದಿಂದ ತಿಳಿದುಬಂದಿದೆ.
ಇದನ್ನೂ ಓದಿ: ಅಸ್ತಮಾ ರೋಗಿಗಳೇ ಹವಾಮಾನ ಬದಲಾವಣೆಯಿಂದ ಸಮಸ್ಯೆಗಳಾಗುತ್ತಿದ್ಯಾ? ಹಾಗಿದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಿ
ಮಕ್ಕಳ ಆಹಾರದಲ್ಲಿ ಯಾವ ಬದಲಾವಣೆ ಅಗತ್ಯ?
ಆರೋಗ್ಯ ತಜ್ಞರ ಪ್ರಕಾರ ಮಕ್ಕಳಿಗೆ ತಾಜಾ ಹಣ್ಣು, ತರಕಾರಿ, ಮನೆಯಲ್ಲೇ ತಯಾರಿಸಿದ ಆಹಾರ, ಬೇಳೆ, ಹಾಲು ಮತ್ತು ಪ್ರೋಟೀನ್ಯುಕ್ತ ಆಹಾರ ನೀಡುವುದು ಉತ್ತಮ. ಜೊತೆಗೆ ಸಂಪೂರ್ಣ ಧಾನ್ಯಗಳನ್ನು ಬಳಸಿ ತಯಾರಿಸಿದ ಆಹಾರ ಹಾಗೂ ಕಡಿಮೆ ಸಕ್ಕರೆ ಇರುವ ಪದಾರ್ಥಗಳನ್ನು ಸೇವಿಸಲು ಉತ್ತೇಜಿಸಬೇಕು. ಪ್ಯಾಕೆಟ್ ಆಹಾರ ಮತ್ತು ಜಂಕ್ ಫುಡ್ ಬಳಕೆಯನ್ನು ಕಡಿಮೆ ಮಾಡುವುದು ಮಕ್ಕಳ ಆರೋಗ್ಯ ಕಾಪಾಡಲು ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ