ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದ ಜನಪ್ರಿಯ ನಟಿ ಕಾಜಲ್ ಅಗರ್ವಾಲ್ (Kajal Aggarwal) ಅವರ ಬ್ಯಾಕ್-ಟು-ಬ್ಯಾಕ್ ಸಿನಿಮಾಗಳು ಈ ವರ್ಷ ಬಿಡುಗಡೆಗೆ ಸಜ್ಜಾಗಿವೆ. ಶ್ರೇಯಸ್ ತಲ್ಪಾಡೆ ಜೊತೆಗಿನ ‘ದಿ ಇಂಡಿಯಾ ಸ್ಟೋರಿ’ (The India Story) ಈ ತಿಂಗಳೇ ತೆರೆಗೆ ಬರುತ್ತಿದ್ದರೆ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ (Ramayana) ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗಲಿದೆ. ತಾಯಿಯಾದ ಬಳಿಕ ತಮ್ಮ ಸಿನಿಮಾ ಆಯ್ಕೆಗಳು ಹೇಗೆ ಬದಲಾಗಿವೆ ಎಂಬುದನ್ನು ಕಾಜಲ್ ಇತ್ತೀಚಿನ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ.
ಮಗನಿಗಾಗಿ ಬದಲಾದ ಸಿನಿಮಾ ಆಯ್ಕೆ:
ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದ ಕಾಜಲ್ ಅವರಿಗೆ ನೀಲ್ ಕಿಚ್ಲು ಎಂಬ ಮಗನಿದ್ದಾನೆ. ತಾಯಿಯಾದ ನಂತರ ಜವಾಬ್ದಾರಿ ಹೆಚ್ಚಾಗಿದೆ ಎಂದು ಹೇಳುವ ಕಾಜಲ್, ‘ಈಗ ನಾನು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುವ ಮುನ್ನ ನನ್ನ ಮಗನ ದೃಷ್ಟಿಕೋನದಿಂದ ಯೋಚಿಸುತ್ತೇನೆ. ನನ್ನ ಸಿನಿಮಾಗಳನ್ನು ನೋಡಿ ನನ್ನ ಮಗ – ನಮ್ಮ ಅಮ್ಮ ಅದ್ಭುತ ಚಿತ್ರದ ಭಾಗವಾಗಿದ್ದರು – ಎಂದು ಹೆಮ್ಮೆಯಿಂದ ಹೇಳಬೇಕು. ಹಾಗಾಗಿ ಈಗ ಕಥೆಗಳನ್ನು ಆಯ್ಕೆ ಮಾಡುವಾಗ ಹೆಚ್ಚಿನ ಜವಾಬ್ದಾರಿ ಮತ್ತು ಜಾಗರೂಕತೆ ಇರುತ್ತದೆ’ ಎಂದಿದ್ದಾರೆ.
‘ರಾಮಾಯಣ’ ಚಿತ್ರದಲ್ಲಿ ಮಂಡೋದರಿ ಪಾತ್ರ:
‘ರಾಮಾಯಣ’ ಚಿತ್ರದ ಬಗ್ಗೆ ಕಾಜಲ್ ವಿಶೇಷ ಉತ್ಸಾಹ ಹೊಂದಿದ್ದಾರೆ. ‘ನನ್ನ ಮಗನಿಗೆ ರಾಮಾಯಣ ಎಂದರೆ ಪಂಚಪ್ರಾಣ. ಪ್ರತಿದಿನ ಮನೆಯಲ್ಲಿ ರಾಮಲೀಲಾ ನಾಟಕ ಮಾಡುತ್ತಿರುತ್ತಾನೆ. ನಾನು ಈ ಸಿನಿಮಾದಲ್ಲಿ ನಟಿಸುತ್ತಿರುವ ವಿಷಯ ಕೇಳಿ ಅವನಿಗಂತೂ ತುಂಬಾನೇ ಖುಷಿಯಾಗಿದೆ. ವಿಶೇಷವೆಂದರೆ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾವಣನ ಪತ್ನಿ ಮಂಡೋದರಿ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮಗನಿಗೆ ರಾವಣನ ಪಾತ್ರವೇ ಇಷ್ಟ. ಚಿತ್ರದ ಎರಡನೇ ಭಾಗ ಬರುವಷ್ಟರಲ್ಲಿ ಅವನಿಗೆ 5 ವರ್ಷ ತುಂಬುತ್ತದೆ. ಥಿಯೇಟರ್ನಲ್ಲಿ ಅವನು ನೋಡಲಿರುವ ಮೊದಲ ಸಿನಿಮಾ ಇದೇ ಆಗಿರುತ್ತದೆ’ ಎಂದು ಕಾಜಲ್ ಹೇಳಿದ್ದಾರೆ.
ಇದನ್ನೂ ಓದಿ: ನಟ ಯಶ್ ಗುಣಗಾನ ಮಾಡಿದ ಕಾಜಲ್, ನಟಿ ಹೇಳಿದ್ದೇನು?
ಆಹಾರ ಪದ್ಧತಿ ಬದಲಿಸಿದ ‘ದಿ ಇಂಡಿಯಾ ಸ್ಟೋರಿ’:
ತಮ್ಮ ಮತ್ತೊಂದು ಚಿತ್ರವಾದ ‘ದಿ ಇಂಡಿಯಾ ಸ್ಟೋರಿ’ ಬಗ್ಗೆ ಮಾತನಾಡಿದ ಕಾಜಲ್, ಇದು ಕೀಟನಾಶಕಗಳ ಮಾಫಿಯಾ ಮತ್ತು ಆಹಾರ ಕಲಬೆರಕೆ ಭ್ರಷ್ಟಾಚಾರದ ಸುತ್ತ ಸಾಗುವ ಕಥೆಯಾಗಿದೆ ಎಂದಿದ್ದಾರೆ. ‘ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ಏನೆಲ್ಲಾ ಇರುತ್ತದೆ ಮತ್ತು ಅದು ಹೇಗೆ ತಯಾರಾಗುತ್ತದೆ ಎಂಬುದರ ಆಳವಾದ ಸಂಶೋಧನೆ ಆಧರಿಸಿ ಈ ಸಿನಿಮಾ ಮಾಡಲಾಗಿದೆ. ಇದರ ಶೂಟಿಂಗ್ ಮಾಡುವಾಗ ನನಗೆ ಶಾಕ್ ಆಗಿತ್ತು. ಕಣ್ಣು ಮುಚ್ಚಿ ಬಳಸುತ್ತಿದ್ದ ಎಷ್ಟೋ ವಸ್ತುಗಳನ್ನು ಈಗ ನನ್ನ ಅಡುಗೆಮನೆಯಿಂದ ಹೊರಹಾಕಿದ್ದೇನೆ. ನನ್ನ ಮಗನಿಗೆ ಯಾವ ಆಹಾರ ನೀಡಬೇಕು, ಯಾವುದನ್ನು ನೀಡಬಾರದು ಎಂಬ ಬಗ್ಗೆ ಈಗ ನನಗೆ ಸ್ಪಷ್ಟತೆ ಸಿಕ್ಕಿದೆ’ ಎಂದಿದ್ದಾರೆ ಕಾಜಲ್ ಅಗರ್ವಾಲ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.