ಶ್ರೀನಗರ, ಆ.12: ಕಾಶ್ಮೀರ ಕಣಿವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಸರ್ಕಾರಿ ಉದ್ಯೋಗಿಗಳಿಗೆ ಆನ್ಲೈನ್ ಮೂಲಕ ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ, ಅವರನ್ನು ಮನೆಗಳಲ್ಲೇ ಇರಲು ಮತ್ತು ಜಾಗರೂಕರಾಗಿರಲು ಮೌಖಿಕವಾಗಿ ಸೂಚಿಸಲಾಗಿದೆ. ಬೆದರಿಕೆ ಪತ್ರದಲ್ಲಿ ಕೆಲ ಸರ್ಕಾರಿ ನೌಕರರ ಹೆಸರುಗಳನ್ನು ಉಲ್ಲೇಖಿಸಿ, “ನಿಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಿ” ಎಂದು ಎಚ್ಚರಿಕೆ ನೀಡಲಾಗಿದೆ.
‘ಯುನೈಟೆಡ್ ಲಿಬರೇಷನ್ ಕೌನ್ಸಿಲ್’ (United Liberation Council) ಹೆಸರಿನ ಸಂಘಟನೆಯೊಂದು ಈ ಬೆದರಿಕೆ ಪತ್ರವನ್ನು ಆನ್ಲೈನ್ನಲ್ಲಿ ಹಂಚಿಕೊಂಡಿದೆ. ಈ ಸಂಘಟನೆಯು ಜುಲೈ ತಿಂಗಳಿನಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಪುಣ್ಯಸ್ಮರಣೆಯ ಪೋಸ್ಟರ್ ಮೂಲಕ ಮುನ್ನೆಲೆಗೆ ಬಂದಿತ್ತು. ಇದು ನಿಷೇಧಿತ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಗುಂಪು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪತ್ರದಲ್ಲಿ ಕಂದಾಯ ಇಲಾಖೆ ಹಾಗೂ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಶ್ಮೀರಿ ಪಂಡಿತ್ ಉದ್ಯೋಗಿಗಳ ಹೆಸರುಗಳು ಮತ್ತು ವಿವರಗಳನ್ನು ಉಲ್ಲೇಖಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಈ ಪತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಸರ್ಕಾರದಿಂದ ಯಾವುದೇ ಅಧಿಕೃತ ಲಿಖಿತ ರಜಾ ಆದೇಶ ಹೊರಬಿದ್ದಿಲ್ಲವಾದರೂ, ಕಂದಾಯ ಇಲಾಖೆ ಮತ್ತು ಶಾಲೆಗಳಲ್ಲಿರುವ ಕಾಶ್ಮೀರಿ ಪಂಡಿತ್ ನೌಕರರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಮತ್ತು ಮನೆಗಳಲ್ಲೇ ಉಳಿಯಲು ಮೌಖಿಕವಾಗಿ ತಿಳಿಸಲಾಗಿದೆ.
ಶಾಲಾ ನಿರ್ದೇಶಕರಾದ ನಸೀರ್ ಅಹಮದ್ ವಾನಿ ಅವರು ಮಾತನಾಡಿ, “ನಾವು ಯಾವುದೇ ನೌಕರರಿಗೆ ರಜೆ ಪಡೆಯಲು ಅಥವಾ ವರ್ಕ್ ಫ್ರಮ್ ಹೋಮ್ ಮಾಡಲು ಅಧಿಕೃತವಾಗಿ ಹೇಳಿಲ್ಲ. ಎಲ್ಲಾ ಉದ್ಯೋಗಿಗಳು ಕರ್ತವ್ಯಕ್ಕೆ ಬರುತ್ತಿದ್ದಾರೆ” ಎಂದಿದ್ದಾರೆ. ಬೆದರಿಕೆ ಪತ್ರದಲ್ಲಿ ಹೆಸರಿಸಲಾದ ನೌಕರರಿಗೆ ಆಗಸ್ಟ್ 20ರವರೆಗೆ ಅತ್ಯಂತ ಜಾಗರೂಕರಾಗಿರಲು ಮತ್ತು ಕೆಲಸದ ಸ್ಥಳದಿಂದ ದೂರವಿರಲು ಸೂಚಿಸಲಾಗಿದೆ.
ಕಣಿವೆಯಲ್ಲಿ ಪ್ರಧಾನ ಮಂತ್ರಿಗಳ ವಿಶೇಷ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಸುಮಾರು 9,000 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು ಈ ಬಗ್ಗೆ ಆಲ್ ಪಿಎಂ ಪ್ಯಾಕೇಜ್ ಎಂಪ್ಲಾಯೀಸ್ ಅಸೋಸಿಯೇಷನ್ ಅಧ್ಯಕ್ಷ ಸನ್ನಿ ರೈನಾ ಮಾತನಾಡಿ, “ಪೋಸ್ಟರ್ಗಳು ಬಂದ ನಂತರ ನಮ್ಮನ್ನು ಮನೆಯಲ್ಲೇ ಇರುವಂತೆ ಹೇಳಲಾಗಿದೆ. ಆದರೆ ಮನೆಯಲ್ಲೇ ಕುಳಿತುಕೊಳ್ಳುವುದು ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರವಲ್ಲ. ನಮಗೂ ಸಾಮಾಜಿಕ ಜೀವನವಿದೆ, ಔಷಧಿ ಮತ್ತು ದಿನಸಿ ತರಲು ನಾವು ಹೊರಗೆ ಹೋಗಲೇಬೇಕಾಗುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಜಿರಳೆ’ ಹೇಳಿಕೆ ವಾಣಿಜ್ಯ ದುರುಪಯೋಗ ಸಂಬಂಧ ಪಿಐಎಲ್: ಕೇಂದ್ರ ಸರ್ಕಾರ, CBIಗೆ ಸುಪ್ರೀಂ ಕೋರ್ಟ್ ನೋಟಿಸ್
2022ರಲ್ಲಿ ಕಣಿವೆಯಲ್ಲಿ ನಡೆದ ಸರಣಿ ಉಗ್ರರ ದಾಳಿಯಲ್ಲಿ 5 ಕಾಶ್ಮೀರಿ ಪಂಡಿತ್ ಉದ್ಯೋಗಿಗಳು ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಕಣಿವೆಯಿಂದ ಹೊರಗೆ ವರ್ಗಾವಣೆ ಮಾಡುವಂತೆ ನೌಕರರು ದೀರ್ಘಕಾಲದ ಭಾರಿ ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಬೆದರಿಕೆ ಪತ್ರ ಬಂದಿರುವುದು ಉದ್ಯೋಗಿಗಳಲ್ಲಿ ಹಳೆಯ ಭೀತಿಯನ್ನು ಮರುಕಳಿಸುವಂತೆ ಮಾಡಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ