ಬೆಂಗಳೂರು, ಜೂನ್ 25: ನಿನ್ನೆ ಪೀಕ್ ಅವರ್ನಲ್ಲೇ ನಮ್ಮ ಮೆಟ್ರೊ (Namma Metro) ರೈಲು ಇದ್ದಕ್ಕಿದ್ದಂತೆ ಕೆಟ್ಟು ನಿಂತು ಬಿಟ್ಟಿತ್ತು. ಪ್ರಯಾಣ ಮಾಡುತ್ತಿದ್ದ ಸಾವಿರಾರು ಪ್ರಯಾಣಿಕರಲ್ಲಿ ಆತಂಕ ಮನೆ ಮಾಡಿತ್ತು. ಇದೀಗ ನಮ್ಮ ಮೆಟ್ರೊ ರೈಲು ಮತ್ತೆ ಕೈ ಕೊಟ್ಟಿದೆ. ಬಾಗಿಲು ಲಾಕ್ ಆಗದೇ ರೈಲು ನಿಂತಲ್ಲೇ ನಿಂತ್ತಿದೆ. ಹೀಗಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ನಡೆದಿದ್ದೇನು?
ಬೆಂಗಳೂರಿನ ಜೀವನಾಡಿ ನಮ್ಮ ಮೆಟ್ರೋ ರೈಲಿನಲ್ಲಿ ಮತ್ತೊಮ್ಮೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪ್ರಯಾಣಿಕರು ಕೆಲಕಾಲ ಪರದಾಡುವಂತಾಯಿತು. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ರೈಲಿನ ಬಾಗಿಲು ಲಾಕ್ ಆಗದ ಕಾರಣ, ಮೆಟ್ರೋ ರೈಲು ನಿಂತಲ್ಲೇ ನಿಂತಿತ್ತು. ಈ ಘಟನೆಯಿಂದಾಗಿ ಮೆಟ್ರೋ ಇಲ್ಲದೆ ಪ್ರಯಾಣಿಕರು ನಿಲ್ದಾಣದ ಹೊರಗಡೆ ಕೆಲಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮೆಟ್ರೋ ಸಂಚಾರ ಪುನಾರಂಭ
ಘಟನೆ ನಡೆದ ತಕ್ಷಣ ಬಿಎಂಆರ್ಸಿಎಲ್ ಸಿಬ್ಬಂದಿ ಹಾಗೂ ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬಾಗಿಲು ಲಾಕ್ ಆಗದಿರುವ ಸಮಸ್ಯೆಯನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿದರು. ಸಿಬ್ಬಂದಿ ಕಾರ್ಯಚರಣೆ ಬಳಿಕ ಸದ್ಯ ಡೋರ್ ಲಾಕ್ ಸಮಸ್ಯೆಯನ್ನು ಯಶಸ್ವಿಯಾಗಿ ಸರಿಪಡಿಸಲಾಗಿದ್ದು, ವೈಟ್ಫೀಲ್ಡ್-ಚಲ್ಲಘಟ್ಟ ನೇರಳೆ ಮಾರ್ಗದಲ್ಲಿ ಸಂಚಾರ ಪುನಾರಂಭವಾಗಿದೆ.
ಇದನ್ನೂ ಓದಿ: ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಅಧಿಕಾರಿಗಳು ಸಕಾಲದಲ್ಲಿ ಸ್ಪಂದಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದರಿಂದ ಪ್ರಯಾಣಿಕರು ನಿಟ್ಟುಸಿರು ಬಿಡುವಂತಾಗಿದ್ದು, ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ಸಂಚಾರ ಇದೀಗ ಯಥಾಸ್ಥಿತಿಗೆ ಮರಳಿದೆ.
ಇದ್ದಕ್ಕಿದ್ದಂತೆ ನಿಂತುಬಿಟ್ಟಿದ್ದ ಮೆಟ್ರೋ ರೈಲು
ಇನ್ನು ಮೊನ್ನೆ ಕೂಡ ಇದೇ ಮಾರ್ಗದಲ್ಲಿ ಮೆಟ್ರೋ ಕೆಟ್ಟುನಿಂತಿತ್ತು. ಸಂಜೆ 6.30ರ ಪೀಕ್ ಅವರ್ನಲ್ಲಿ ನೇರಳೆ ಮಾರ್ಗದ ಮೆಟ್ರೋ ರೈಲು ಬೈಯಪ್ಪನಹಳ್ಳಿ ಕಡೆಯಿಂದ ಮೆಜೆಸ್ಟಿಕ್ಗೆ ಹೊರಟಿತ್ತು. ಆದರೆ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಕಡೆ ಬರ್ತಿದ್ದಂತೆ ರೈಲು ಇದ್ದಕ್ಕಿದ್ದಂತೆ ನಿಂತುಬಿಟ್ಟಿತ್ತು. ಪ್ರಯಾಣಿಕರು ಇದೇನಾಯ್ತು ಅಂತಾ ಗಾಬರಿಯಾಗಿದ್ದರು. ಎಷ್ಟು ಹೊತ್ತಾದರೂ ರೈಲು ಕದಲಲಿಲ್ಲ. ತಾಂತ್ರಿಕ ಸಮಸ್ಯೆ ಬಗೆಹರಿಯಲೇ ಇಲ್ಲ. ಹೀಗಾಗಿ, ಪ್ರಯಾಣಿಕರನ್ನ ಸುರಕ್ಷಿತವಾಗಿ ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಬಿಎಂಆರ್ಸಿಎಲ್ ಸಿಬ್ಬಂದಿ ಇಳಿಸಿದ್ದರು. ಮೆಟ್ರೋ ಸಮಸ್ಯೆಯಿಂದಾಗಿ ಸಾವಿರಾರು ಜನರು ಪರದಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 8:49 pm, Thu, 25 June 26