Headlines

ಮನೆ ಶಿಫ್ಟ್ ಮಾಡಿದವರಿಗೆ ಬಿಗ್ ಶಾಕ್ ಕಾದಿದೆ; ನಾಳೆಯಿಂದ ಕರ್ನಾಟಕ ಸೇರಿ 16 ರಾಜ್ಯಗಳಲ್ಲಿ ‘SIR’ ಮತದಾರರ ಪಟ್ಟಿ ಪರಿಷ್ಕರಣೆ – Kannada News | Karnataka Voter List Revision: EC Begins House to House Survey, Aadhaar Linking

ಬೆಂಗಳೂರು, ಜೂ.29: ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಶುದ್ಧೀಕರಿಸಲು ಹಾಗೂ ನಕಲಿ ಮತದಾರರಿಗೆ ಬ್ರೇಕ್ ಹಾಕಲು ನಾಳೆಯಿಂದ (ಜೂನ್ 30) ಅತ್ಯಂತ ಕಟ್ಟುನಿಟ್ಟಿನ 3ನೇ ಹಂತದ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯನ್ನು ಆರಂಭಿಸುತ್ತಿದೆ. ಕರ್ನಾಟಕ ಸೇರಿದಂತೆ ದೇಶದ 16 ರಾಜ್ಯಗಳು ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಬೃಹತ್ ಕಾರ್ಯಾಚರಣೆ ನಡೆಯಲಿದೆ.

ಮತದಾರರ ಪಟ್ಟಿಯ ನೈಜತೆಯನ್ನು ಪರಿಶೀಲಿಸಲು ನಾಳೆಯಿಂದ ಜುಲೈ 29ರವರೆಗೆ ಆಯಾ ಭಾಗದ ಬೂತ್ ಮಟ್ಟದ ಅಧಿಕಾರಿಗಳು ನಿಮ್ಮ ಮನೆ-ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಈ ಬಾರಿ ನಕಲಿ ಮತದಾರರನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತೊಗೆಯಲು ಆಯೋಗವು ಪ್ರತಿಯೊಬ್ಬ ಮತದಾರರ ‘ಪ್ರೊಜೆನಿ ಮ್ಯಾಪಿಂಗ್’ (ಕುಟುಂಬದ ವಂಶಾವಳಿ ಆಧಾರಿತ ಮ್ಯಾಪಿಂಗ್) ತಂತ್ರಜ್ಞಾನವನ್ನು ಬಳಸುತ್ತಿದೆ. ಸಮೀಕ್ಷೆಯ ವೇಳೆ ವೋಟರ್ ಐಡಿ ಹಾಗೂ ಆಧಾರ್ ಕಾರ್ಡ್ ವಿವರಗಳ ಹೊಂದಾಣಿಕೆಯನ್ನು ಕಡ್ಡಾಯಗೊಳಿಸಲಾಗಿದೆ.

ಇನ್ನು ಈ ಪರಿಷ್ಕರಣಾ ಅವಧಿಯಲ್ಲಿ ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಯಾರೆಲ್ಲಾ ಲಭ್ಯವಿರುವುದಿಲ್ಲವೋ ಅಥವಾ ಇತ್ತೀಚೆಗೆ ಮನೆ ಬದಲಾಯಿಸಿ ಬೇರೆಡೆ ವಲಸೆ ಹೋಗಿದ್ದಾರೋ, ಅಂತಹವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ನೇರವಾಗಿ ಡಿಲೀಟ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕಿದೆ.

18 ವರ್ಷ ತುಂಬಿದ ಯುವಕ-ಯುವತಿಯರು ಅಥವಾ ಇದುವರೆಗೆ ಹೆಸರು ಸೇರಿಸದವರು ಫಾರಂ 6 ಬಳಸಿ ಹೊಸದಾಗಿ ಹೆಸರು ನೊಂದಾಯಿಸಿಕೊಳ್ಳಬಹುದು. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ, ವಯಸ್ಸು ತಿದ್ದುಪಡಿ ಮಾಡಲು ಅಥವಾ ಹೊಸ ವಿಳಾಸಕ್ಕೆ ಹೆಸರು ವರ್ಗಾಯಿಸಲು ಫಾರಂ 8 ಅನ್ನು ಬಳಸಬೇಕಾಗುತ್ತದೆ. ಜೂನ್ 30 ರಿಂದ ಜುಲೈ 29ರವರೆಗೆ ಬಿಎಲ್‌ಒಗಳಿಂದ ಮನೆ-ಮನೆ ಸಮೀಕ್ಷೆ ಪ್ರಕ್ರಿಯೆ ನಡೆಯಲಿದೆ. ಆಗಸ್ಟ್ 5ರಂದು ಮತದಾರರ ಕರಡು ಪಟ್ಟಿ ಪ್ರಕಟಣೆ. ಅಕ್ಟೋಬರ್ 7ರಂದು ಎಲ್ಲಾ ಆಕ್ಷೇಪಣೆಗಳ ಇತ್ಯರ್ಥದ ಬಳಿಕ ಅಧಿಕೃತ ಅಂತಿಮ ಮತದಾರರ ಪಟ್ಟಿ ಪ್ರಕಟ.

ಇದನ್ನೂ ಓದಿ: ದೇಶಾದ್ಯಂತ ‘SIR’ ಮತದಾರರ ಪಟ್ಟಿ ಪರಿಷ್ಕರಣೆ: 12 ರಾಜ್ಯಗಳಲ್ಲಿ ಬರೋಬ್ಬರಿ 5.18 ಕೋಟಿ ಮತದಾರರ ಹೆಸರು ಡಿಲೀಟ್

ಯಾವೆಲ್ಲಾ ರಾಜ್ಯಗಳಲ್ಲಿ ಈ ಪರಿಷ್ಕರಣೆ?:

ಕರ್ನಾಟಕ, ದೆಹಲಿ, ಪಂಜಾಬ್, ಹರಿಯಾಣ, ಉತ್ತರಾಖಂಡ್, ಮಣಿಪುರ, ಮೇಘಾಲಯ, ಜಾರ್ಖಂಡ್, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ, ಅರುಣಾಚಲ ಪ್ರದೇಶ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢ ಸೇರಿದಂತೆ ಒಟ್ಟು 19 ಪ್ರಮುಖ ವಲಯಗಳಲ್ಲಿ ಈ ವಿಶೇಷ ಪರಿಷ್ಕರಣೆ ನಾಳೆಯಿಂದ ಏಕಕಾಲದಲ್ಲಿ ಜಾರಿಗೆ ಬರಲಿದೆ.

12 ರಾಜ್ಯಗಳಲ್ಲಿ ಬರೋಬ್ಬರಿ 5.18 ಕೋಟಿ ಮತದಾರರ ಹೆಸರು ಡಿಲೀಟ್

ಭಾರತೀಯ ಚುನಾವಣಾ ಆಯೋಗವು ದೇಶಾದ್ಯಂತ ಹಮ್ಮಿಕೊಂಡಿರುವ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ ಪ್ರಕ್ರಿಯೆ ಪ್ರಕಾರ, ದೇಶದ 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬರೋಬ್ಬರಿ 5.18 ಕೋಟಿಗೂ ಹೆಚ್ಚು ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಧಿಕೃತವಾಗಿ ಕೈಬಿಡಲಾಗಿದೆ. ಚುನಾವಣಾ ಆಯೋಗದ ಈ ವೋಟರ್ ಲಿಸ್ಟ್ ಕ್ಲೀನ್-ಅಪ್ ಪ್ರಕ್ರಿಯೆಯು ಆರಂಭದಿಂದಲೂ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ಸೂಕ್ತ ದಾಖಲೆಗಳ ಕೊರತೆಯ ನೆಪವೊಡ್ಡಿ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ವಿರೋಧ ಪಕ್ಷಗಳು ಮತ್ತು ಪ್ರಮುಖ ಸಾಮಾಜಿಕ ಕಾರ್ಯಕರ್ತರು ಆಯೋಗದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಆದರೆ, ಈ ಎಲ್ಲಾ ಕಾನೂನು ಸವಾಲುಗಳು ಮತ್ತು ರಾಜಕೀಯ ವಿವಾದಗಳ ನಡುವೆಯೂ, ದೇಶದ ಸರ್ವೋನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗದ ಈ ಮಹತ್ತರ ಹೆಜ್ಜೆಯನ್ನು ಸರ್ವಾನುಮತದಿಂದ ಎತ್ತಿಹಿಡಿದು, ಪ್ರಕ್ರಿಯೆಯ ಸಾಂವಿಧಾನಿಕ ಸಿಂಧುತ್ವವನ್ನು ಮಾನ್ಯ ಮಾಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:43 am, Mon, 29 June 26

Source link

Leave a Reply

Your email address will not be published. Required fields are marked *