ಚಿಕ್ಕಮಗಳೂರು, ಜೂನ್ 26: ಮಳೆಯನಾಡು ಹಾಗೂ ಕಾಫಿನಾಡು ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರು (chikkamagaluru) ಈ ಸಂದರ್ಭದಲ್ಲಿ ಹಚ್ಚಹಸಿರು, ಮೋಡ ಕವಿದ ವಾತಾವರಣದಿಂದ ಕಂಗೊಳಿಸುವ ಸಮಯ. ಆದರೆ ಪ್ರಕೃಯ ಮುಸಿಗೆ ಈ ಬಾರಿ ಮುಂಗಾರು ಮಳೆ (Rain) ಸಂಪೂರ್ಣ ಕೈಕೊಟ್ಟಿದೆ. ಮಳೆ ಬದಲಿಗೆ ಸುಡುಬಿಸಿಲು ಆವರಿಸಿಕೊಂಡಿದ್ದು, ಜೂನ್ ತಿಂಗಳಿನಲ್ಲೇ ಬೇಸಿಗೆಯ ವಾತಾವರಣ ಸೃಷ್ಟಿಯಾಗಿದೆ. ಹೀಗಾಗಿ ಪ್ರವಾಸಿಗರ ಸುಳಿವಿಲ್ಲ, ಮತ್ತೊಂದೆಡೆ ಅಡಿಕೆ, ಕಾಫಿ, ಮೆಣಸು ಬೆಳೆ ಕುಂಠಿತವಾಗುವ ಆತಂಕ ಬೆಳೆಗಾರರಿಗೆ ಎದುರಾಗಿದೆ.
ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆ: ಬೆಳೆಗಾರರಲ್ಲಿ ಆತಂಕ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಸುರಿಯಬೇಕಿದ್ದ ಸಮಯದಲ್ಲಿ ಸುಡು ಬಿಸಿಲು ಆವರಿಸಿಕೊಂಡಿದೆ. ಇದರಿಂದ ಕಾಫಿ, ಮೆಣಸು, ಅಡಿಕೆ ಬೆಳೆಗಾರರು ಕಂಗಾಲಾಗಿದ್ದಾರೆ. ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದೆ. ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗಿತ್ತು. ಮುಂಗಾರು ಪ್ರವೇಶವಾದ ದಿನದಿಂದ ಜಿಲ್ಲೆಯ ಮಲೆನಾಡು, ಪಶ್ಚಿಮ ಘಟ್ಟಗಳ ಸಾಲು ಸೇರಿದಂತೆ ಜಿಲ್ಲೆಯಾದ್ಯಂತ ಸರಿಯಾದ ಮಳೆಯಾಗಿಲ್ಲ. ಹೀಗಾಗಿ ಕಾಫಿ ಹೂವಿನ ಮೇಲೆ ಭಾರೀ ಪರಿಣಾಮ ಬೀರಿದೆ. ಇನ್ನು ಅಡಿಕೆ, ತೆಂಗು ಬೆಳೆಗೆ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಇದನ್ನೂ ಓದಿ: ಮಳೆಗಾಲದಲ್ಲಿ ಬರದ ಛಾಯೆ: ಕುರಿಗಳಿಗೆ ಮೇವು, ನೀರು ಸಿಗದೇ ಕುರಿಗಾಹಿಗಳು ಕಂಗಾಲು
ಕಪ್ಪು ಬಂಗಾರ ಎಂದು ಕರೆಸಿಕೊಳ್ಳುವ ಕರಿ ಮೆಣಸಿಗೆ ಚಿಕ್ಕಮಗಳೂರು ಹೆಸರುವಾಸಿಯಾಗಿದೆ. ಆದರೆ ಮಳೆಯಾದ ಪರಿಣಾಮ ಮೆಣಸಿನ ಬಳ್ಳಿಗಳು ಒಣಗಲು ಆರಂಭಿಸಿದೆ. ಜೊತೆಗೆ ರೋಗ ಕೂಡ ಕಾಣಿಸಿಕೊಳ್ಳುತ್ತಿದೆ. ಹೂ ಬಿಡುವ ಸಮಯದಲ್ಲಿ ಬೇಕಾದಷ್ಟು ಮಳೆ ಆಗುತ್ತಿಲ್ಲ. ಹೀಗಾಗಿ ಮೆಣಸು, ಕಾಫಿಗೆ ಭಾರೀ ಹೊಡೆತ ನೀಡಿದೆ. ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ಅರ್ಧದಷ್ಟು ಬೆಳೆ ಕುಂಠಿತವಾಗಿದ್ದು, ಇಳುವರಿ ಕೂಡ ಕಡಿಮೆಯಾಗಲಿದೆ.
ರೋಗದಿಂದ ಬೆಳೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲು
ಇನ್ನು ಜಿಲ್ಲೆಯಲ್ಲಿ ಕಾಫಿ ಜೊತೆಗೆ ಮೆಣಸು, ಅಡಿಕೆ, ತೆಂಗು ಪ್ರಮುಖ ಬೆಳೆಯಾಗಿದೆ. ಆದರೆ ಬೆಳೆಗಳ ಫಸಲಿಗೆ ಬೇಕಾದಷ್ಟು ಪ್ರಮಾಣದಲ್ಲಿ ಮಳೆಯಾಗಿಲ್ಲ. ಇದರಿಂದ ಫಸಲು ಕುಂಠಿತವಾಗುವುದರ ಜೊತೆಗೆ ಕಾಣಿಸಿಕೊಳ್ಳುತ್ತಿರುವ ರೋಗದಿಂದ ಬೆಳೆ ಉಳಿಸಿಕೊಳ್ಳುವುದು ದೊಡ್ಡ ಸವಾಲಾಗಿದೆ.
ಪ್ರವಾಸಿಗರಿಲ್ಲದೇ ಕಳೆಗುಂದಿದ ಪ್ರವಾಸಿ ತಾಣಗಳು
ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಧೋ ಎಂದು ಸುರಿಯುವ ಮಳೆ ಹಾಗೂ ಕಣ್ಣು ಹಾಯಿಸಿದಷ್ಟೂ ಕಾಣುವ ಹಚ್ಚಹಸಿರಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಚಿಕ್ಕಮಗಳೂರಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದರು. ಈ ಸಮಯದಲ್ಲಿ ಪ್ರವಾಸಿ ತಾಣಗಳೆಲ್ಲಾ ಜನರಿಂದ ತುಂಬಿ ತುಳುಕಬೇಕಿತ್ತು. ಆದರೆ, ಈ ಬಾರಿ ಮಳೆಯೇ ಇಲ್ಲದ ಕಾರಣ ಮಲೆನಾಡಿನ ಹಚ್ಚಹಸಿರಿನ ಸೌಂದರ್ಯ ಸಂಪೂರ್ಣ ಮಾಯವಾಗಿದೆ. ಹಸಿರು ಮಾಯವಾಗಿ ಒಣ ಹವೆ ಮೂಡಿರುವುದರಿಂದ ಪ್ರವಾಸಿಗರು ಇತ್ತ ತಲೆಹಾಕುತ್ತಿಲ್ಲ. ಪ್ರವಾಸಿಗರ ಸುಳಿವಿಲ್ಲದೆ ತಾಣಗಳು ಕಳೆಗುಂದಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.