ಮಳೆಯ ನಡುವೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಮಿನಿ ವಾಟರ್ ಫಾಲ್ಸ್’? ಚರ್ಚೆಗೆ ಗ್ರಾಸವಾದ ವೈರಲ್ ವಿಡಿಯೋ

ಮಳೆಯ ನಡುವೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಮಿನಿ ವಾಟರ್ ಫಾಲ್ಸ್’? ಚರ್ಚೆಗೆ ಗ್ರಾಸವಾದ ವೈರಲ್ ವಿಡಿಯೋ

ಬೆಂಗಳೂರು, ಮಾರ್ಚ್ 19: ಬೆಂಗಳೂರು (Bangalore) ಸೇರಿದಂತೆ ಕರ್ನಾಟಕದ ಹಲವೆಡೆ ಬುಧವಾರ ರಾತ್ರಿ ಭಾರಿ ಮಳೆ ಸುರಿದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International Airport) ಆವರಣದಲ್ಲಿಯೂ ಭಾರಿ ಮಳೆಯಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಬೇಕಿದ್ದ ಕೆಲವು ವಿಮಾನಗಳನ್ನು ಬೇರೆಡೆಗೆ ಕಳುಹಿಸಲಾಗಿತ್ತು. ಇದೇ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್​​ನಲ್ಲಿ ಮೇಲ್ಛಾವಣಿಯಿಂದ ನೀರು ಸೋರಿದ ಹಾಗೂ ಪೈಪ್ ಒಡೆದು ನೀರು ಚಿಮ್ಮಿದ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ಕರ್ನಾಟಕ ಪೋರ್ಟ್​​ಫೋಲಿಯೋ ಎಂಬ ಎಕ್ಸ್​ ಹ್ಯಾಂಡಲ್​​ನಲ್ಲಿ ಹಂಚಲಾಗಿರುವ ವಿಡಿಯೋದಲ್ಲಿ, ಏರ್‌ಪೋರ್ಟ್‌ ಟರ್ಮಿನಲ್‌ನ ಮೇಲ್ಛಾವಣಿಯಿಂದ ನೀರು ಸುರಿಯುತ್ತಿರುವುದು ಕಾಣುತ್ತದೆ. ಹೊರಭಾಗದಲ್ಲೂ ಪೈಪ್‌ಗಳಿಂದ ನೀರು ಹೊರಬಂದು ಸುತ್ತಮುತ್ತ ಪ್ರದೇಶದಲ್ಲಿ ನೀರು ತುಂಬಿರುವ ದೃಶ್ಯಗಳು ಕಾಣಿಸಿಕೊಂಡಿವೆ. ಈ ಕಾರಣದಿಂದ ಪ್ರಯಾಣಿಕರಿಗೆ ಅಸೌಕರ್ಯ ಉಂಟಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಕರ್ನಾಟಕ ಪೋರ್ಟ್​​ಫೋಲಿಯೋ ಎಕ್ಸ್ ವಿಡಿಯೋ

‘ಮಳೆಯ ಪರಿಣಾಮ ಏರ್‌ಪೋರ್ಟ್‌ನಲ್ಲಿ ಮಿನಿ ಜಲಪಾತದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ವಹಣೆ ಎಲ್ಲಿದೆ’ ಎಂದು ಕರ್ನಾಟಕ ಪೋರ್ಟ್​​ಫೋಲಿಯೋ ಎಕ್ಸ್ ತಾಣದಲ್ಲಿ ಪ್ರಶ್ನಿಸಲಾಗಿದೆ.

ಮೂಲಗಳ ಪ್ರಕಾರ, ಟರ್ಮಿನಲ್ 1 ರ ಹೊರಭಾಗದಲ್ಲಿ ಛಾವಣಿ ಸೋರಿಕೆ, ಪೈಪ್ ಒಡೆದು ನೀರು ಚಿಮ್ಮಿದೆ ಎನ್ನಲಾಗಿದೆ. ಆದರೆ, ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.

ಬೆಂಗಳೂರು ವಿಮಾನ ನಿಲ್ದಾಣವು ಇಂತಹ ದೃಶ್ಯಗಳಿಗೆ ಸಾಕ್ಷಿಯಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ವಿಮಾನ ನಿಲ್ದಾಣದ ಛಾವಣಿ ಸೋರುತ್ತಿರುವ ಮತ್ತು ನೀರು ಟರ್ಮಿನಲ್​​ನಲ್ಲಿ ನೀರು ಸಂಗ್ರಹವಾಗುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. 2024 ರ ಮೇ ತಿಂಗಳಲ್ಲಿಯೂ ಸಹ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಛಾವಣಿಯಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದವು. ಇದರಿಂದಾಗಿ ಮಳೆ ನೀರು ಸೋರಿಕೆಯಾಗಿತ್ತು. ಇದೀಗ ಮತ್ತೆ ಅಂಥದ್ದೇ ವಿಡಿಯೋ ವೈರಲ್ ಆಗಿರುವುದು ಮಹಾನಗರದ ಮೂಲಸೌಕರ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಇದನ್ನೂ ಓದಿ: ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ: ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ಬೇರೆಡೆಗೆ ಡೈವರ್ಟ್

ಒಟ್ಟಿನಲ್ಲಿ, ಮಳೆ ಬಂದಾಗಲೆಲ್ಲ ಏರ್‌ಪೋರ್ಟ್ ಮೂಲಸೌಕರ್ಯ ಮತ್ತು ನಿರ್ವಹಣೆ ಕುರಿತು ಪ್ರಶ್ನೆಗಳು ಎದ್ದುಕೊಳ್ಳುತ್ತಿರುವುದು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *