ಮುಂಬೈ, ಜುಲೈ 17: ಮಹಾರಾಷ್ಟ್ರ(Maharashtra) ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ತಲ್ಲಣ ಸೃಷ್ಟಿಯಾಗಿದೆ. ಆಡಳಿತಾರೂಢ ಎನ್ಸಿಪಿ (ಅಜಿತ್ ಪವಾರ್ ಬಣ) ಮುಖ್ಯಸ್ಥೆ ಸುನೇತ್ರಾ ಪವಾರ್ ನೇತೃತ್ವದ ಬಣ ಮತ್ತು ಶರದ್ ಪವಾರ್ ನೇತೃತ್ವದ ವಿರೋಧ ಪಕ್ಷದ ಎನ್ಸಿಪಿ ಬಣ ಎರಡರಲ್ಲೂ ಆಂತರಿಕ ಕಲಹಗಳು ತಾರಕಕ್ಕೇರಿವೆ. ಈ ಇಡೀ ರಾಜಕೀಯ ನಾಟಕದ ಕೇಂದ್ರಬಿಂದುವಾಗಿ ಮೂಡಿಬಂದಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸದಲ್ಲಿ ಬ್ಯಾಕ್ ಟು ಬ್ಯಾಕ್ ನಡೆದಿರುವ ಮೂರು ರಹಸ್ಯ ಸಭೆಗಳು ತೀವ್ರ ಊಹಾಪೋಹಗಳಿಗೆ ಕಾರಣವಾಗಿವೆ. ಅಜಿತ್ ಪವಾರ್ ಅವರ ನಿಧನದ ನಂತರ ಈ ಅಧಿಕೃತ ಬಣದಲ್ಲಿ ಈಗ ಎರಡು ಆಂತರಿಕ ಉಪ-ಬಣಗಳು ಸೃಷ್ಟಿಯಾಗಿವೆ.
ಸುನೇತ್ರಾ ಪವಾರ್ ಮತ್ತು ಪಾರ್ಥ್ ಪವಾರ್ ಬಣ: ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಮತ್ತು ಅವರ ಪುತ್ರ ಪಾರ್ಥ್ ಪವಾರ್ ಈ ಗುಂಪನ್ನು ಮುನ್ನಡೆಸುತ್ತಿದ್ದಾರೆ. ಪಕ್ಷದ ಮೇಲಿನ ಹಿಡಿತ ಸದ್ಯ ಇವರ ಕೈಯಲ್ಲಿದೆ.
ಮತ್ತೊಂದು ಹಿರಿಯ ನಾಯಕರ ಬಣ, ಪಕ್ಷದಲ್ಲಿ ಯುವ ನಾಯಕ ಪಾರ್ಥ್ ಪವಾರ್ ಅವರ ಹಸ್ತಕ್ಷೇಪ ಹೆಚ್ಚುತ್ತಿರುವುದಕ್ಕೆ ಈ ಹಿರಿಯ ನಾಯಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಇತ್ತೀಚೆಗೆ ಇವರು ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ತಡರಾತ್ರಿ ರಹಸ್ಯವಾಗಿ ಭೇಟಿಯಾಗಿರುವುದು ಪಕ್ಷದಲ್ಲಿ ಬಿರುಕು ಮೂಡಿರುವುದನ್ನು ಸ್ಪಷ್ಟಪಡಿಸಿದೆ.
ಮತ್ತಷ್ಟು ಓದಿ: ಉದ್ಧವ್ ಠಾಕ್ರೆಗೆ ಶಾಕ್: ಶಿಂಧೆ ಬಣ ಸೇರಿದ ಧಾರಾಶಿವ್ ಸಂಸದ ಓಂರಾಜೇ ನಿಂಬಾಳ್ಕರ್!
ಮತ್ತೊಂದು ವಿರೋಧಿ ಬಣ,ಇದರಲ್ಲಿ ಹಿರಿಯ ಮುತ್ಸದ್ದಿ ಶರದ್ ಪವಾರ್ ಮತ್ತು ಅವರ ಪುತ್ರಿ ಸುಪ್ರಿಯಾ ಸುಳೆ ಈ ಬಣವನ್ನು ಮುನ್ನಡೆಸುತ್ತಿದ್ದಾರೆ. ಇವರು ಕಾಂಗ್ರೆಸ್ ಒಳಗೊಂಡ ಕೇಂದ್ರದ ‘ಇಂಡಿ’ಮೈತ್ರಿಕೂಟದೊಂದಿಗೆ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಈ ಬಣದ ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ಮುಖ್ಯಮಂತ್ರಿಯವರನ್ನು ಭೇಟಿಯಾಗಿರುವುದು ವಿಲೀನ ಅಥವಾ ಪಕ್ಷಾಂತರದ ಹೊಸ ಊಹಾಪೋಹಗಳನ್ನು ಹುಟ್ಟುಹಾಕಿದೆ.
ಬಂಡಾಯ ಎದ್ದು ಪಕ್ಷವನ್ನು ಸೀಳಿದ್ದ ಅಜಿತ್ ಪವಾರ್ ಅವರು ಶರದ್ ಪವಾರ್ ಅವರ ರಾಜಕೀಯ ಶಕ್ತಿಯನ್ನು ಎದುರಿಸಬಲ್ಲ ಏಕೈಕ ನಾಯಕರಾಗಿದ್ದರು. ಈಗ ಅವರ ಪತ್ನಿ ಸುನೇತ್ರಾ ಪವಾರ್ ಉಪಮುಖ್ಯಮಂತ್ರಿಯಾದರೂ, ಪಕ್ಷದ ಶಾಸಕರನ್ನು ಮತ್ತು ತಳಮಟ್ಟದ ಕಾರ್ಯಕರ್ತರನ್ನು ಒಟ್ಟಾಗಿ ಹಿಡಿದಿಟ್ಟುಕೊಳ್ಳುವ ಪ್ರಭಾವಿ ವರ್ಚಸ್ಸು ಅವರಲ್ಲಿಲ್ಲ. ಹೀಗಾಗಿ, ಅಜಿತ್ ಪವಾರ್ ಬಣದಲ್ಲಿರುವ ಶಾಸಕರು ತಮ್ಮ ರಾಜಕೀಯ ಭವಿಷ್ಯದ ಆತಂಕದಿಂದಾಗಿ ಮರಳಿ ಹಿರಿಯ ನಾಯಕ ಶರದ್ ಪವಾರ್ ಜತೆ ನಿಲ್ಲಲು ಉತ್ಸುಕರಾಗಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್ಸಿಪಿ (NCP-SP) ಸದ್ಯಕ್ಕೆ ವಿರೋಧ ಪಕ್ಷದಲ್ಲಿದ್ದರೂ, ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಚಾಣಾಕ್ಷ ಹೆಜ್ಜೆ ಇಡುತ್ತಿದೆ.
ಕಾರ್ಯಕರ್ತರ ಒತ್ತಡ: ಎನ್ಸಿಪಿ ಕಾರ್ಯಕರ್ತರು ತಳಮಟ್ಟದಲ್ಲಿ ಎರಡು ಬಣಗಳಾಗಿ ಕಿತ್ತಾಡುವುದರಿಂದ ಪಕ್ಷಕ್ಕೆ ನಷ್ಟವಾಗುತ್ತಿದೆ. ಪಕ್ಷ ಒಂದಾದರೆ ಮಾತ್ರ ಮರಳಿ ಅಧಿಕಾರ ಹಿಡಿಯಬಹುದು ಎಂಬುದು ಅವರ ವಾದ.
ಶರದ್ ಪವಾರ್ ಅವರ ತಂತ್ರ: ಅಜಿತ್ ಪವಾರ್ ಬಣದ ಹಿರಿಯ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರನ್ನು ದೂರವಿಟ್ಟು, ಕೇವಲ ಶಾಸಕರನ್ನು ಮಾತ್ರ ಮರಳಿ ತಮ್ಮ ಬಣಕ್ಕೆ ಸೇರಿಸಿಕೊಳ್ಳಲು ಶರದ್ ಪವಾರ್ ಒಲವು ತೋರಿದ್ದಾರೆ ಎನ್ನಲಾಗಿದೆ. ಬಂಡಾಯವೆದ್ದ ಪ್ರಮುಖ ನಾಯಕರನ್ನು ಮರಳಿ ಸೇರಿಸಿಕೊಂಡರೆ ಪಕ್ಷದ ಒಳಗೇ ಮತ್ತೆ ಅಸಮಾಧಾನ ಸ್ಫೋಟಗೊಳ್ಳಬಹುದು ಎಂಬುದು ಅವರ ಆತಂಕ.
ಇನ್ನೊಂದೆಡೆ, ಸುನೇತ್ರಾ ಪವಾರ್ ಬಣದಲ್ಲಿ ಮೂಲೆಗುಂಪಾಗುತ್ತಿರುವ ಹಿರಿಯ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರ ಲೆಕ್ಕಾಚಾರವೇ ಬೇರೆಯಾಗಿದೆ. ಇವರು ಶರದ್ ಪವಾರ್ ಬಣದಲ್ಲಿರುವ ಕೆಲವು ಪ್ರಮುಖ ನಾಯಕರನ್ನು ಸೆಳೆದು, ಉಭಯ ಬಣಗಳನ್ನು ಒಟ್ಟುಗೂಡಿಸಿ, ಆ ಜಂಟಿ ಪಕ್ಷವನ್ನು ಸಂಪೂರ್ಣವಾಗಿ ದೇವೇಂದ್ರ ಫಡ್ನವೀಸ್ ನೇತೃತ್ವದ ಎನ್ಡಿಎ (NDA) ಮೈತ್ರಿಕೂಟದ ಭಾಗವಾಗಿ ಮುಂದುವರಿಸಲು ಪ್ರಯತ್ನಿಸುತ್ತಿದ್ದಾರೆ.
ಇದೇ ಕಾರಣಕ್ಕಾಗಿ ಇವರು ಮುಖ್ಯಮಂತ್ರಿ ಫಡ್ನವೀಸ್ ಅವರನ್ನು ತಡರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಶರದ್ ಪವಾರ್ ಬಣದ ಜಯಂತ್ ಪಾಟೀಲ್ ಕೂಡ ಅದೇ ಸಮಯದಲ್ಲಿ ಸಿಎಂ ನಿವಾಸದಲ್ಲಿದ್ದುದು ಈ ತೆರೆಮರೆಯ ಸಂಧಾನಕ್ಕೆ ಪುಷ್ಟಿ ನೀಡಿದೆ.
ವಿಲೀನಕ್ಕೆ ಇರುವ ಮುಖ್ಯ ಕಾನೂನಾತ್ಮಕ ಅಡೆತಡೆಗಳು
ಅಧಿಕೃತ ಚಿಹ್ನೆಯ ಜಗಳ: ಭಾರತೀಯ ಚುನಾವಣಾ ಆಯೋಗವು ಅಜಿತ್ ಪವಾರ್ ಬಣಕ್ಕೆ ಅಧಿಕೃತ ‘ಗಡಿಯಾರ’ ಚಿಹ್ನೆ ಮತ್ತು ಪಕ್ಷದ ಹೆಸರನ್ನು ನೀಡಿತ್ತು. ಈಗ ವಿಲೀನವಾಗಬೇಕಾದರೆ ಸುನೇತ್ರಾ ಪವಾರ್ ಬಣದ ಮೂರನೇ ಎರಡರಷ್ಟು (2/3rd) ಶಾಸಕರು ಒಪ್ಪಿಗೆ ನೀಡಬೇಕಾಗುತ್ತದೆ.
ಸುಪ್ರಿಯಾ ಸುಳೆಗ ನಿರಾಕರಣೆ: ಶರದ್ ಪವಾರ್ ಅವರ ಪುತ್ರಿ ಸುಪ್ರಿಯಾ ಸುಳೆ ಅವರು ಯಾವುದೇ ಕಾರಣಕ್ಕೂ ನಾವು ಬಿಜೆಪಿ,ಎನ್ಡಿಎ ಜೊತೆ ಹೋಗುವುದಿಲ್ಲ ಮತ್ತು ನಮ್ಮ ಬಣವು ‘ಇಂಡಿ’ ಮೈತ್ರಿಕೂಟದಲ್ಲೇ ಉಳಿಯಲಿದೆ ಎಂದು ಖಡಕ್ಕಾಗಿ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ಶರದ್ ಪವಾರ್ ಅವರ ಎನ್ಸಿಪಿ ಬಣವು ಯಾವುದೇ ಕಾರಣಕ್ಕೂ ಆಡಳಿತಾರೂಢ ಮೈತ್ರಿಕೂಟಕ್ಕೆ ಹೋಗುವುದಿಲ್ಲ. ಆದರೆ, ಸುನೇತ್ರಾ ಪವಾರ್ ಬಣದಲ್ಲಿರುವ ಹಲವು ಶಾಸಕರು ಸದ್ದಿಲ್ಲದೆ ಶರದ್ ಪವಾರ್ ಬಣಕ್ಕೆ ಮರಳಲು ಸಿದ್ಧತೆ ನಡೆಸುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಸರ್ಕಾರದಲ್ಲಿ ದೊಡ್ಡ ಮಟ್ಟದ ರಾಜಕೀಯ ತಲ್ಲಣ ಸೃಷ್ಟಿಯಾಗುವುದು ಖಚಿತ ಎನ್ನಲಾಗುತ್ತಿದೆ.
ಒಂದೇ ರಾತ್ರಿಯಲ್ಲಿ ನಡೆದ 3 ಪ್ರಮುಖ ಸಭೆಗಳು
ಮೊದಲ ಸಭೆ: ಸುನೇತ್ರಾ ಪವಾರ್ ಬಣದ ಹಿರಿಯ ನಾಯಕರಾದ ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದರು.
ಎರಡನೇ ಸಭೆ: ಇದಾದ ಬೆನ್ನಲ್ಲೇ, ಅಜಿತ್ ಪವಾರ್ ಅವರ ಪುತ್ರ ಹಾಗೂ ಸಂಸದ ಪಾರ್ಥ್ ಪವಾರ್ ಅವರು ಕೂಡ ಮುಖ್ಯಮಂತ್ರಿಯವರನ್ನು ಪ್ರತ್ಯೇಕವಾಗಿ ಭೇಟಿಯಾದರು.
ಮೂರನೇ ಸಭೆ : ಇದೇ ಸಮಯದಲ್ಲಿ ಶರದ್ ಪವಾರ್ ಬಣದ (NCP-SP) ಹಿರಿಯ ನಾಯಕ ಜಯಂತ್ ಪಾಟೀಲ್ ಕೂಡ ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಎರಡು ಶತ್ರು ಬಣಗಳ ನಾಯಕರು ಒಂದೇ ರಾತ್ರಿ ಸಿಎಂ ಭೇಟಿಯಾಗಿರುವುದು ಕೇವಲ ಕಾಕತಾಳೀಯವಾಗಿರಲು ಸಾಧ್ಯವಿಲ್ಲ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.
ಪ್ರಫುಲ್ ಪಟೇಲ್ ಮತ್ತು ಸುನಿಲ್ ತತ್ಕರೆ ಅವರು ಶರದ್ ಪವಾರ್ ಪಕ್ಷದ ಒಂದು ಭಾಗದ ನಾಯಕರನ್ನು ಸೆಳೆದು ಒಟ್ಟಾಗಿ ಎನ್ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆಯ ಕುರಿತು ಚರ್ಚಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಮಹಾರಾಷ್ಟ್ರದ ರಾಜಕೀಯ ಯಾವ ತಿರುವು ಪಡೆಯಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ