ಬೆಂಗಳೂರು, (ಜುಲೈ 02): ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿ ಕಲ್ಲು ಗಣಿಗಾರಿಕೆಯಲ್ಲಿ ಸಂಭವಿಸಿದ ಅಪಘಡದಲ್ಲಿ (Bengaluru quarry tragedy) ಉಂಟಾದ ಜೀವಹಾನಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಮೋದಿ, “ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ತೀವ್ರ ಸಂತಾಪಗಳು. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಕರ್ನಾಟಕದ ಬೆಂಗಳೂರು ನಗರ ಜಿಲ್ಲೆಯ ಕಲ್ಲು ಗಣಿಯಲ್ಲಿ ಸಂಭವಿಸಿದ ದುರ್ಘಟನೆಯಲ್ಲಿ ಪ್ರಾಣಹಾನಿ ಸಂಭವಿಸಿರುವುದು ನೋವು ತಂದಿದೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ದುರಂತ: 7 ಮಂದಿ ಬಲಿ, ಐವರು ಕೂಲಿ ಕಾರ್ಮಿಕರಿಗೆ ಗಾಯ
ಕಾವೇರಿ ಕಂಪನಿಗೆ ಸೇರಿದ ಕ್ರಷರ್
ಕಾವೇರಿ ಕಂಪನಿಗೆ ಸೇರಿದ ಕ್ರಷರ್ನಲ್ಲಿ ದುರಂತ ಸಂಭವಿಸಿದ್ದು, ಇಂದು ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಎಂದಿನಂತೆ ಕೆಲಸ ಮಾಡ್ತಿದ್ದ ಕಾರ್ಮಿಕರ ಪಾಲಿಗೆ ಬಂಡೆ ಯಮನಾಗಿ ಬಂದಿದೆ. ಇಟಾಚಿಯಲ್ಲಿ ಕೆಲಸ ಮಾಡುವಾಗ ಬಂಡೆ ಕೆಳಗೆ ಬಿದ್ದಿದ್ದು, ಕಾರ್ಮಿಕರ ಮೇಲೆಯೇ ಬಿದ್ದು ಭಾರೀ ದುರಂತ ಸಂಭವಿಸಿದೆ. ಸ್ಥಳಕ್ಕೆ ತಾವರೆಕೆರೆ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮುಂಜಾನೆ ಜಿಲೆಟಿನ್ ಸ್ಫೋಟ!
ಸ್ಥಳೀಯ ಮೂಲಗಳ ಪ್ರಕಾರ, ಹುಲವೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕದ್ದುಮುಚ್ಚಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು. ಇಂದು ಬೆಳಗಿನ ಜಾವ ಕಾರ್ಮಿಕರು ಎಂದಿನಂತೆ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ದೊಡ್ಡ ಬಂಡೆಗಳನ್ನು ಪುಡಿ ಮಾಡಲು ಅತಿಯಾದ ತೀವ್ರತೆಯ ಸ್ಫೋಟಕಗಳನ್ನು ಬಳಸಲಾಗಿದೆ. ಈ ವೇಳೆ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಬಂಡೆ ಸ್ಫೋಟಿಸುವಾಗ ಇಡೀ ಪ್ರದೇಶವೇ ಬಹುದೊಡ್ಡ ಸೌಂಡ್ ಜೊತೆಗೆ ಸಿಡಿದಿದೆ. ಸ್ಫೋಟದ ತೀವ್ರತೆಗೆ ಬಂಡೆ ಕುಸಿದು ಸಿಲುಕಿ ಏಳು ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.