ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಸಂಬಂಧ ಮಹತ್ವದ ಆದೇಶ
ಚಾಮರಾಜನಗರ, ಮೇ 13: ಕಾಡುಪ್ರಾಣಿಗಳ ಸತತ ದಾಳಿಯಿಂದ ಭಕ್ತರ ಪ್ರಾಣಕ್ಕೆ ಕುತ್ತುಂಟಾಗುತ್ತಿರುವ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭಕ್ತರ ಪಾದಯಾತ್ರೆ ಸಂಬಂಧ ಮಹತ್ವದ ಆದೇಶವನ್ನು ಅರಣ್ಯ ಇಲಾಖೆ ಹೊರಡಿಸಿದೆ. ಜಾತ್ರೆ ಸಂದರ್ಭ ಹೊರತುಪಡಿಸಿ ಉಳಿದ ಸಾಮಾನ್ಯ ದಿನಗಳಲ್ಲಿ ಪಾದಯಾತ್ರೆಗೆ ಬ್ರೇಕ್ ಹಾಕಲಾಗಿದ್ದು, ಬಸ್ಗಳಲ್ಲಿಯೇ ಭಕ್ತರು ತೆರಳಬೇಕೆಂದು ಸೂಚಿಸಲಾಗಿದೆ. ಆ ಮೂಲಕ ಮಾನವ – ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಹಾಕಲು ಇಲಾಖೆ ಮುಂದಾಗಿದೆ.
ಮುಖ್ಯಾಂಶಗಳು
- ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ಭಕ್ತರ ಸುರಕ್ಷತೆಗೆ ಕಠಿಣ ಕ್ರಮ
- ಪಾದಯಾತ್ರೆ ಸಂಬಂಧ ಅರಣ್ಯ ಇಲಾಖೆಯಿಂದ ಮಹತ್ವದ ಆದೇಶ
- ಜಾತ್ರೆ ಹೊರತುಪಡಿಸಿ ಉಳಿದ ದಿನಗಳಲ್ಲಿ ಪಾದಯಾತ್ರೆಗೆ ಬ್ರೇಕ್
ಮಹದೇಶ್ವರ ಬೆಟ್ಟಕ್ಕೆ ಇತ್ತೀಚೆಗೆ ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಿಂದಲೂ ಪ್ರತಿನಿತ್ಯ ಭಕ್ತ ಸಾಗರವೇ ಹರಿದು ಬರುತ್ತಿದೆ. ಬೇಡಿದ ವರವನ್ನ ಮಾದಪ್ಪ ನೀಡುತ್ತಾನೆಂಬ ನಂಬಿಕೆಯಿಂದ ದಿನೇ ದಿನೇ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಇನ್ನು ಮಲೆ ಮಹದೇಶ್ವರ ಬೆಟ್ಟಕ್ಕೆ ತಲೆತಲಾಂತರದಿಂದಲ್ಲೂ ಕಾಲ್ನಡಿಗೆಯಲ್ಲಿ ಭಕ್ತರು ಬಂದು ಸೇವೆ ಮಾಡೋದು ಪದ್ದತಿ. ಈವರೆಗೂ ಅದು ನಡೆದುಕೊಂಡು ಬಂದಿದೆ. ಯುಗಾದಿ, ಶಿವರಾತ್ರಿ ಹಾಗೂ ದೀಪಾವಳಿ ಜಾತ್ರೆಯ ವೇಳೆ ಊರಿಗೆ ಊರೇ ತಮ್ಮ ಗ್ರಾಮಗಳಿಂದ ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆಯುತ್ತಾರೆ. ಆದರೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜಾತ್ರೆ ವೇಳೆ ನಡೆಯುತ್ತಿದ್ದ ಈ ಪಾದಯಾತ್ರೆ ಇದೀಗ ವರ್ಷವಿಡಿ ಸಾಗುತ್ತಾ ಬಂದಿದೆ.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ನರಭಕ್ಷಕನ ಅಟ್ಟಹಾಸ; ನಾಗಮಲೆ ಹಾದಿಯಲ್ಲಿ ಬಾಲಕನನ್ನೇ ಕೊಂದು ತಿಂದ ಚಿರತೆ!
ಈ ನಡುವೆ ಕೌದಳ್ಳಿದಿಂದ ಮಲೆ ಮಹದೇಶ್ವರ ಬೆಟ್ಟದವರೆಗಿನ ಪ್ರದೇಶದಲ್ಲಿ ಕಾಡುಪ್ರಾಣಿಗಳ ಸಂಚಾರವೂ ಹೆಚ್ಚಿದ್ದು, ಪಾದಯಾತ್ರಿಗಳ ಮೇಲೆ ಚಿರತೆ ಮತ್ತು ಆನೆಗಳಂತಹ ಪ್ರಾಣಿಗಳಿಂದ ದಾಳಿ ಮೇಲಿಂದ ಮೇಲೆ ನಡೆಯುತ್ತಿವೆ. ಮೂರು ತಿಂಗಳ ಅವಧಿಯಲ್ಲಿ ಮೂವರ ಮೇಲೆ ನರಭಕ್ಷಕ ಚಿರತೆ ದಾಳಿ ಮಾಡಿದ್ದು, ಆ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇದರ ಜೊತೆ ಆನೆಗಳು ಕೂಡ ಪಾದಯಾತ್ರಿಗಳನ್ನು ಭೀತಿಗೊಳಿಸುವ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಾದಪ್ಪನ ಭಕ್ತರನ್ನ ಕಾಪಾಡಲು ಅರಣ್ಯ ಇಲಾಖೆ ಎಷ್ಟೇ ಹರಸಾಹಸ ಪಟ್ಟರೂ ಮಾನವ ಹಾಗೂ ಪ್ರಾಣಿ ಸಂಘರ್ಷಕ್ಕೆ ಕಡಿವಾಣ ಕಷ್ಟ ಸಾಧ್ಯ ಎಂಬಂತಾಗಿ. ಆ ಕಾರಣಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯಾಧಿಕಾರಿಗಳ ಸಭೆ ನಡೆಸಿ, ಕೆಲ ಸೂಚನೆಗಳನ್ನು ನೀಡಿದ್ದಾರೆ. ಇನ್ನು ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೈಗೆ 14 ಕಿ.ಮೀ. ಕಾಡು ದಾರಿಯಲ್ಲಿ ಸಾಗಬೇಕು . ಆ ಪೈಕಿ ಇದೀಗ 3 ಕಿ.ಮೀ.ಗೆ ಮಾತ್ರ ಭಕ್ತರ ಪಾದಯಾತ್ರೆಗೆ ಅವಕಾಶ ಕಲ್ಪಿಸಲಾಗಿದ್ದು, ಈ ಮಾರ್ಗದಲ್ಲೂ ಸಹ ಭಕ್ತರು ಗೈಡ್ ಜೊತೆ ಅಗತ್ಯ ಮುಂಜಾಗೃತೆ ಸಹಿತ ತೆರಳಬೇಕು ಎಂದು ಆದೇಶಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 6:28 pm, Wed, 13 May 26