ಭಾರತೀಯ ಕ್ರಿಕೆಟ್ನಲ್ಲಿ ಪ್ರತಿಭೆಗಳಿಗೇನು ಕೊರತೆಯಿಲ್ಲ. ಆದರೆ, ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ಎಷ್ಟು ಬೇಗನೆ ಟೀಕೆಗೆ ಗುರಿಯಾಗಬೇಕಾಗುತ್ತದೆ ಎಂಬುದಕ್ಕೆ ಇತ್ತೀಚಿನ ಅತ್ಯುತ್ತಮ ಉದಾಹರಣೆ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್. ಈ ಬಾರಿಯ ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದರೂ ರವಿ ಬಿಷ್ಣೋಯ್ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಲಭಿಸಿತ್ತು. ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಾರಾ? ಎಂಬ ಪ್ರಶ್ನೆಗೆ 4 ಓವರ್ಗಳಲ್ಲಿ 60 ರನ್ ನೀಡಿ ಉತ್ತರ ಸಿಗುತ್ತದೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾಗೆ ರವಿ ಬಿಷ್ಣೋಯ್ ಆಯ್ಕೆಗೆ ಮಾನದಂಡವೇನು? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಐಪಿಎಲ್ನಲ್ಲಿ ಕಳಪೆ ಪ್ರದರ್ಶನ:
ಭಾರತ ಟಿ20 ತಂಡದ ಆಯ್ಕೆ ನಡೆಯುತ್ತಿರುವುದು ಐಪಿಎಲ್ನಲ್ಲಿನ ಪ್ರದರ್ಶನದ ಮೇಲೆ ಎಂಬ ವಿಚಾರ ಗುಟ್ಟಾಗೇನು ಉಳಿದಿಲ್ಲ. ಆದರೆ ಇಲ್ಲಿ ರವಿ ಬಿಷ್ಣೋಯ್ ಅವರನ್ನು ಯಾವ ಮಾನದಂಡದ ಮೇಲೆ ಆಯ್ಕೆ ಮಾಡಿದ್ದಾರೆ ಎಂಬುದೇ ಪ್ರಶ್ನೆ.
ಏಕೆಂಧರೆ ಈ ಬಾರಿಯ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿದ್ದ ರವಿ ಬಿಷ್ಣೋಯ್ ಆಡಿರುವುದು 9 ಪಂದ್ಯಗಳನ್ನು ಮಾತ್ರ. ಅಂದರೆ ಆರ್ಆರ್ ಆಡಿದ 16 ಮ್ಯಾಚ್ಗಳಲ್ಲಿ ಬಿಷ್ಣೋಯ್ 7 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಇದಕ್ಕೆ ಮುಖ್ಯ ಕಾರಣ ಕಳಪೆ ಪ್ರದರ್ಶನ.
ಇನ್ನು ಆಡಿದ 9 ಪಂದ್ಯಗಳಲ್ಲಿ ಪಡೆದಿದ್ದು ಕೇವಲ 11 ವಿಕೆಟ್ಗಳನ್ನು ಮಾತ್ರ. ಅದು ಕೂಡ ಪ್ರತಿ ಓವರ್ಗೆ 9.88 ಎಕಾನಮಿ ರೇಟ್ನಲ್ಲಿ ರನ್ ನೀಡುವ ಮೂಲಕ. ಅಂದರೆ ಈ ಬಾರಿಯ ಐಪಿಎಲ್ನಲ್ಲಿ ರವಿ ಬಿಷ್ಣೋಯ್ ಸಂಪೂರ್ಣವಾಗಿ ವಿಫಲರಾಗಿದ್ದರು ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.
ಅತ್ತ ರನ್ ನಿಯಂತ್ರಿಸಲು ಸಾಧ್ಯವಾಗದ, ಇತ್ತ ವಿಕೆಟ್ ಪಡೆಯದ ಕಾರಣ ರಾಜಸ್ಥಾನ್ ರಾಯಲ್ಸ್ ತಂಡ ರವಿ ಬಿಷ್ಣೋಯ್ ಅವರನ್ನು ಪ್ರಮುಖ ಪಂದ್ಯಗಳಲ್ಲಿ ಪ್ಲೇಯಿಂಗ್ ಇಲೆವೆನ್ನಿಂದಲೂ ಹೊರಗಿಟ್ಟಿತ್ತು. ಇದಾಗ್ಯೂ ಟೀಮ್ ಇಂಡಿಯಾ ಆಯ್ಕೆ ಸಮಿತಿಯುವ ಬಿಷ್ಣೋಯ್ ಅವರನ್ನು ಭಾರತ ಟಿ20 ತಂಡಕ್ಕೆ ಆಯ್ಕೆ ಮಾಡಿದ್ದು ಯಾವ ಅರ್ಹತಾ ಮಾನದಂಡದ ಮೇಲೆ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ.
- ಕಳೆದ ಎರಡು ಐಪಿಎಲ್ ಸೀಸನ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೃನಾಲ್ ಪಾಂಡ್ಯ ಆಯ್ಕೆಯಾಗಿಲ್ಲ.
- ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಸುಯಶ್ ಶರ್ಮಾರನ್ನು ಕೂಡ ಆಯ್ಕೆಗೆ ಪರಿಗಣಿಸಲಾಗಿಲ್ಲ.
ಅನಪೇಕ್ಷಿತ ದಾಖಲೆ:
ಟೀಮ್ ಇಂಡಿಯಾಗೆ ಆಯ್ಕೆ ಏನೋ ಆದರೂ, ಪ್ಲೇಯಿಂಗ್ ಇಲೆವೆನ್ನಲ್ಲೂ ಕಾಣಿಸಿಕೊಂಡರು. ಆದರೆ ರವಿ ಬಿಷ್ಣೋಯ್ ನೀಡಿದ ಪ್ರದರ್ಶನದ ಬಗ್ಗೆ ಇದೀಗ ಚರ್ಚೆಗಳು ಶುರುವಾಗಿದೆ.
ಏಕೆಂದರೆ ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಬಿಷ್ಣೋಯ್ ಒಂದೇ ಪಂದ್ಯದಲ್ಲಿ 3 ಬ್ಯಾಕ್-ಫುಟ್ ನೋ-ಬಾಲ್ಗಳನ್ನು ಎಸೆದಿದ್ದರು.
ಅಂತರರಾಷ್ಟ್ರೀಯ ಟಿ20 ಇತಿಹಾಸದಲ್ಲಿ ಈ ರೀತಿಯ ಶಿಸ್ತುಬದ್ಧವಲ್ಲದ ಬೌಲಿಂಗ್ ಪ್ರದರ್ಶಿಸಿದ ವಿಶ್ವದ ಮೊದಲ ಪೂರ್ಣ ಸದಸ್ಯ ರಾಷ್ಟ್ರದ ಸ್ಪಿನ್ನರ್ ಎಂಬ ಅನಗತ್ಯ ದಾಖಲೆಗೆ ರವಿ ಬಿಷ್ಣೋಯ್ ಪಾಲಾಗಿದೆ.
ಅಲ್ಲದೆ ಸ್ಪಿನ್ ಬೌಲರ್ಗಳು ನೋ-ಬಾಲ್ ಎಸೆಯುವುದು ಕ್ರಿಕೆಟ್ನಲ್ಲಿ ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಏಕೆಂದರೆ ರನ್-ಅಪ್ ಚಿಕ್ಕದಾಗಿದ್ದರೂ ಗೆರೆ ದಾಟುವುದು ಅಥವಾ ಬ್ಯಾಕ್ ಫುಟ್ ಲೈನ್ ಮುಟ್ಟುವುದು ಲಯದ ತೀವ್ರ ಕೊರತೆಯನ್ನು ತೋರಿಸುತ್ತದೆ. ಅಂದರೆ ರವಿ ಬಿಷ್ಣೋಯ್ ಬೌಲಿಂಗ್ ಲೈನಪ್ನಲ್ಲೇ ಲಯ ಹೊಂದಿಲ್ಲ ಎಂಬುದು ಸ್ಪಷ್ಟ.
ದುಬಾರಿ ಓವರ್ಗಳು:
ಟಿ20 ಕ್ರಿಕೆಟ್ನಲ್ಲಿ ಸ್ಪಿನ್ನರ್ಗಳ ಪಾತ್ರ ರನ್ ನಿಯಂತ್ರಿಸುವುದು ಮತ್ತು ಮಧ್ಯದ ಓವರ್ಗಳಲ್ಲಿ ವಿಕೆಟ್ ಪಡೆಯುವುದು. ಆದರೆ ರವಿ ಬಿಷ್ಣೋಯ್ ಇತ್ತೀಚೆಗೆ ರನ್ ಮಳೆ ಹರಿಸುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ 4 ಓವರ್ಗಳಲ್ಲಿ ವಿಕೆಟ್ ಪಡೆಯದೇ 60 ರನ್ ಬಿಟ್ಟುಕೊಟ್ಟರು. ಅದರಲ್ಲೂ ಪಂದ್ಯದ ಅತ್ಯಂತ ನಿರ್ಣಾಯಕವಾಗಿದ್ದ 17ನೇ ಓವರ್ನಲ್ಲಿ ಬರೋಬ್ಬರಿ 29 ರನ್ ನೀಡುವ ಮೂಲಕ ಭಾರತದ ಗೆಲುವಿನ ಆಸೆಗೆ ತಣ್ಣೀರು ಎರೆಚಿದರು.
ಗೂಗ್ಲಿ ಮೇಲಿನ ಅತಿಯಾದ ಅವಲಂಬನೆ:
ರವಿ ಬಿಷ್ಣೋಯ್ ಅವರ ಪ್ರಮುಖ ಅಸ್ತ್ರ ಗೂಗ್ಲಿ. ಆರಂಭದಲ್ಲಿ ಬ್ಯಾಟರ್ಗಳಿಗೆ ಇವರ ಗೂಗ್ಲಿ ಎಸೆಯುವುದು ಅರಿಯುವುದು ಕಷ್ಟವಾಗಿತ್ತು. ಆದರೆ ಪ್ರಸ್ತುತ ಆಧುನಿಕ ಕ್ರಿಕೆಟ್ನಲ್ಲಿ ತಂತ್ರಜ್ಞಾನದ ನೆರವಿನಿಂದ ಬ್ಯಾಟರ್ಗಳು ಗೂಗ್ಲಿ ಶೈಲಿಯನ್ನು ಸುಲಭವಾಗಿ ರೀಡ್ ಮಾಡ್ತಾರೆ.
ಇದಾಗ್ಯೂ ರವಿ ಬಿಷ್ಣೋಯ್ ಸಾಂಪ್ರದಾಯಿಕ ಲೆಗ್-ಸ್ಪಿನ್ ಬದಲಿಗೆ ಕೇವಲ ಗೂಗ್ಲಿ ನಂಬಿ ಬೌಲಿಂಗ್ ಮಾಡುತ್ತಿದ್ದಾರೆ ಎಂಬುದೇ ಸತ್ಯ. ಇದಕ್ಕೆ ಸಾಕ್ಷಿ ಕಳೆದ ಐಪಿಎಲ್ನಲ್ಲಿ 26 ಓವರ್ಗಳಲ್ಲಿ 257 ರನ್ ಹೊಡೆಸಿಕೊಂಡಿರುವುದು. ಇದೇ ಪ್ರಯೋಗವನ್ನು ಟೀಮ್ ಇಂಡಿಯಾದಲ್ಲೂ ಮುಂದುವರೆಸಿದ್ದಾರೆ. ಪರಿಣಾಮ 4 ಓವರ್ಗಳಲ್ಲಿ ಇಂಗ್ಲೆಂಡ್ ಬ್ಯಾಟರ್ಗಳು 60 ರನ್ ಚಚ್ಚಿದ್ದಾರೆ.
ಇದನ್ನೂ ಓದಿ: ಅವನು ನನ್ನ ಆತ್ಮೀಯ ಗೆಳೆಯ: ದಿನೇಶ್ ಕಾರ್ತಿಕ್ ಬಗ್ಗೆ ಮುರಳಿ ವಿಜಯ್ ಭಾವುಕ!
ಒಟ್ಟಾರೆಯಾಗಿ ಹೇಳುವುದಾದರೆ, ರವಿ ಬಿಷ್ಣೋಯ್ ಅವರಲ್ಲಿ ಅದ್ಭುತ ಪ್ರತಿಭೆ ಮತ್ತು ಮ್ಯಾಚ್-ವಿನ್ನರ್ ಆಗುವ ಎಲ್ಲಾ ಸಾಮರ್ಥ್ಯಗಳಿವೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕೇವಲ ಪ್ರತಿಭೆಯಷ್ಟೇ ಸಾಲದು, ಪ್ರಸ್ತುತ ಫಾರ್ಮ್ ಕೂಡ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿ ಮುಂಬರುವ ದಿನಗಳಲ್ಲಾದರೂ ಆಯ್ಕೆ ಸಮಿತಿ ಫಾರ್ಮ್ನಲ್ಲಿರುವ ಆಟಗಾರರನ್ನು ಆಯ್ಕೆ ಮಾಡಲಿ ಎಂಬುದು ಕ್ರಿಕೆಟ್ ಪ್ರೇಮಿಗಳ ಆಶಯವಾಗಿದೆ.