ಬೆಂಗಳೂರು, ಮೇ 07: ಬೆಂಗಳೂರಿನ ಮಾವು (Mango) ಮತ್ತು ಹಲಸಿನ ಹಣ್ಣಿನ ಪ್ರಿಯರಿಗೆ ಈ ಬಾರಿ ಸಿಹಿ ಸುದ್ದಿ ಸಿಕ್ಕಿದೆ. ಇದೇ ಮೊದಲ ಬಾರಿಗೆ ನಗರದ ಎರಡು ಪ್ರಮುಖ ಉದ್ಯಾನವನಗಳಾದ ಕಬ್ಬನ್ ಪಾರ್ಕ್ ಮತ್ತು ಲಾಲ್ಬಾಗ್ನಲ್ಲಿ ‘ಮಾವು ಮತ್ತು ಹಲಸಿನ ಮೇಳ’ ಆಯೋಜಿಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ. ಮೊದಲಿಗೆ ಕಬ್ಬನ್ ಪಾರ್ಕ್ನಲ್ಲಿ ಮೇಳ ಶುರುವಾಗಲಿದ್ದು, ಮೇ 20ರ ನಂತರ ಲಾಲ್ ಬಾಗ್ನಲ್ಲೂ ಮೇಳ ಜರುಗಲಿದೆ. ಹೊರರಾಜ್ಯದ ಗುಣಮಟ್ಟವಿಲ್ಲದ ಮಾವಿನ ಹಣ್ಣನ್ನು ಖರೀಸುವ ಬದಲು, ನಮ್ಮ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಲಾಗಿದೆ.
ಮುಖ್ಯಾಂಶಗಳು
- ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ನಲ್ಲಿ ಮಾವು ಮತ್ತು ಹಲಸಿನ ಮೇಳ
- ಮೇ 8 ರಿಂದ ಮೇಳ ಆರಂಭ
- ನಮ್ಮ ರಾಜ್ಯದ ರೈತರನ್ನು ಪ್ರೋತ್ಸಾಹಿಸುವ ಉದ್ದೇಶ
ಕಬ್ಬನ್ ಪಾರ್ಕ್ನಲ್ಲಿ ಮೊದಲ ಮೇಳ
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಟಿ.ಆರ್. ವೇದಮೂರ್ತಿ ಅವರು ನೀಡಿರುವ ಮಾಹಿತಿಯಂತೆ, ಮೇ 8ರಿಂದ ಮೇ 18ರವರೆಗೆ ಕಬ್ಬನ್ ಪಾರ್ಕ್ನಲ್ಲಿ ಮೊದಲ ಹಂತದ ಮೇಳ ನಡೆಯಲಿದೆ. ಈ ಮೇಳವು ಮುಖ್ಯವಾಗಿ ಧಾರವಾಡ, ಮಂಡ್ಯ, ಮೈಸೂರು, ದಕ್ಷಿಣ ಬೆಂಗಳೂರು ಮತ್ತು ದಕ್ಷಿಣ ಕರ್ನಾಟಕದ ರೈತರಿಗೆ ಅನುಕೂಲವಾಗಲಿದೆ. ಸುಮಾರು 70 ಸ್ಟಾಲ್ಗಳನ್ನು ಇಲ್ಲಿ ಹಾಕಲಾಗುತ್ತಿದ್ದು, ಗ್ರಾಹಕರು ನೇರವಾಗಿ ರೈತರಿಂದಲೇ ಕೆಮಿಕಲ್ ಮುಕ್ತ ಹಣ್ಣುಗಳನ್ನು ಖರೀದಿಸಬಹುದಾಗಿದೆ.
ಮತ್ತೊಂದು ಸುತ್ತಿನ ಮೇಳವು ಇದೇ ಕಬ್ಬನ್ ಪಾರ್ಕ್ನಲ್ಲಿ ಮೇ ತಿಂಗಳ ಅಂತ್ಯದಲ್ಲಿ ನಡೆಯಲಿದ್ದು, ಅಲ್ಲಿ 100ಕ್ಕೂ ಹೆಚ್ಚು ಮಳಿಗೆಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಇದರ ದಿನಾಂಕಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಎಂದು ಇಲಾಖೆ ತಿಳಿಸಿದೆ.
ಇಳುವರಿ ಕುಸಿತದ ಆತಂಕ
ಈ ಬಾರಿ ರಾಜ್ಯದಲ್ಲಿ ಮಾವಿನ ಇಳುವರಿ ಗಣನೀಯವಾಗಿ ಕುಸಿದಿದೆ. ಕಳೆದ ವರ್ಷ ಸುಮಾರು 15 ಲಕ್ಷ ಟನ್ ಇಳುವರಿ ಬಂದಿದ್ದರೆ, ಈ ಬಾರಿ ಕೇವಲ 10 ಲಕ್ಷ ಟನ್ ಇಳುವರು ಬರಬಹುದೆಂದು ಅಂದಾಜಿಸಲಾಗಿದೆ. ಅತೀವ ಶಾಖ ಮತ್ತು ವಾತಾವರಣದಲ್ಲಿನ ಕಡಿಮೆ ತೇವಾಂಶದ ಕಾರಣದಿಂದ ಹಣ್ಣುಗಳು ಗಿಡದಿಂದ ಉದುರಿರುವುದು ಇಳುವರಿ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿದೆ. ಜೊತೆಗೆ ರಫ್ತು ಪ್ರಮಾಣದಲ್ಲೂ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ 1,000 ಟನ್ ಮಾವು ರಫ್ತು ಮಾಡಲಾಗಿತ್ತು. ಆದರೆ ಈ ವರ್ಷ ಈವರೆಗೆ ಕೇವಲ 50 ರಿಂದ 100 ಟನ್ ಮಾತ್ರ ರಫ್ತು ಮಾಡಲು ಸಾಧ್ಯವಾಗಿದೆ ಎಂದು ವೇದಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ ಮಾವು ಬೇಕೇ ಮಾವು! ಒಂದೇ ಸೂರಿನಡಿ ಬಗೆಬಗೆಯ ಮಾವಿನ ಹಣ್ಣುಗಳ ಮಾರಾಟ ಹೇಗಿದೆ ನೋಡಿ
ರೈತರಿಗೆ ಮಾರುಕಟ್ಟೆ ವ್ಯವಸ್ಥೆ
ಸದ್ಯ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಮಾವಿನ ಹಣ್ಣುಗಳು ಹೊರ ರಾಜ್ಯಗಳಿಂದ ಬರುತ್ತಿರುವುದರಿಂದ ಅವುಗಳ ಗುಣಮಟ್ಟ ಕಡಿಮೆ ಇದೆ ಮತ್ತು ಬೆಲೆ ಹೆಚ್ಚಿದೆ. ಕೋಲಾರ ಮತ್ತು ರಾಮನಗರದ ಮಾವುಗಳು ಕ್ರಮವಾಗಿ ಮೇ 8 ಮತ್ತು ಮೇ 27ರ ವೇಳೆಗೆ ಮಾರುಕಟ್ಟೆಗೆ ಬರಲಿವೆ. ರೈತರು ತಾವು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಈ ಮೇಳದ ಮೂಲಕ ಅವರಿಗೆ ನೇರ ಮಾರುಕಟ್ಟೆ ಒದಗಿಸಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ