ಸ್ಯಾಂಡಲ್ವುಡ್ ಇತಿಹಾಸದಲ್ಲಿ ಹೊಸ ಹೊಸ ದಾಖಲೆ ಬರೆದ ರಾಕಿಂಗ್ ಸ್ಟಾರ್ ಯಶ್ ಸದ್ಯ ‘ಟಾಕ್ಸಿಕ್’ ಹಾಗೂ ‘ರಾಮಾಯಣ’ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬೆನ್ನಲ್ಲೇ ಅವರ ಮುಂದಿನ ಬಹುನಿರೀಕ್ಷಿತ ಚಿತ್ರದ ಬಗ್ಗೆ ಅತ್ಯಂತ ಕುತೂಹಲಕಾರಿ ಮಾಹಿತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಜನಪ್ರಿಯ ಸಿನಿಮಾ ಡೇಟಾಬೇಸ್ ಜಾಲತಾಣವಾದ ಐಎಂಡಿಬಿ ಪುಟವೊಂದರಲ್ಲಿ ಯಶ್ ಅವರ ಮುಂಬರುವ ಚಿತ್ರದ ಕಥಾಹಂದರ ಹಾಗೂ ತಾರಾಗಣದ ವಿವರಗಳು ಲೀಕ್ ಆಗಿದ್ದು, ಪ್ರೇಕ್ಷಕರಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಐಎಂಡಿಬಿಯಲ್ಲಿ ಲೀಕ್ ಆದ ಕಥೆ ಏನು?
ಲೀಕ್ ಆಗಿರುವ ಮಾಹಿತಿಯ ಪ್ರಕಾರ, ಯಶ್ ಅವರ ಮುಂದಿನ ಚಿತ್ರವು ಪಕ್ಕಾ ಆ್ಯಕ್ಷನ್ ಹಾಗೂ ಎಮೋಷನಲ್ ಕಥಾಹಂದರವನ್ನು ಹೊಂದಿರಲಿದೆಯಂತೆ. ಐಎಂಡಿಬಿಯಲ್ಲಿ ಚಿತ್ರದ ಕಥೆಯ ಬಗ್ಗೆಯೂ ಬರೆಯಲಾಗಿದೆ. ‘ವೈಯಕ್ತಿಕ ಕಾರಣಗಳಿಂದಾಗಿ ಭಾರತೀಯ ಸೇನೆಯನ್ನು ತೊರೆಯುವ ಮಿಲಿಟರಿ ಅಧಿಕಾರಿ, ನಂತರ ಸ್ಥಳೀಯ ಪೊಲೀಸ್ ಪಡೆಗೆ ಸೇರಲು ನಿರ್ಧರಿಸುತ್ತಾನೆ. ತನ್ನ ಜೀವನದ ಯಾವುದೇ ಸವಾಲುಗಳಲ್ಲೂ ಸೋಲನ್ನೇ ಕಾಣದ ಒಬ್ಬ ‘ಕ್ರೇಜಿ ಮತ್ತು ಮ್ಯಾಡ್ ಪೊಲೀಸ್’ ಅಧಿಕಾರಿಯ ಕಥೆಯೇ ಚಿತ್ರದ ಹೈಲೈಟ್ ಎಂದು ಬರೆಯಲಾಗಿದೆ.
ನರ್ತನ್ ನಿರ್ದೇಶನ; ತೃಪ್ತಿ ದಿಮ್ರಿ ನಾಯಕಿ?
ಈ ಚಿತ್ರಕ್ಕೆ ‘ಮಫ್ತಿ’ ಖ್ಯಾತಿಯ ಭರವಸೆಯ ನಿರ್ದೇಶಕ ನರ್ತನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಹಾಗೂ ಸದ್ಯ ಬಾಲಿವುಡ್ನ ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ತೃಪ್ತಿ ದಿಮ್ರಿ ಯಶ್ ಅವರಿಗೆ ನಾಯಕಿಯಾಗಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಇದು ನಿಜವೇ? ಮೂಡಿದೆ ಪ್ರಶ್ನೆ
‘ಟಾಕ್ಸಿಕ್’ ಸಿನಿಮಾ ಅಧಿಕೃತವಾಗಿ ಸೆಟ್ಟೇರುವುದಕ್ಕೂ ಮೊದಲು, ಯಶ್ ಮತ್ತು ನಿರ್ದೇಶಕ ನರ್ತನ್ ಜೋಡಿ ಹೊಸ ಸಿನಿಮಾ ಮಾಡಬೇಕಿತ್ತು ಎನ್ನುವುದು ಗಾಂಧಿನಗರದ ಹಳೆಯ ಸತ್ಯ. ಆದರೆ, ಕಾರಣಾಂತರಗಳಿಂದಾಗಿ ಆ ಪ್ರಾಜೆಕ್ಟ್ ಮುಂದೂಡಲ್ಪಟ್ಟು, ಯಶ್ ‘ಟಾಕ್ಸಿಕ್’ ಚಿತ್ರವನ್ನು ಕೈಗೆತ್ತಿಕೊಂಡಿದ್ದರು. ಈಗ ಐಎಂಡಿಬಿಯಲ್ಲಿ ಕಾಣಿಸಿಕೊಂಡಿರುವ ಈ ಲೈನ್ ನೋಡಿ, ‘ನರ್ತನ್ ಮತ್ತು ಯಶ್ ಸಿನಿಮಾ ಈಗ ಮತ್ತೆ ಸೆಟ್ಟೇರುತ್ತಿದೆಯೇ?’ ಅಥವಾ ಇದು ಕೇವಲ ವದಂತಿಯೇ ಎನ್ನುವ ಪ್ರಶ್ನೆ ಮತ್ತು ಕುತೂಹಲ ಅಭಿಮಾನಿಗಳಲ್ಲಿ ದಟ್ಟವಾಗಿದೆ. ಕೆಲವರು ಐಎಂಡಿಬಿ ಪೇಜ್ನ ಫೇಕ್ ಆಗಿ ಎಡಿಟ್ ಮಾಡಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.