ಅಹಮದಾಬಾದ್,ಜುಲೈ 22: ಮುಸ್ಲಿಂ ವ್ಯಕ್ತಿಯನ್ನು ಮದುವೆ(Marriage)ಯಾದ ನಂತರ ಬದಲಿಸಿಕೊಂಡಿದ್ದ ಹೆಸರು ಈಗ ನನಗೆ ಬೇಡ ಎಂದು ಹೇಳುತ್ತಾ 66 ವರ್ಷದ ಮಹಿಳೆಯೊಬ್ಬರು ಹೈಕೋರ್ಟ್ ಮೆಟ್ಟಿಲೇರಿರುವ ಘಟನೆ ಗುಜರಾತ್ನ ವಡೋದರಾದಲ್ಲಿ ನಡೆದಿದೆ. ಮುಸ್ಲಿಂ ಹೆಸರಿನಿಂದಾಗಿ ವಡೋದರಾದಲ್ಲಿ ಮನೆ ಬಾಡಿಗೆಗೆ ಅಥವಾ ಖರೀದಿಸಲು ತೀವ್ರ ತೊಂದರೆ ಎದುರಿಸುತ್ತಿರುವ 66 ವರ್ಷದ ನಿವೃತ್ತ ಕೇಂದ್ರ ಸರ್ಕಾರಿ ಉದ್ಯೋಗಿಯೊಬ್ಬರು, ತಮ್ಮ ಹಳೆಯ ಕ್ರಿಶ್ಚಿಯನ್ ಹೆಸರನ್ನು ಮರಳಿ ಪಡೆಯಲು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಿರ್ಜರ್ ದೇಸಾಯಿ ಅವರಿದ್ದ ಹೈಕೋರ್ಟ್ ಪೀಠವು, ಹೆಸರು ಬದಲಾವಣೆಯ ವಿನಂತಿಯನ್ನು ಅಧಿಕೃತ ಸರ್ಕಾರಿ ಗೆಜೆಟ್‌ನಲ್ಲಿ ಪ್ರಕಟಿಸಲು ನಿರಾಕರಿಸಿದ್ದಕ್ಕೆ ರಾಜ್ಯ ಸರ್ಕಾರ ಹಾಗೂ ಸರ್ಕಾರಿ ಮುದ್ರಣಾಲಯ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿದ್ದು, ಆಗಸ್ಟ್ 27 ರೊಳಗೆ ಉತ್ತರ ನೀಡುವಂತೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ ಏನು?
ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದ್ದ ಈ ಮಹಿಳೆ, ಮುಸ್ಲಿಂ ವ್ಯಕ್ತಿಯೊಬ್ಬರನ್ನು ವಿವಾಹವಾದ ನಂತರ ಮುಸ್ಲಿಂ ಧರ್ಮದ ಹೆಸರು ಹಾಗೂ ಉಪನಾಮವನ್ನು ಅಳವಡಿಸಿಕೊಂಡಿದ್ದರು. 2021 ರಲ್ಲಿ ಆಕೆಯ ಪತಿ ನಿಧನರಾದರು. ಪತಿಯ ನಿಧನದ ನಂತರ ಆಕೆ ಅತ್ತೆಯ ಮನೆಯನ್ನು ತೊರೆದು, ತಮ್ಮ ಹುಟ್ಟೂರಿನ ಪೋಷಕರು ಮತ್ತು ಹಳೆಯ ಕ್ರಿಶ್ಚಿಯನ್ ಕುಟುಂಬದ ಸಂಬಂಧಿಕರೊಂದಿಗೆ ಮತ್ತೆ ಒಂದಾಗಲು ನಿರ್ಧರಿಸಿದರು.
ಮತ್ತಷ್ಟು ಓದಿ: ಬೆಚ್ಚಿಬಿದ್ದ ಬಳ್ಳಾರಿ: ವಿಚ್ಛೇದಿತ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತನ ಬರ್ಬರ ಕೊಲೆ
ವಡೋದರಾದ ಮುಸ್ಲಿಮೇತರ ಪ್ರದೇಶಗಳಲ್ಲಿ ಮನೆ ಹುಡುಕಲು ಹೊರಟಾಗ, ಆಕೆಯ ‘ಮುಸ್ಲಿಂ ಹೆಸರು’ ದೊಡ್ಡ ಅಡ್ಡಿಯಾಗಿ ಪರಿಣಮಿಸಿತು. ಇದರಿಂದಾಗಿ ಆಕೆಗೆ ಎಲ್ಲೂ ಮನೆ ಸಿಗದ ವಾತಾವರಣ ನಿರ್ಮಾಣವಾಯಿತು. ತನ್ನ ಮೊದಲ ಕ್ರಿಶ್ಚಿಯನ್ ಹೆಸರನ್ನು ಮರಳಿ ಪಡೆಯಲು ಆಕೆ ಸರ್ಕಾರಿ ಗೆಜೆಟ್‌ಗೆ ಅರ್ಜಿ ಸಲ್ಲಿಸಿದ್ದರು.
ನಿಮ್ಮ ಬಳಿ ಅಧಿಕೃತ ವಿಚ್ಛೇದನ ಪತ್ರವಿಲ್ಲದಿರುವುದರಿಂದ ಪತಿಯ ಉಪನಾಮವನ್ನು ತೆಗೆದು, ತಂದೆಯ ಹೆಸರು ಹಾಗೂ ಹಳೆಯ ಉಪನಾಮವನ್ನು ಸೇರಿಸಲು ಸಾಧ್ಯವಿಲ್ಲ ಎಂದು ಹೇಳಿ ಅರ್ಜಿಯನ್ನು ತಿರಸ್ಕರಿಸಿದ್ದರು. ಇದರಿಂದ ಕಂಗಾಲಾದ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದರು.
ಹೈಕೋರ್ಟ್‌ನಲ್ಲಿ ಮಹಿಳೆಯ ವಾದವೇನು?
ಮಹಿಳೆಯ ಪರ ವಕೀಲ ರುಷಭ್ ಷಾ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್‌ನಲ್ಲಿ ಪ್ರಮುಖ ವಿಷಯಗಳನ್ನು ಸ್ಪಷ್ಟಪಡಿಸಲಾಗಿದೆ, ಹೆಸರು ಬದಲಾವಣೆಯು ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮಾಡುತ್ತಿಲ್ಲ, ಬದಲಿಗೆ ಕೇವಲ ಸಾಮಾಜಿಕ ಪರಿಸ್ಥಿತಿಗಳಿಂದಾಗಿ ಮಾಡಲಾಗುತ್ತಿದೆ.
ಪತಿಯ ಮನೆಯನ್ನು ತೊರೆದಿರುವುದರಿಂದ ಆತನ ಆಸ್ತಿಯ ಮೇಲಿನ ಎಲ್ಲಾ ಹಕ್ಕುಗಳನ್ನು ಮಹಿಳೆ ಈಗಾಗಲೇ ಸಂಪೂರ್ಣವಾಗಿ ಬಿಟ್ಟುಕೊಟ್ಟಿದ್ದಾರೆ. ವಡೋದರಾದ ಮುಸ್ಲಿಮೇತರ ಪ್ರದೇಶಗಳಲ್ಲಿ ವಸತಿ ಪಡೆಯಲು ಹೆಸರು ಅಡ್ಡಿಯಾಗುತ್ತಿರುವುದರಿಂದ, ಪ್ರಜೆಯಾಗಿ ಸ್ವತಂತ್ರವಾಗಿ ಜೀವಿಸಲು ಹಳೆಯ ಹೆಸರು ಮರಳಿ ಪಡೆಯುವುದು ಅತ್ಯಗತ್ಯವಾಗಿದೆ. ಪ್ರಸ್ತುತ ನ್ಯಾಯಾಲಯವು ಅರ್ಜಿದಾರರ ಮನವಿಯನ್ನು ಸಾಮಾಜಿಕ ಸ್ವರೂಪದ್ದು ಎಂದು ಪರಿಗಣಿಸಿದ್ದು, ಆಗಸ್ಟ್ 27 ರಂದು ಸರ್ಕಾರ ನೀಡುವ ಉತ್ತರದ ಆಧಾರದ ಮೇಲೆ ಮುಂದಿನ ತೀರ್ಪು ಹೊರಬೀಳಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 10:32 am, Wed, 22 July 26