Headlines

ಮೆಟ್ರೋಗೆ ಮೂರು ವರ್ಷದಲ್ಲಿ ₹1,614 ಕೋಟಿ ನಷ್ಟ: ಮತ್ತೆ ಟಿಕೆಟ್ ದರ ಏರಿಕೆಗೆ ಬಿಎಂಆರ್‌ಸಿಎಲ್ ಕಸರತ್ತು – Kannada News | BMRCL Reports Rs 1614 Crore Loss in 3 Years, Proposes 12 percent Metro Fare Hike Every Three Years

ಬೆಂಗಳೂರು, ಜುಲೈ 29: ಬೆಂಗಳೂರಿನ (Bengaluru) ನಮ್ಮ ಮೆಟ್ರೋದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಬಿಎಂಆರ್‌ಸಿಎಲ್‌ಗೆ (BMRCL) ನಷ್ಟದ ಪ್ರಮಾಣವೂ ಏರಿಕೆಯಾಗುತ್ತಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಒಟ್ಟು 1,614 ಕೋಟಿ ರೂ. ನಷ್ಟ ದಾಖಲಾಗಿದ್ದು, ಇದೇ ಕಾರಣವನ್ನು ಮುಂದಿಟ್ಟುಕೊಂಡು ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 12 ರ ಟಿಕೆಟ್ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಪ್ರಸ್ತಾವನೆ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ.

ನಗರದ ಪರ್ಪಲ್, ಗ್ರೀನ್ ಹಾಗೂ ಯೆಲ್ಲೋ ಮಾರ್ಗಗಳಲ್ಲಿ ಪ್ರಸ್ತುತ ಪ್ರತಿದಿನ 11 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಸೇವೆ ಬಳಸುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆದಾಯದಲ್ಲೂ ಏರಿಕೆ ಕಂಡುಬಂದಿದ್ದರೂ, ಕಾರ್ಯಾಚರಣೆ ಮತ್ತು ಇತರೆ ವೆಚ್ಚಗಳ ಕಾರಣದಿಂದ ನಿಗಮ ನಿರಂತರ ನಷ್ಟ ಅನುಭವಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ನಷ್ಟದ ಲೆಕ್ಕಾಚಾರವನ್ನು ಬಿಎಂಆರ್‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ್ ಚೌವ್ಹಾಣ್ ಬಹಿರಂಗಪಡಿಸಿದ್ದಾರೆ. ಆ ವಿವರಗಳು ಇಲ್ಲಿವೆ;

ನಮ್ಮ ಮೆಟ್ರೋ ಮೂರು ವರ್ಷದ ಆದಾಯ-ವೆಚ್ಚದ ಲೆಕ್ಕ

2022-23 ಹಣಕಾಸು ವರ್ಷ

  • ಪ್ರಯಾಣಿಕರು: 17.72 ಕೋಟಿ
  • ಆದಾಯ: 784 ಕೋಟಿ ರೂ.
  • ವೆಚ್ಚ: 1,363 ಕೋಟಿ ರೂ.
  • ನಷ್ಟ: 641 ಕೋಟಿ ರೂ.

ಈ ವರ್ಷ ಮೆಟ್ರೋ ಸೇವೆ ಬಳಸಿದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಆದಾಯ ಹೆಚ್ಚಾದರೂ, ವೆಚ್ಚವು ಆದಾಯಕ್ಕಿಂತ ಹೆಚ್ಚಿದ್ದರಿಂದ ನಿಗಮವು 641 ಕೋಟಿ ರೂ. ನಷ್ಟ ದಾಖಲಿಸಿದೆ.

2023-24 ಹಣಕಾಸು ವರ್ಷ

  • ಪ್ರಯಾಣಿಕರು: 23.28 ಕೋಟಿ
  • ಆದಾಯ: 990 ಕೋಟಿ ರೂ.
  • ವೆಚ್ಚ: 1,213 ಕೋಟಿ ರೂ.
  • ನಷ್ಟ: 350 ಕೋಟಿ ರೂ.

ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡರೂ, ಕಾರ್ಯಾಚರಣೆ ವೆಚ್ಚದ ಕಾರಣ ನಷ್ಟ ಮುಂದುವರಿದಿದೆ.

2024-25 ಹಣಕಾಸು ವರ್ಷ

  • ಪ್ರಯಾಣಿಕರು: 27.65 ಕೋಟಿ
  • ಆದಾಯ: 1,190 ಕೋಟಿ ರೂ.
  • ವೆಚ್ಚ: 1,935 ಕೋಟಿ ರೂ.
  • ನಷ್ಟ: 623 ಕೋಟಿ ರೂ.

ಮತ್ತೆ ಟಿಕೆಟ್ ದರ ಏರಿಕೆಗೆ ಪ್ರಸ್ತಾವನೆ

ಬಿಎಂಆರ್‌ಸಿಎಲ್ ಈಗಾಗಲೇ 2025ರ ಫೆಬ್ರವರಿ 9ರಂದು ಶೇ 71 ರಷ್ಟು ಟಿಕೆಟ್ ದರ ಹೆಚ್ಚಳ ಮಾಡಿತ್ತು. ಬಳಿಕ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ಮಟ್ಟಿಗೆ ದರವನ್ನು ಇಳಿಸಿತ್ತು.

ಅದರ ನಂತರ ಪ್ರತಿ ವರ್ಷ ಫೆಬ್ರವರಿ 9ರಂದು ಶೇ 5 ರ ವಾರ್ಷಿಕ ದರ ಹೆಚ್ಚಳ ಮಾಡುವ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ ಎನ್ನಲಾಗಿದೆ. ಇದೀಗ ಬಿಎಂಆರ್‌ಸಿಎಲ್ ಹೊಸದಾಗಿ ಪ್ರತಿ ಮೂರು ವರ್ಷಕ್ಕೊಮ್ಮೆ ಶೇ 12 ಟಿಕೆಟ್ ದರ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.

ನಷ್ಟದ ಲೆಕ್ಕ ಮುಂದಿಟ್ಟು ಬಿಎಂಆರ್‌ಸಿಎಲ್‌ ಮನವಿ

ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,614 ಕೋಟಿ ರೂ. ನಷ್ಟ ಉಂಟಾಗಿದೆ ಎಂಬ ಅಂಕಿ-ಅಂಶವನ್ನು ದರ ನಿಗದಿ ಸಮಿತಿಯ ಮುಂದೆ ಬಿಎಂಆರ್‌ಸಿಎಲ್ ಮಂಡಿಸಿದೆ. ಮೂರು ವರ್ಷಕ್ಕೊಮ್ಮೆ ಟಿಕೆಟ್ ದರ ಪರಿಷ್ಕರಣೆ ಮಾಡದಿದ್ದರೆ ನಿಗಮವು ಸಾಲದ ಸುಳಿಯಲ್ಲಿ ಇನ್ನಷ್ಟು ಸಿಲುಕುವ ಸಾಧ್ಯತೆ ಇದೆ ಎಂದು ಮನವಿ ಮಾಡಿರುವುದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಮತ್ತೆ ಮುನ್ನೆಲೆಗೆ: 3 ವರ್ಷಕ್ಕೊಮ್ಮೆ ದರ ಏರಿಕೆಗೆ ಪ್ಲ್ಯಾನ್!

ಇತರೆ ತೆರಿಗೆಗಳು ಹಾಗೂ ಕಾರ್ಯಾಚರಣೆ ವೆಚ್ಚಗಳ ಕಾರಣದಿಂದ ನಿಗಮ ನಷ್ಟದಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದರೆ, ಮತ್ತೊಂದೆಡೆ ಮತ್ತೆ ದರ ಏರಿಕೆ ಮಾಡುವ ಪ್ರಸ್ತಾವನೆಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡುತ್ತವೆಯೇ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *