
ಬೆಂಗಳೂರು, ಮಾರ್ಚ್ 09: ನಮ್ಮ ಮೆಟ್ರೋದಲ್ಲಿ (Namma Metro) ಆಟಿಕೆ ಗನ್ ಬಳಸಿ ಪ್ರಾಂಕ್ ವಿಡಿಯೋ ಮಾಡಲು ಯತ್ನಿಸಿದ್ದ ಯುವಕನನ್ನು ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪಾಂಡಿಚೇರಿ ಮೂಲದ ಅರ್ಜುನ್ ಎಂಬ ಯುವಕ ಈ ಕೃತ್ಯ ನಡೆಸಿರುವುದು ತಿಳಿದುಬಂದಿದೆ.
ಸೋಶಿಯಲ್ ಮೀಡಿಯಾ ಹುಚ್ಚಿಗೆ ದಂಡ ಕಟ್ಟಿದ ಆಸಾಮಿ
ಫೆಬ್ರವರಿ 6ರಂದು ಅರ್ಜುನ್ ದೀಪಾಂಜಲಿ ನಗರ ಮೆಟ್ರೋ ನಿಲ್ದಾಣದಿಂದ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಾಮಾಜಿಕ ಜಾಲತಾಣಕ್ಕಾಗಿ ಪ್ರಾಂಕ್ ವಿಡಿಯೋ ಮಾಡುವ ಉದ್ದೇಶದಿಂದ ತನ್ನ ಜೇಬಿನಲ್ಲಿ ಆಟಿಕೆಯ ಗನ್ ಇಟ್ಟುಕೊಂಡಿದ್ದನು. ಪ್ರಯಾಣದ ವೇಳೆ ಅವನ ಜೇಬಿನಲ್ಲಿ ಗನ್ ಇರುವುದನ್ನು ಗಮನಿಸಿದ ಸಹ ಪ್ರಯಾಣಿಕರು ಆತಂಕಗೊಂಡು ತಕ್ಷಣ ಮೆಟ್ರೋ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಮೆಟ್ರೋ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರು ಅರ್ಜುನ್ನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಅದು ನಕಲಿ ಆಟಿಕೆಯ ಗನ್ ಆಗಿದ್ದು, ಕೇವಲ ಪ್ರಾಂಕ್ ವಿಡಿಯೋ ಮಾಡಲು ಇಟ್ಟುಕೊಂಡಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ.ನಂತರ ಪೊಲೀಸರು ಆತನಿಂದ ಕ್ಷಮಾಪಣಾ ಪತ್ರ ಬರೆಸಿಕೊಂಡು ಕಠಿಣ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅರ್ಜುನ್ ಮೇಲೆ 400 ರೂಪಾಯಿ ದಂಡ ವಿಧಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.