Headlines

ಮೆಟ್ರೋ ಸ್ಟೇಷನ್​ಗಳಲ್ಲಿ ಆತ್ಮಹತ್ಯೆ ಕೇಸ್ ಹೆಚ್ಚಳ ಹಿನ್ನೆಲೆ BMRCL ವಿನೂತನ ಕ್ರಮ! – Kannada News | BMRCL Partners with NIMHANS to Launch Tele MANAS Mental Health Helpline Boards at Bengaluru Metro Stations

ನಮ್ಮ ಮೆಟ್ರೋ ನಿಲ್ದಾಣ (ಸಾಂದರ್ಭಿಕ ಚಿತ್ರ)Image Credit source: PTI

ಬೆಂಗಳೂರು, ಜೂನ್ 26: ಸಿಲಿಕಾನ್ ಸಿಟಿ ಬೆಂಗಳೂರಿನ ಸಾರ್ವಜನಿಕ ಸಾರಿಗೆಯ ಜೀವನಾಡಿಯಾಗಿರುವ ‘ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹಳಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗುವ ಘಟನೆಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಅಮೂಲ್ಯ ಜೀವಗಳು ನಷ್ಟವಾಗುವುದರ ಜೊತೆಗೆ ಮೆಟ್ರೋ ಸಂಚಾರದಲ್ಲೂ ಗಂಟೆಗಟ್ಟಲೆ ವ್ಯತ್ಯಯ ಉಂಟಾಗಿ ನಿತ್ಯ ಪ್ರಯಾಣಿಕರು ತೀವ್ರ ಪರದಾಡುವಂತಾಗುತ್ತದೆ. ಈ ಗಂಭೀರ ಸಮಸ್ಯೆಗೆ ಕಡಿವಾಣ ಹಾಕಲು ಮುಂದಾಗಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL), ಮೆಟ್ರೋ ನಿಲ್ದಾಣಗಳನ್ನು ಸುರಕ್ಷಿತವಾಗಿಸಲು ಮತ್ತು ಜನರ ಮನಸ್ಥಿತಿಯನ್ನು ಬದಲಾಯಿಸಲು ನಿಮ್ಹಾನ್ಸ್ (NIMHANS) ಸಂಸ್ಥೆಯೊಂದಿಗೆ ಕೈಜೋಡಿಸಿ ವಿಶೇಷ ಜಾಗೃತಿ ಅಭಿಯಾನವನ್ನು ಆರಂಭಿಸಿದೆ.

‘ಯೋಚನೆ ಬೇಡ, ಚಿಂತೆ ಬಿಡಿ, ಮಾತ್ನಾಡಿ’: ಮೆಟ್ರೋ ಹಳಿಗಳ ಬಳಿ ಬೋರ್ಡ್

ಕಳೆದ ಎರಡು ವರ್ಷಗಳ ಅವಧಿಯಲ್ಲಿ 11ಕ್ಕೂ ಹೆಚ್ಚು ಜನರು ಮೆಟ್ರೋ ಟ್ರ್ಯಾಕ್‌ಗೆ ಜಿಗಿದಿರುವ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಇಂತಹ ದುರ್ಘಟನೆಗಳನ್ನು ತಡೆಯಲು ಮೆಜೆಸ್ಟಿಕ್, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಪ್ರಮುಖ ಮೆಟ್ರೋ ನಿಲ್ದಾಣಗಳ ಹಳಿಗಳ ಪಕ್ಕದಲ್ಲಿಯೇ ಬಿಎಂಆರ್‌ಸಿಎಲ್ ವಿಶೇಷ ಡಿಜಿಟಲ್ ಡಿಸ್ಪ್ಲೇ ಮತ್ತು ಸೈನ್ ಬೋರ್ಡ್‌ಗಳನ್ನು ಅಳವಡಿಸಿದೆ. ಈ ಬೋರ್ಡ್‌ಗಳಲ್ಲಿ ‘‘ಯೋಚನೆ ಬೇಡ, ಚಿಂತೆ ಬಿಡಿ, ಮಾತ್ನಾಡಿ’’ ಹಾಗೂ ‘‘ದಣಿವಾಗೋದು ಸಹಜ, ಸಹಾಯ ಕೇಳೋದು ಸಹಜ’’ ಎಂಬ ಸಾಲುಗಳನ್ನು ಬರೆಯಲಾಗಿದ್ದು, ಕಷ್ಟದಲ್ಲಿ ಇರುವವರಿಗೆ ಮಾನಸಿಕ ಧೈರ್ಯ ತುಂಬುವ ಪ್ರಯತ್ನ ಮಾಡಲಾಗುತ್ತಿದೆ.

‘ಟೆಲಿಮನಸ್’ ಯೋಜನೆಯಡಿ ಆಪ್ತ ಸಮಾಲೋಚನೆ

ನಿಮ್ಹಾನ್ಸ್ ಸಂಸ್ಥೆಯ ಆರ್ಥಿಕ ಮತ್ತು ತಾಂತ್ರಿಕ ಸಹಯೋಗದೊಂದಿಗೆ ಟೆಲಿಮನಸ್ (Tele-MANAS) ಕಾರ್ಯಕ್ರಮದ ಅಡಿಯಲ್ಲಿ ಈ ಜಾಗೃತಿ ಮೂಡಿಸಲಾಗುತ್ತಿದೆ. ನಿಲ್ದಾಣಗಳ ಪ್ರಮುಖ ಸ್ಥಳಗಳಲ್ಲಿ ಕಾಲ್ ಸೆಂಟರ್ ಸಹಾಯವಾಣಿ ಸಂಖ್ಯೆಗಳನ್ನು ಡಿಸ್ಪ್ಲೇ ಮಾಡಲಾಗಿದೆ. ಯಾವುದೇ ವ್ಯಕ್ತಿ ಮಾನಸಿಕ ಒತ್ತಡದಲ್ಲಿದ್ದರೆ ಅಥವಾ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಆಲೋಚನೆ ಬರುತ್ತಿದ್ದರೆ, ತಕ್ಷಣವೇ ಈ ಸಂಖ್ಯೆಗಳಿಗೆ ಕರೆ ಮಾಡಿ ತಜ್ಞರಿಂದ ಉಚಿತ ಆಪ್ತ ಸಮಾಲೋಚನೆ ಹಾಗೂ ಸಹಾಯ ಪಡೆಯುವಂತೆ ಮನವಿ ಮಾಡಲಾಗಿದೆ.

ಮೆಟ್ರೋದಲ್ಲಿ ಹೆಚ್ಚಿದ ಸಮಸ್ಯೆ

ನಮ್ಮ ಮೆಟ್ರೋ ಟ್ರ್ಯಾಕ್​ಗೆ ಜಿಗಿದು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿದೆ. ಕಳೆದ 2 ವರ್ಷಗಳ ಅವಧಿಯಲ್ಲಿ ಕನಿಷ್ಠ 3 ಮಂದಿ ಮೃತಪಟ್ಟಿದ್ದು, 5ಕ್ಕೂ ಹೆಚ್ಚು ಆತ್ಮಹತ್ಯೆ ಯತ್ನ ನಡೆದಿವೆ.

ಇದನ್ನೂ ಓದಿ: ಮತ್ತೆ ಕೈಕೊಟ್ಟ ನಮ್ಮ ಮೆಟ್ರೋ: ಬಾಗಿಲು ಲಾಕ್ ಆಗದೇ ನಿಂತಲ್ಲೇ ನಿಂತ ರೈಲು

ಒಟ್ಟಿನಲ್ಲಿ, ಟ್ರಾಫಿಕ್ ಕಿರಿಕಿರಿ ಇಲ್ಲದೆ ನಿಶ್ಚಿಂತೆಯಿಂದ ಪ್ರಯಾಣಿಸಲು ಜನ ಆಶ್ರಯಿಸುವ ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಗಾಗಿ ಬಿಎಂಆರ್‌ಸಿಎಲ್ ಕೈಗೊಂಡಿರುವ ಈ ಜನಪರ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ಸವಾರರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:36 am, Fri, 26 June 26

Source link

Leave a Reply

Your email address will not be published. Required fields are marked *