ಡಿ.ಎನ್. ಜೀವರಾಜ್ ಮತ್ತು ಟಿ.ಡಿ. ರಾಜೇಗೌಡ
ಚಿಕ್ಕಮಗಳೂರು, ಏಪ್ರಿಲ್ 26: ಕರ್ನಾಟಕ ಹೈಕೋರ್ಟ್ ನಿರ್ದೇಶನದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಮೇ 2ರಂದು ಐಡಿಎಸ್ಜಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ನಡೆಯಲಿದೆ. ಮರುಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಎಡಿಸಿ ಗೌರವ್ ಶೆಟ್ಟಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ನಾಲ್ವರು ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಬೆಳಗ್ಗೆ 8 ಗಂಟೆಗೆ ಮರುಎಣಿಕೆ ಪ್ರಾರಂಭವಾಗಲಿದೆ.
201 ಮತಗಳ ಅಂತರದಲ್ಲಿ ಸೋತಿದ್ದ ಜೀವರಾಜ್
2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 201 ಮತಗಳ ಅಂತರದಿಂದ ಸೋತಿದ್ದರು. ಒಟ್ಟು 2,811 ಅಂಚೆ ಮತಗಳಲ್ಲಿ 279 ಮತಗಳು ತಿರಸ್ಕೃತವಾಗಿದ್ದವು. ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಮರುಎಣಿಕೆಗೆ ಮನವಿ ಮಾಡಿದ್ದರಾದರೂ, ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಟಿ.ಡಿ. ರಾಜೇಗೌಡರನ್ನು ವಿಜೇತರಾಗಿ ಘೋಷಿಸಿದ್ದರು. ಇದರಿಂದ ಅಸಮಾಧಾನಗೊಂಡ ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದು, ಕೋರ್ಟ್ ಆದೇಶದಂತೆ ಇದೀಗ ಅಂಚೆ ಮತಗಳ ಮರುಎಣಿಕೆಗೆ ಸಿದ್ಧತೆ ನಡೆಸಲಾಗ್ತಿದೆ.
ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ
ಶೃಂಗೇರಿ ಶಾಸಕರಾಗಿ ಟಿ.ಡಿ.ರಾಜೇಗೌಡ ಆಯ್ಕೆ ಅಸಿಂಧು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಹೈಕೋರ್ಟ್ ಪೀಠ, 279 ಅಂಚೆ ಮತಪತ್ರಗಳ ಮರುಪರಿಶೀಲನೆಗೆ ಆದೇಶ ಹೊರಡಿಸಿತ್ತು. ಅಲ್ಲದೆ 2 ವಾರಗಳಲ್ಲಿ ಮರುಪರಿಶೀಲನೆ ನಡೆಸಿ ಫಲಿತಾಂಶ ಪ್ರಕಟಿಸಲು ನಿರ್ದೇಶನ ನೀಡಿತ್ತು. ಇನ್ನು ಮತ ಮರುಎಣಿಕೆ ವೇಳೆ ಏಜೆಂಟ್ಗಳು, ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಹಾಗೂ ಸೋತ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಜರಾಗುವ ನಿರೀಕ್ಷೆಯಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.