ಮೈಸೂರು ದಸರಾ ಅಂಬಾರಿ ಆನೆ ಅಭಿಮನ್ಯುವಿಗೆ ದಂತಭಗ್ನ
ಮೈಸೂರು, ಜುಲೈ 05: ವಿಶ್ವವಿಖ್ಯಾತ ಮೈಸೂರು ದಸರಾ (Dasara) ಜಂಬೂ ಸವಾರಿಯಲ್ಲಿ ಸತತವಾಗಿ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆಯ ನಾಯಕ, 59 ವರ್ಷದ ‘ಅಭಿಮನ್ಯು’ ಆನೆಯ ಎಡಭಾಗದ ದಂತ ಮುರಿತಕ್ಕೊಳಗಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಮತ್ತಿಗೋಡು ಆನೆ ಶಿಬಿರದಲ್ಲಿ ಮರದ ದಿಮ್ಮಿಗಳನ್ನು ಸ್ಥಳಾಂತರಿಸುವ ಕಾರ್ಯಚರಣೆ ನಡೆಸುವಾಗ ಈ ಅಚಾತುರ್ಯ ಸಂಭವಿಸಿದೆ.
ಶಿಬಿರದಲ್ಲಿ ನಿಯಮಿತ ಕೆಲಸದ ಭಾಗವಾಗಿ ಭಾರೀ ಗಾತ್ರದ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದಾಗ, ದಿಮ್ಮಿಗಳು ಆಕಸ್ಮಿಕವಾಗಿ ವಾಲಿಕೊಂಡಿವೆ. ಈ ವೇಳೆ ಭಾರವನ್ನು ತಡೆಯಲಾಗದೇ, ಮರದ ದಿಮ್ಮಿಗೆ ಬಡಿದು ಅಭಿಮನ್ಯುವಿನ ಎಡಭಾಗದ ದಂತದ ಮುಂದಿನ ತುದಿ ಭಾಗವು ಅರ್ಧಕ್ಕೆ ಕಟ್ ಆಗಿದೆ. ಕಾಡಾನೆ ಹಾಗೂ ಹುಲಿ ಕಾರ್ಯಾಚರಣೆಗಳಲ್ಲಿ ಎದುರಾಳಿ ಪ್ರಾಣಿಗಳನ್ನು ಮಟ್ಟಹಾಕಲು ಅಭಿಮನ್ಯುವಿಗೆ ಈ ದಂತವೇ ಪ್ರಮುಖ ಶಕ್ತಿಯಾಗಿತ್ತು.
ಆನೆ ಸಂಪೂರ್ಣ ಆರೋಗ್ಯವಾಗಿದೆ
ದಂತ ಮುರಿತಕ್ಕೊಳಗಾದ ತಕ್ಷಣವೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಭಿಮನ್ಯುವಿಗೆ ಯಾವುದೇ ರೀತಿಯ ಗಂಭೀರ ಗಾಯಗಳಾಗಿಲ್ಲ ಮತ್ತು ಆನೆ ಸದ್ಯ ಸಕ್ರಿಯವಾಗಿದ್ದು, ಆರೋಗ್ಯವಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ದಂತದ ತುದಿ ಮುರಿದಿರುವುದರಿಂದ ಅದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದ್ದು, ಮುರಿದ ದಂತವು ಕಾಲಕ್ರಮೇಣ ಮತ್ತೆ ನೈಸರ್ಗಿಕವಾಗಿ ಬೆಳೆಯುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
ದಸರಾ ಅಂಬಾರಿ ಹೊರುತ್ತಾನಾ ಅಭಿಮನ್ಯು?
2020ರಿಂದ ಸತತವಾಗಿ ಯಶಸ್ವಿಯಾಗಿ ಚಿನ್ನದ ಅಂಬಾರಿಯನ್ನು ಹೊರುತ್ತಾ ಬಂದಿರುವ ಅಭಿಮನ್ಯು, ಮುಂಬರುವ 2026ರ ದಸರಾ ಮಹೋತ್ಸವದಲ್ಲೂ ಪಾಲ್ಗೊಳ್ಳಲಿದ್ದಾನೆ. ಸತತ 7ನೇ ಬಾರಿ ಅಂಬಾರಿ ಹೊರಲು ಸಜ್ಜಾಗುತ್ತಿರುವ ಗಜಪಡೆ ನಾಯಕನ ದಸರಾ ಕರ್ತವ್ಯಕ್ಕೆ ಈ ದಂತ ಮುರಿತದಿಂದ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಅರಣ್ಯ ಇಲಾಖೆ ಮೂಲಗಳು ಖಚಿತಪಡಿಸಿವೆ. ಆದರೆ, ಈ ಬಾರಿ ಜಂಬೂ ಸವಾರಿಯಲ್ಲಿ ಅಭಿಮನ್ಯು ಮುರಿದ ದಂತದೊಂದಿಗೆ ಹೊಸ ಲುಕ್ನಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ