Headlines

ಮೋದಿ ಉದ್ಘಾಟನೆಗೂ ಮುನ್ನವೇ ಸೆಮಿಕಂಡಕ್ಟರ್ ಚಿಪ್​ಗಳ ರಫ್ತು ಆರಂಭಿಸಿದ ಮುರುಗಪ್ಪ ಗ್ರೂಪ್ ಕಂಪನಿ – Kannada News | India’s CG Semi begins commercial chip exports ahead of official launch by PM Modi

ಸೆಮಿಕಂಡಕ್ಟರ್ ಚಿಪ್Image Credit source: Getty Images

ಅಹ್ಮದಾಬಾದ್, ಜುಲೈ 2: ಭಾರತದ ಸೆಮಿಕಂಡಕ್ಟರ್ (Semiconductor Chip) ಉತ್ಪಾದನಾ ವಲಯದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿತವಾಗಿದೆ. ಮುರುಗಪ್ಪ ಗ್ರೂಪ್ ಒಡೆತನದ ಸಿಜಿ ಸೆಮಿ (CG Semi) ಸಂಸ್ಥೆಯು ಗುಜರಾತ್‌ನ ಸಾನಂದ್‌ನಲ್ಲಿರುವ ತನ್ನ ಸೆಮಿಕಂಡಕ್ಟರ್ ಘಟಕದಲ್ಲಿ ಮೊದಲ ವಾಣಿಜ್ಯ ಚಿಪ್‌ಗಳ ರಫ್ತನ್ನು (Chips Export) ಅಧಿಕೃತವಾಗಿ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಘಟಕದ ಕಮರ್ಷಿಯಲ್ ಪ್ರೊಡಕ್ಷನ್​ಗೆ ಜುಲೈ 4ರಂದು ಚಾಲನೆ ನೀಡುವ ಮುನ್ನವೇ ಸಂಸ್ಥೆಯು ವಿದೇಶಕ್ಕೆ ಚಿಪ್‌ಗಳ ಮೊದಲ ರವಾನೆಯನ್ನು ಕಳುಹಿಸಿಕೊಟ್ಟಿರುವುದು ವಿಶೇಷ.

ಮಲೇಷ್ಯಾಗೆ ಮೊದಲ ರಫ್ತು

ವರದಿಗಳ ಪ್ರಕಾರ, ಸಾನಂದ್‌ನಲ್ಲಿರುವ ತನ್ನ ಓಸಾಟ್ (OSAT – Outsourced Semiconductor Assembly and Test) ಘಟಕದಲ್ಲಿ ಸಿದ್ಧಪಡಿಸಲಾದ ಕಮರ್ಷಿಯಲ್ ಸೆಮಿಕಂಡಕ್ಟರ್ ಚಿಪ್‌ಗಳ ಮೊದಲ ಬ್ಯಾಚ್ ಅನ್ನು ಜೂನ್ 19 ರಂದೇ ಮಲೇಷ್ಯಾದ ಕೌಲಾಲಂಪುರಕ್ಕೆ ಯಶಸ್ವಿಯಾಗಿ ರಫ್ತು ಮಾಡಿದೆ.

ಜಪಾನ್​ನ ರೆನೆಸಾಸ್ ಎಲೆಕ್ಟ್ರಾನಿಕ್ಸ್​ನ ಗ್ರಾಹಕರಿಗೆ ಈ ಚಿಪ್​ಗಳನ್ನು ಪೂರೈಸಲಾಗುತ್ತಿದೆ. ಈ ಸೆಮಿಕಂಡಕ್ಟರ್ ಘಟಕ ನಿರ್ವಹಣೆಯಲ್ಲಿ ರೆನೆಸಾಸ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಸಿಜಿ ಸೆಮಿಯೊಂದಿಗೆ ಸಹಭಾಗಿತ್ವ ಮತ್ತು ಪ್ರಮುಖ ಪಾಲುದಾರಿಕೆ ಹೊಂದಿದೆ.

ಜಪಾನ್​ನ ಸೆಮಿಕಂಡಕ್ಟರ್ ಸಂಸ್ಥೆಯಾದ ರೆನೆಸಾಸ್ ಎಲೆಕ್ಟ್ರಾನಿಕ್ಸ್ (Renesas Electronics) ಮತ್ತು ಮುರುಗಪ್ಪ ಗ್ರೂಪ್​ನ ಸಿಜಿ ಸೆಮಿ ಸಂಸ್ಥೆಗಳು ಜಂಟಿಯಾಗಿ ಈ ಸೆಮಿಕಂಡಕ್ಟರ್ ಅಸೆಂಬ್ಲಿ ಮತ್ತು ಟೆಸ್ಟ್ ಘಟಕವನ್ನು ನಡೆಸುತ್ತಿವೆ. ಹತ್ತು ತಿಂಗಳ ಹಿಂದಷ್ಟೇ (2025ರ ಆಗಸ್ಟ್) ಈ ಘಟಕ ಆರಂಭವಾಗಿದ್ದು. ಪ್ರಧಾನಿ ಮೋದಿ ಅವರೇ ಖುದ್ದಾಗಿ ಈ ಘಟಕವನ್ನು 2025ರ ಆಗಸ್ಟ್​ನಲ್ಲಿ ಉದ್ಘಾಟಿಸಿದ್ದರು. ಬಹಳ ವೇಗವಾಗಿ ರೂಪುಗೊಂಡು ಈಗ ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿರುವುದು ಗಮನಾರ್ಹ.

ಇದನ್ನೂ ಓದಿ: ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ; 2 ಐಟಿಆರ್​ಗಳನ್ನು ಸಲ್ಲಿಸಬೇಕಾ ಎನ್ನುವ ಗೊಂದಲ ಕೆಲವರಲ್ಲಿ; ಇಲಾಖೆ ಸ್ಪಷ್ಟನೆ ಇದು

ಸಿಜಿ ಸೆಮಿ ಯೋಜನೆ ಮತ್ತು ಬಂಡವಾಳ ಹೂಡಿಕೆ

ಮುರುಗಪ್ಪ ಸಮೂಹದ ಅಂಗಸಂಸ್ಥೆಯಾದ ಸಿಜಿ ಪವರ್ (CG Power), ಜಪಾನ್‌ನ ರೆನೆಸಾಸ್ ಮತ್ತು ಥೈಲ್ಯಾಂಡ್‌ನ ಸ್ಟಾರ್ಸ್ ಮೈಕ್ರೋ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳು ಒಟ್ಟಾಗಿ ಈ ಜಂಟಿ ಉದ್ಯಮವನ್ನು ಮುನ್ನಡೆಸುತ್ತಿವೆ.

ಮುಂದಿನ 5 ವರ್ಷಗಳಲ್ಲಿ ಈ ಯೋಜನೆಗಾಗಿ ಒಟ್ಟು 7,600 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುತ್ತಿದೆ. ಸಾನಂದ್‌ನಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿರುವ G1 ಘಟಕವು ಪ್ರತಿದಿನ ಸುಮಾರು 5 ಲಕ್ಷ ಚಿಪ್‌ಗಳನ್ನು ಅಸೆಂಬ್ಲಿ, ಪ್ಯಾಕೇಜಿಂಗ್ ಮತ್ತು ಟೆಸ್ಟಿಂಗ್ ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ನಿರ್ಮಾಣ ಹಂತದಲ್ಲಿರುವ ದೊಡ್ಡದಾದ G2 ಘಟಕವು 2026ರ ಕೊನೆಯ ವೇಳೆಗೆ ಕಾರ್ಯಾರಂಭ ಮಾಡಲಿದ್ದು, ದಿನಕ್ಕೆ ಬರೋಬ್ಬರಿ 1.45 ಕೋಟಿ ಚಿಪ್‌ಗಳನ್ನು ಉತ್ಪಾದಿಸಲಿದೆ.

ಸದ್ಯ ಮಲೇಷ್ಯಾದ ಕೌಲಾಲಂಪುರಕ್ಕೆ ರಫ್ತಾಗಿರುವ ಸಿಜಿ ಸೆಮಿ ಚಿಪ್​ಗಳು ವಾಹನ, ಕನ್ಸೂಮರ್ ಎಲೆಕ್ಟ್ರಾನಿಕ್ಸ್, 5ಜಿ ತಂತ್ರಜ್ಞಾನ ಮತ್ತು ಐಒಟಿ (IoT- Internet of Things) ಅಪ್ಲಿಕೇಶನ್​ಗಳಿಗೆ ಬಳಕೆಯಾಗಲಿವೆ. ಈ ಘಟಕದಿಂದ ಮುಂಬರುವ ವರ್ಷಗಳಲ್ಲಿ 5,000ಕ್ಕೂ ಅಧಿಕ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ನಿಮ್ಮ ಕುಟುಂಬದವರ ಕಾಲ್ ಡೀಟೇಲ್ಸ್ ತೆಗೆಸಲು ಅವಕಾಶ ಇದೆಯಾ? ಸಿಡಿಆರ್ ರಿಪೋರ್ಟ್ ಯಾರಿಗೆಲ್ಲಾ ಸಿಗುತ್ತೆ?

ಸಾನಂದ್ ಈಗ ಚಿಪ್ ಹಬ್

ಗುಜರಾತ್‌ನ ಸಾನಂದ್ ಕೈಗಾರಿಕಾ ಪ್ರದೇಶವು ಭಾರತದ ಸಿಲಿಕಾನ್ ಹಬ್ ಆಗಿ ಬದಲಾಗುತ್ತಿದೆ. ಮೈಕ್ರಾನ್ ಟೆಕ್ನಾಲಜಿ (Micron), ಕೇನ್ಸ್ ಸೆಮಿಕಾನ್ (Kaynes Semicon) ಮತ್ತು ಸಿಜಿ ಸೆಮಿ (CG Semi) ಸಂಸ್ಥೆಗಳ ಬೃಹತ್ ಘಟಕಗಳು ಇಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಭಾರತವನ್ನು ಸೆಮಿಕಂಡಕ್ಟರ್ ವಲಯದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ವೇಗವಾಗಿ ಹೆಜ್ಜೆ ಇಡುತ್ತಿವೆ.

ಭಾರತದಲ್ಲಿ ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭವಾದ ‘ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ (ISM) ಯೋಜನೆಯು ಇಂದು ಜಾಗತಿಕ ಮಟ್ಟದಲ್ಲಿ ವಾಣಿಜ್ಯ ಚಿಪ್‌ಗಳನ್ನು ರಫ್ತು ಮಾಡುವ ಹಂತಕ್ಕೆ ತಲುಪಿರುವುದು ದೇಶದ ತಾಂತ್ರಿಕ ಸಾರ್ವಭೌಮತ್ವಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:54 pm, Thu, 2 July 26

Source link

Leave a Reply

Your email address will not be published. Required fields are marked *