ಉದ್ಯೋಗಿಗಳ ಸಾಂದರ್ಭಿಕ ಚಿತ್ರImage Credit source: Ezra Bailey/Stone/Getty Images
ನವದೆಹಲಿ, ಜುಲೈ 14: ಭಾರತದ ಆರ್ಥಿಕ ಚಿತ್ರಣವನ್ನು ಹೆಚ್ಚು ನಿಖರವಾಗಿ ತೆರೆದಿಡುವ ನಿಟ್ಟಿನಲ್ಲಿ ಸರ್ಕಾರ ಮತ್ತೊಂದು ಪ್ರಮುಖ ಕ್ರಮ ತೆಗೆದುಕೊಂಡಿದೆ. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಸೇವಾ ವಲಯದ ಉತ್ಪಾದನಾ ಸೂಚ್ಯಂಕವನ್ನು (Index of Services Production – ISP) ಬಿಡುಗಡೆ ಮಾಡಿದೆ. ಇದು ದೇಶದ ಮೊದಲ ಉಪ-ವಲಯ ಪ್ರಾಯೋಗಿಕ ‘ಸೇವಾ ವಲಯದ ಉತ್ಪಾದನಾ ಸೂಚ್ಯಂಕ’ ಆಗಿದೆ. 2024-25ನೇ ಸಾಲನ್ನು ಮೂಲ ವರ್ಷವನ್ನಾಗಿ (Base Year) ಇಟ್ಟುಕೊಂಡು, ಮೊದಲ ಹಂತವಾಗಿ 2026ರ ಏಪ್ರಿಲ್ ತಿಂಗಳ ಇಎಸ್ಪಿ ದತ್ತಾಂಶಗಳನ್ನು 19 ಉಪ-ವಲಯಗಳಿಗೆ ಬಿಡುಗಡೆ ಮಾಡಲಾಗಿದೆ.
ಏನಿದು ‘ISP’ ಸೂಚ್ಯಂಕ?
ಮ್ಯಾನುಫ್ಯಾಕ್ಚರಿಂಗ್ ಸೆಕ್ಟರ್ನ ಬೆಳವಣಿಗೆ ಅಳೆಯಲು ಐಐಪಿ (ಕೈಗಾರಿಕಾ ಉತ್ಪಾದನಾ ಸೂಚ್ಯಂಕ) ಸೂಚ್ಯಂಕ ಇದೆ. ಭಾರತದ ಆರ್ಥಿಕತೆಗೆ ಅರ್ಧಕ್ಕಿಂತ ಹೆಚ್ಚು ಕೊಡುಗೆ ಸರ್ವಿಸ್ ಸೆಕ್ಟರ್ನಿಂದ ಬರುತ್ತದೆ. ಈ ಕ್ಷೇತ್ರದ ಬೆಳವಣಿಗೆಯನ್ನು ಹೆಚ್ಚು ನಿಖರವಾಗಿ ಅಳೆಯಲು ಈ ಹೊಸ ಸೂಚ್ಯಂಕ ರೂಪಿಸಲಾಗಿದೆ. ಪ್ರಸ್ತುತ ಬಿಡುಗಡೆ ಮಾಡಲಾದ 19 ಉಪ-ವಲಯಗಳು ಒಟ್ಟಾರೆ ಸೇವಾ ವಲಯದ ಸುಮಾರು ಶೇಕಡಾ 60 ರಷ್ಟು ಭಾಗವನ್ನು ಒಳಗೊಂಡಿವೆ. ಇನ್ನು ಮುಂದೆ ಪ್ರತಿ ತಿಂಗಳ 29 ರಂದು ಈ ಸೂಚ್ಯಂಕವನ್ನು ಸರಣಿಯಾಗಿ ಪ್ರಕಟಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
2025ರ ಮೇ ತಿಂಗಳಲ್ಲಿ ರಚಿಸಲಾಗಿದ್ದ ತಾಂತ್ರಿಕ ಸಲಹಾ ಸಮಿತಿಯ (TAC-ISP) ಮಾರ್ಗದರ್ಶನದನ್ವಯ ಜಿಎಸ್ಟಿ (GST) ದತ್ತಾಂಶ ಮತ್ತು ಇತರೆ ಆಡಳಿತಾತ್ಮಕ ದಾಖಲೆಗಳ ಆಧಾರದ ಮೇಲೆ ಕೇವಲ ‘ಔಪಚಾರಿಕ ಸೇವಾ ವಲಯವನ್ನು’ (Formal Sector) ಮಾತ್ರ ಈ ಸೂಚ್ಯಂಕಕ್ಕೆ ಪರಿಗಣಿಸಲಾಗಿದೆ.
ಇದನ್ನೂ ಓದಿ: ನಿಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ಗಳಿವೆ ಎಂದು ಹೀಗೆ ಕಂಡು ಹಿಡಿಯಿರಿ
2026ರ ಏಪ್ರಿಲ್ನಲ್ಲಿ ಐಎಸ್ಪಿ ಸೂಚ್ಯಂಕದ ಮುಖ್ಯಾಂಶಗಳು
ಕಳೆದ ವರ್ಷದ (ಏಪ್ರಿಲ್ 2025) ಪ್ರಾಯೋಗಿಕ ದತ್ತಾಂಶಕ್ಕೆ ಹೋಲಿಸಿದರೆ, ಏಪ್ರಿಲ್ 2026 ರಲ್ಲಿ ಭಾರತದ ಸೇವಾ ವಲಯವು ಬಲವಾದ ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟು 19 ಉಪ-ವಲಯಗಳ ಪೈಕಿ 14 ವಲಯಗಳು ಎರಡಂಕಿ (Double-digit) ಪ್ರಗತಿಯನ್ನು ಕಂಡಿವೆ.
ಅತಿ ಹೆಚ್ಚು ಬೆಳವಣಿಗೆ ಕಂಡ ವಲಯಗಳು: ವಸತಿ ಮತ್ತು ಆಹಾರ ಸೇವೆಗಳು (Accommodation and Food) ಶೇ. 37.2, ಚಿಲ್ಲರೆ ವ್ಯಾಪಾರ (Retail Trade) ಶೇ. 30.8, ಆಡಳಿತಾತ್ಮಕ ಮತ್ತು ಬೆಂಬಲ ಸೇವೆಗಳು ಶೇ. 28.7 ಹಾಗೂ ರಿಯಲ್ ಎಸ್ಟೇಟ್ ವಲಯವು ಶೇ. 27.7 ರಷ್ಟು ಭರ್ಜರಿ ಪ್ರಗತಿ ಸಾಧಿಸಿವೆ.
ಕುಸಿತ ಕಂಡ ವಲಯಗಳು: ವಾಯು ಸಾರಿಗೆ (Air Transport) ವಲಯವು ಶೇ. -13.9 ರಷ್ಟು ಮತ್ತು ರೈಲ್ವೆ ಸಾರಿಗೆಯು ಶೇ. -0.4 ರಷ್ಟು ಇಳಿಕೆ ದಾಖಲಿಸಿವೆ.
ಸೇವಾ ಕ್ಷೇತ್ರದ ವಿವಿಧ ಉಪ-ವಲಯಗಳ ಪ್ರಗತಿ (ಏಪ್ರಿಲ್ 2025 ಕ್ಕೆ ಹೋಲಿಕೆ)
ಇದನ್ನೂ ಓದಿ: ಹಾರ್ಮುಜ್ ಸಹವಾಸವೇ ಬೇಡ; ದೂರದಲ್ಲಿ ಬೇರೆಯೇ ಬಂದರು ಕಟ್ಟುತ್ತಿದೆ ಈ ಗಲ್ಫ್ ದೇಶ
ಈ ಐಎಸ್ಪಿ ಸೂಚ್ಯಂಕ ಏಕೆ ಮುಖ್ಯ?
ಇಲ್ಲಿಯವರೆಗೆ ಭಾರತದಲ್ಲಿ ಕೈಗಾರಿಕಾ ಪ್ರಗತಿಯನ್ನು ಅಳೆಯಲು ‘ಐಐಪಿ’ (IIP) ಸೂಚ್ಯಂಕ ಇತ್ತಾದರೂ, ಸೇವಾ ವಲಯದ ಅಲ್ಪಾವಧಿಯ ಚಲನವಲನಗಳನ್ನು ಮಾಸಿಕವಾಗಿ ನಿಖರವಾಗಿ ಅಳೆಯುವ ವ್ಯವಸ್ಥೆ ಇರಲಿಲ್ಲ. ಈ ಹೊಸ ಸೂಚ್ಯಂಕವು ದೇಶದ ಆರ್ಥಿಕತೆಯ ನಿಜವಾದ ಚಿತ್ರಣವನ್ನು ನೀಡಲು ಸಹಾಯ ಮಾಡುತ್ತದೆ. ಇದು ಸರ್ಕಾರದ ಆರ್ಥಿಕ ನೀತಿ ನಿರೂಪಣೆಗೆ, ಹೂಡಿಕೆದಾರರಿಗೆ ಮತ್ತು ಮಾರುಕಟ್ಟೆಯ ವಿಶ್ಲೇಷಣೆಗೆ ದಿಕ್ಸೂಚಿಯಾಗಲಿದೆ.
ಪ್ರಸ್ತುತ ಇದನ್ನು ಪ್ರಾಯೋಗಿಕ ಹಂತದಲ್ಲಿ (Experimental basis) ಬಿಡುಗಡೆ ಮಾಡಲಾಗಿದ್ದು, ದತ್ತಾಂಶಗಳ ಸ್ಥಿರತೆಯನ್ನು ಅಧ್ಯಯನ ಮಾಡಿದ ಬಳಿಕ ಒಟ್ಟಾರೆ ಸಮಗ್ರ ಜಾಗತಿಕ ಸೂಚ್ಯಂಕವನ್ನು ಹೊರತರಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On – 7:05 pm, Tue, 14 July 26